ಹೆಸ್ಕಾಂ: ಭೂಗತ ಕೇಬಲ್‌ ದೋಷ ಪತ್ತೆಗೆ ನೂತನ ವಾಹನ

| Published : Aug 28 2024, 12:53 AM IST / Updated: Aug 28 2024, 12:54 AM IST

ಸಾರಾಂಶ

11 ಕೆವಿ ಭೂಗತ ವಿದ್ಯುತ್ ಕೇಬಲ್‌ಗಳಲ್ಲಿ ದೋಷ ಕಂಡು ಹಿಡಿಯುವ ವಾಹನ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ್ದು, ಲಿನಿಕ್ಸ್ ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿದೆ. ಸಂಪೂರ್ಣ ಸುರಕ್ಷತೆಯಿಂದ ಕೂಡಿದ್ದು, ಇದರ ನಿರ್ವಹಣೆ ಸರಳವಾಗಿದೆ.

ಹುಬ್ಬಳ್ಳಿ:

ಹೆಸ್ಕಾಂ ವ್ಯಾಪ್ತಿಯಲ್ಲಿ 11 ಕೆವಿ ಭೂಗತ ವಿದ್ಯುತ್ ಕೇಬಲ್ ದೋಷ ಕಂಡು ಹಿಡಿಯುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ವಾಹನ ಬಂದಿದ್ದು, ವಾಹನಕ್ಕೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ಮಂಗಳವಾರ ಚಾಲನೆ ನೀಡಿದರು.

ಇಲ್ಲಿನ ತಬೀಬ್ ಲ್ಯಾಂಡ್‌ನಲ್ಲಿರುವ ಕಾರ್ಯನಿರ್ವಾಹಕ ಎಂಜಿನಿಯರ್, ಕಾರ್ಯ ಮತ್ತು ಪಾಲನಾ, ನಗರ ವಿಭಾಗ, ಹೆಸ್ಕಾಂ ಕಚೇರಿಯಲ್ಲಿ ನೂತನ ವಾಹನಕ್ಕೆ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದರು.

ಹುಬ್ಬಳ್ಳಿ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಯಪ್ರದಾ ಅವರು ನೂತನ ವಾಹನದ ವಿಶೇಷತೆ, ಅದರ ಕಾರ್ಯವಿಧಾನದ ಕುರಿತು ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಿದರು.

ಬಳಿಕ ಅಧಿಕಾರಿಗಳ ಸಭೆ ನಡೆಸಿದ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ, ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸುವುದು ಹೆಸ್ಕಾಂ ಮುಖ್ಯ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಈ ವೇಳೆ ಹೆಸ್ಕಾಂ ತಾಂತ್ರಿಕ ನಿರ್ದೇಶಕ ಜಗದೀಶ್ ಎಸ್., ಗ್ರಾಮೀಣ ವಿಭಾಗದ ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಕಿರಣಕುಮಾರ, ಎಂ.ಡಿ ಅವರ ತಾಂತ್ರಿಕ ಸಹಾಯಕ ಎಂ.ಬಿ. ಸುಣಗಾರ, ಯು.ಜಿ. ಕೇಬಲ್ ಎಇಇ ಮಮತಾ ಗುಡಿಮನಿ, ಜೆಇ ಎಂ.ಎಂ. ಭಜಂತ್ರಿ, ಶರತ್ ಹಾಗೂ ಹೆಸ್ಕಾಂ ಸಿಬ್ಬಂದಿ ಸೇರಿದಂತೆ ಅನೇಕರು ಹಾಜರಿದ್ದರು.

ನೂತನ ವಾಹನದ ವಿಶೇಷತೆ..

11 ಕೆವಿ ಭೂಗತ ವಿದ್ಯುತ್ ಕೇಬಲ್‌ಗಳಲ್ಲಿ ದೋಷ ಕಂಡು ಹಿಡಿಯುವ ವಾಹನ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ್ದು, ಲಿನಿಕ್ಸ್ ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿದೆ. ಸಂಪೂರ್ಣ ಸುರಕ್ಷತೆಯಿಂದ ಕೂಡಿದ್ದು, ಇದರ ನಿರ್ವಹಣೆ ಸರಳವಾಗಿದೆ. ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ 878 ಕಿಮೀ ನಷ್ಟು ಭೂಗತ ವಿದ್ಯುತ್ ಕೇಬಲ್ ಇದೆ. ಸದ್ಯ ನೂತನ ವಾಹನದ ಸಹಾಯದಿಂದ ಕಡಿಮೆ ಅವಧಿಯಲ್ಲೇ ದೋಷ ಪತ್ತೆ ಮಾಡಬಹುದು. ಕೇವಲ 10ರಿಂದ 15 ನಿಮಿಷಗಳಲ್ಲಿ ಭೂಮಿಯೊಳಗಿನ ವಿದ್ಯುತ್ ಕೇಬಲ್‌ನ ದೋಷವನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ. ಇದರಿಂದ ಸಮಯ ಹಾಗೂ ಶ್ರಮ ಕೂಡ ಉಳಿತಾಯವಾಗಿ, ಗ್ರಾಹಕರಿಗೆ ಅತಿ ಕಡಿಮೆ ಅವಧಿಯಲ್ಲಿ ಭೂಗತ ಕೇಬಲ್‌ನಲ್ಲಿನ ದೋಷ ಕಂಡು ಹಿಡಿದು ಸರಿಪಡಿಸಿ, ವಿದ್ಯುತ್ ಸರಬರಾಜು ಮಾಡಬಹುದಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.