ಅನಿಯಮಿತ ವಿದ್ಯುತ್ ಸರಬರಾಜು ಖಂಡಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ

| Published : May 23 2024, 01:00 AM IST / Updated: May 23 2024, 01:01 AM IST

ಅನಿಯಮಿತ ವಿದ್ಯುತ್ ಸರಬರಾಜು ಖಂಡಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅನಿಯಮಿತ ವಿದ್ಯುತ್ ಸರಬರಾಜು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಶಾಸಕ ವಿಠ್ಠಲ ಹಲಗೇಕರ ಸೂಚನೆ

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ಜಾಂಬೋಟಿ, ಕಣಕುಂಬಿ, ಬೈಲೂರು, ತೋರಾಳಿ, ಗೋಲ್ಯಾಳಿ ಸೇರಿದಂತೆ ಗುಡ್ಡಗಾಡು ಮತ್ತು ಅರಣ್ಯವನ್ನು ಸುತ್ತುವರೆದಿರುವ ಗ್ರಾಮೀಣ ಪ್ರದೇಶ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕಳೆದ 8-10 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ ಕಾರಣವಾಗಿದ್ದು, ಇದರಿಂದ ಜನ-ಜಾನುವಾರುಗಳಿಗೆ ಕುಡಿಯಲು ನೀರು, ಹಿಟ್ಟಿನ ಗಿರಣಿ, ಮೊಬೈಲ್ ಚಾರ್ಜರ್, ರಾತ್ರಿಯ ಹೊತ್ತಿನಲ್ಲಿ ವಿದ್ಯುತ್ ದೀಪಗಳಿಲ್ಲದೇ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಅವರು ಕಾನನದಂಚಿನಲ್ಲಿ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆ ನಿವಾರಣೆಯತ್ತ ನಿರ್ಲಕ್ಷಿಸಿದ್ದಾರೆ ಎಂದು ಆಗ್ರಹಿಸಿದ ತಾಲೂಕಿನ ಪಾರವಾಡ, ಕಣಕುಂಬಿ, ಚಿಕಲೆ, ಚಿಗುಳೆ, ಬೆಟಗೇರಿ, ತಳೇವಾಡಿ, ಚೋರ್ಲಾ, ಮಾನ್, ಸಡಾ, ಹುಳಂದ, ಚೌಕಿ, ಬೇಟಣೆ, ಹಂದಿಕೊಪ್ಪ, ಗೌಳಿವಾಡ, ಗೋಲ್ಯಾಳಿ, ತೋರಾಳಿ, ಅಮಟೆ, ಅಮಗಾಂವ, ಬೈಲೂರು, ದೇವಾಚಿಹಟ್ಟಿ ಹಾಗೂ ಸುತ್ತಲಿನ ವಿವಿಧ ಗ್ರಾಮಗಳ ಮಹಿಳೆಯರು ಮತ್ತು ಗ್ರಾಮಸ್ಥರು ಬುಧವಾರ ಪಟ್ಟಣದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಪಾರವಾಡ ಗ್ರಾಪಂ ಅಧ್ಯಕ್ಷ ಭಿಕಾಜಿ ಗಾವಡೆ, ಕಣಕುಂಬಿ ಗ್ರಾಪಂ ಅಧ್ಯಕ್ಷೆ ದೀಪ್ತಿ ದಿಲೀಪ ಗವಾಸ, ಮುಖಂಡರಾದ ಸಂಜಯ ಪಾಟೀಲ, ಸಂಜಯ ನಾಯ್ಕ, ಮಂಗೇಶ ನಾಯ್ಕ ನೇತೃತ್ವದಲ್ಲಿ ಕಣಕುಂಬಿ ಹಾಗೂ ಅಕ್ಕಪಕ್ಕದ ವಿವಿಧ ಗ್ರಾಮಗಳ ನೂರಾರು ಮಹಿಳೆಯರು ತಮ್ಮ ತಲೆ ಮೇಲೆ ಕೊಡ ಹೊತ್ತು ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.