ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಪಟ್ಟಣದ ಬಿಜಿಎಸ್ ವೃತ್ತದ ಬಳಿ ಒತ್ತುವರಿ ತೆರವುಗೊಳಿಸಿದ ಸರ್ಕಾರಿ ಜಾಗದಲ್ಲಿ ಹೈಟೆಕ್ ಸಾರ್ವಜನಿಕ ಸಮುದಾಯ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಈ ಮೊದಲು ಬಿಜಿಎಸ್ ವೃತ್ತದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿತ್ತಲ್ಲದೆ, ಸಾರ್ವಜನಿಕ ಶೌಚಾಲಯವು ಕಿರಿದಾದ ಜಾಗದಲ್ಲಿತ್ತು. ಇದರಿಂದ ಪ್ರಯಾಣಿಕರು ಮತ್ತು ನಾಗರಿಕರು ಶೌಚಾಲಯಕ್ಕೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿನಿತ್ಯ ಆಗಮಿಸುವ ಪ್ರಯಾಣಿಕರು ಹಾಗೂ ನಾಗರೀಕರ ಅನುಕೂಲಕ್ಕಾಗಿ ಸರ್ಕಾರಿ ಜಾಗದಲ್ಲಿ ಹೈಟೆಕ್ ಸಾರ್ವಜನಿಕ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದ್ದರು.ಆನಂತರ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮತ್ತು ವಿಪಕ್ಷ ನಾಯಕ ಸಿ.ಉಮೇಶ್ ರವರು ಖುದ್ಧಾಗಿ ಮುಂದೆ ನಿಂತು ಒತ್ತುವರಿಯಾಗಿದ್ದ ಸರ್ಕಾರಿ ಜಾಗ ಹಾಗೂ ಫುಟ್ ಪಾತ್ ಜಾಗವನ್ನು ತೆರವುಗೊಳಿಸಿದ್ದರು. ಈಗ ಹರಿಪ್ರಸಾದ್ ಮತ್ತು ಸಿ.ಉಮೇಶ್ ರವರು ಜಾಗ ಪರಿಶೀಲಿಸಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಿ.ಉಮೇಶ್ , ಸ್ವಚ್ಛ ಭಾರತ್ ಮಿಷನ್ - 02 ಯೋಜನೆ ಅಡಿಯಲ್ಲಿ 20 ಲಕ್ಷ ಹಾಗೂ ಪುರಸಭೆ ನಿಧಿಯಲ್ಲಿ 20 ಲಕ್ಷ ಸೇರಿ ಒಟ್ಟು 40 ಲಕ್ಷ ರುಪಾಯಿ ವೆಚ್ಚದಲ್ಲಿ ಹೈಟೆಕ್ ಸಾರ್ವಜನಿಕ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಶಾಸಕ ಬಾಲಕೃಷ್ಣ ರವರು ನುಡಿದಂತೆ ಶೌಚಾಲಯ ನಿರ್ಮಾಣ ಕಾರ್ಯ ಆರಂಭಗೊಂಡಿದೆ ಎಂದು ತಿಳಿಸಿದರು.ಅಧ್ಯಕ್ಷ ಹರಿಪ್ರಸಾದ್ ಮಾತನಾಡಿ, ಬಿಡದಿಯ ಬಿಜಿಎಸ್ ವೃತ್ತದಿಂದ ರೇಲ್ವೆ ನಿಲ್ದಾಣದವರೆಗೆ ತೆರವು ಮಾಡಿರುವ ಸರ್ಕಾರಿ ಹಾಗೂ ಫುಟ್ ಪಾತ್ ಜಾಗದ ಸರ್ವೆ ಕಾರ್ಯ ನಾಳೆ (ಏ.15) ನಡೆಯಲಿದೆ. ಕುಡಿಯುವ ನೀರು, ಗ್ಯಾಸ್ ಲೈನ್ , ಯುಜಿಡಿ ಹಾಗೂ ಚರಂಡಿ ನಿರ್ಮಾಣ ಸಂಬಂಧ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ರಮೇಶ್, ಎಂಜಿನಿಯರ್ ಶ್ಯಾಮ್ ಹಾಜರಿದ್ದರು.