ಧಾರವಾಡ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ದಾರಿ ಮಧ್ಯೆ, ಸಾರ್ವಜನಿಕ ಗ್ರಂಥಾಲಯ ಬಳಿ 1.6 ಎಕರೆ ಪ್ರದೇಶದಲ್ಲಿ ₹ 50 ಕೋಟಿ ವೆಚ್ಚದಲ್ಲಿ ಈ ಕ್ರೀಡಾ ಸಂಕೀರ್ಣ ಸಜ್ಜಾಗುತ್ತಿದೆ. ಈ ಜಾಗದಲ್ಲಿ ಸಾರ್ವಜನಿಕ ಈಜುಗೊಳವಿತ್ತು. ಅದನ್ನು 2016ರಲ್ಲಿ ಸಂಪೂರ್ಣ ತೆರವುಗೊಳಿಸಿ ಅಂತಾರಾಷ್ಟ್ರೀಯ ಮಟ್ಟದ ಈಜುಗೊಳ ನಿರ್ಮಿಸಲು 2018ರಲ್ಲಿ ಪ್ರಾರಂಭವಾದ ಯೋಜನೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈಜುಗೊಳ ಮಾತ್ರವಲ್ಲದೇ ಹಲವು ಕ್ರೀಡೆಗಳನ್ನು ಒಳಗೊಂಡ ಹೈಟೆಕ್ ಕ್ರೀಡಾ ಸಂಕೀರ್ಣವಾಗಿ ಬದಲಾಗಿದೆ.
ಬಸವರಾಜ ಹಿರೇಮಠ
ಧಾರವಾಡ:ಬರೋಬ್ಬರಿ 10 ವರ್ಷಗಳಿಂದ ನಿರ್ಮಿಸುತ್ತಿರುವ ಇಲ್ಲಿಯ ಹೈಟೆಕ್ ಮಾದರಿಯ ಕ್ರೀಡಾ ಸಂಕೀರ್ಣಕ್ಕೆ ಕೊನೆಗೂ ಉದ್ಘಾಟನೆಯ ಭಾಗ್ಯ ಬಂದಿದೆ. ಶೇ. 95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್-ಏಪ್ರಿಲ್‌ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಇದೆ.
ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ದಾರಿ ಮಧ್ಯೆ, ಸಾರ್ವಜನಿಕ ಗ್ರಂಥಾಲಯ ಬಳಿ 1.6 ಎಕರೆ ಪ್ರದೇಶದಲ್ಲಿ ₹ 50 ಕೋಟಿ ವೆಚ್ಚದಲ್ಲಿ ಈ ಕ್ರೀಡಾ ಸಂಕೀರ್ಣ ಸಜ್ಜಾಗುತ್ತಿದೆ. ಈ ಜಾಗದಲ್ಲಿ ಸಾರ್ವಜನಿಕ ಈಜುಗೊಳವಿತ್ತು. ಅದನ್ನು 2016ರಲ್ಲಿ ಸಂಪೂರ್ಣ ತೆರವುಗೊಳಿಸಿ ಅಂತಾರಾಷ್ಟ್ರೀಯ ಮಟ್ಟದ ಈಜುಗೊಳ ನಿರ್ಮಿಸಲು 2018ರಲ್ಲಿ ಪ್ರಾರಂಭವಾದ ಯೋಜನೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈಜುಗೊಳ ಮಾತ್ರವಲ್ಲದೇ ಹಲವು ಕ್ರೀಡೆಗಳನ್ನು ಒಳಗೊಂಡ ಹೈಟೆಕ್ ಕ್ರೀಡಾ ಸಂಕೀರ್ಣವಾಗಿ ಬದಲಾಗಿದೆ.ಇತ್ತೀಚೆಗೆ ಕಾಮಗಾರಿ ಪ್ರಗತಿ ಪರಿಶೀಲಿಸಿದ ಶಾಸಕ ಅರವಿಂದ್ ಬೆಲ್ಲದ, ಒಳಾಂಗಣ ಕ್ರೀಡಾಂಗಣವು ಬಹುತೇಕ ಸಿದ್ಧವಾಗಿದೆ ಮತ್ತು ಏಪ್ರಿಲ್ ವೇಳೆಗೆ ಒಲಿಂಪಿಕ್ ಗಾತ್ರದ ಈಜುಕೊಳ ಬಳಕೆಗೆ ಮುಕ್ತವಾಗಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಧಾರವಾಡದಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಹಲವು ಪ್ರಮುಖ ಸಂಸ್ಥೆ, ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಅಕಾಡೆಮಿಗಳಿದ್ದರೂ ಬಹುಕಾಲದಿಂದ ಸಮಗ್ರ ಬಹು-ಕ್ರೀಡಾ ಒಳಾಂಗಣ ಕ್ರೀಡಾಂಗಣದ ಕೊರತೆ ಹೊಂದಿತ್ತು, ವಿಶೇಷವಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳದ ಅಗತ್ಯತೆ ಇತ್ತು. ಇದೀಗ ದೀರ್ಘಕಾಲದಿಂದ ಕ್ರೀಡಾ ಸಂಕೀರ್ಣ ಲೋಕಾರ್ಪಣೆಯ ಹಂತಕ್ಕೆ ಬಂದಿದ್ದು, ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.
ಹತ್ತು ವರ್ಷಗಳಲ್ಲಿ ಹಲವಾರು ವಿಳಂಬ ಮತ್ತು ಹಿನ್ನಡೆಗೆ ಈ ಕ್ರೀಡಾ ಸಂಕೀರ್ಣ ಸಾಕ್ಷಿಯಾಗಿದೆ. ಆರಂಭದಲ್ಲಿ ಕೆಲವು ಒಳಾಂಗಣ ಸೌಲಭ್ಯ ಮಾತ್ರ ಹೊಂದಿದ ಈಜುಕೊಳವಾಗಿತ್ತು. ಆದರೆ, ಯೋಜನೆಯನ್ನು ಪೂರ್ಣ ಪ್ರಮಾಣದ ಬಹು-ಕ್ರೀಡಾ ಸಂಕೀರ್ಣವಾಗಿ ವಿಸ್ತರಿಸಲಾಯಿತು. ಹಣದ ಕೊರತೆಯಿಂದಾಗಿ ಒಂದು ಹಂತದಲ್ಲಿ ಕೆಲಸ ಸ್ಥಗಿತಗೊಂಡಿತು. ತದನಂತರ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯ ಮೂಲಕ ₹ 50 ಕೋಟಿ ಸಂಗ್ರಹಿಸಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ.ಈ ಕ್ರೀಡಾ ಸಂಕೀರ್ಣಕ್ಕೆ ಐಐಟಿ ದೆಹಲಿ ಮತ್ತು ಪ್ರತಿಷ್ಠಿತ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ತಾಂತ್ರಿಕ ಮಾರ್ಗದರ್ಶನ ನೀಡಿದೆ. ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ಕ್ರೀಡಾ-ನಿರ್ದಿಷ್ಟ ಅವಶ್ಯಕತೆ ಪೂರೈಸುವ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಯೋಜನೆಗೆ ಅಡಿಪಾಯ ಹಾಕಿದ್ದು, ಈಜುಕೊಳದಲ್ಲಿ ಮಕ್ಕಳು ಮತ್ತು ವಯಸ್ಕರಿಗೆ ಪ್ರತ್ಯೇಕ ಪೂಲ್ ಮತ್ತು ಬಹು ಒಳಾಂಗಣ ಕ್ರೀಡೆಗಳಿಗೆ ಸಾಕಷ್ಟು ಸ್ಥಳವಿದೆ. ಹೆಚ್ಚಿನ ರಚನೆಗಳನ್ನು ಆಧುನಿಕ ಉಕ್ಕಿನ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ವೀಕ್ಷಕ ಗ್ಯಾಲರಿ, ಕ್ರೀಡಾ ಸಲಕರಣೆಗಳ ಅಂಗಡಿ ಮತ್ತು ಕ್ರೀಡಾಪಟುಗಳಿಗೆ ಮೀಸಲಾದ ಕೊಠಡಿಗಳಂತಹ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ.
ಸಂಕೀರ್ಣದಲ್ಲಿ ಸೌಲಭ್ಯ:ಬಹುಉಪಯೋಗಿ ಕ್ರೀಡಾ ಕೇಂದ್ರವಾಗಿ ವಿನ್ಯಾಸಗೊಳಿಸಲಾದ ಜಿ+3 ಸಂಕೀರ್ಣವು ನೆಲ ಮಹಡಿಯಲ್ಲಿ ಕಾರು ಮತ್ತು ಬೈಕ್ ಪಾರ್ಕಿಂಗ್ ಸೌಲಭ್ಯವಿದೆ. ಮೇಲಿನ ಮಹಡಿಗಳಲ್ಲಿ ಕ್ಯಾಂಟೀನ್, ಕ್ರೀಡಾ ಸಲಕರಣೆಗಳ ಅಂಗಡಿ, ವೀಕ್ಷಕ ಗ್ಯಾಲರಿ, ಕಬಡ್ಡಿ ಕೋರ್ಟ್, ಬ್ಯಾಡ್ಮಿಂಟನ್ ಮತ್ತು ಜೂಡೋ ಹಾಲ್, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಜಿಮ್ ಮತ್ತು ತರಬೇತುದಾರರು ಮತ್ತು ವೈದ್ಯರಿಗೆ ಕೊಠಡಿಗಳು ಸೇರಿದಂತೆ ಇತರ ಸೌಲಭ್ಯಗಳಿವೆ.ಹತ್ತು ವರ್ಷಗಳಿಂದ ಈ ಈಜುಗೊಳಕ್ಕಾಗಿ ನಾವು ಕಾಯುತ್ತಿದ್ದೇವೆ. ಒಂದು ಯೋಜನೆ ಇಷ್ಟೊಂದು ಸುದೀರ್ಘ ಕಾಲ ತೆಗೆದುಕೊಂಡರೆ ಹೇಗೆ? ಕೊನೆಗೂ ಉದ್ಘಾಟನೆ ಆಗಲಿದೆ ಎಂದು ತಿಳಿದು ಸಂತಸವಾಗುತ್ತಿದೆ. ಧಾರವಾಡದಲ್ಲಿ ಹಲವು ಈಜುಪಟುಗಳಿದ್ದು, ಖಾಸಗಿ ಈಜುಗೊಳಗಳು ದುಬಾರಿಯಾಗಿದ್ದು, ಅಭ್ಯಾಸಕ್ಕೆ ತೊಂದರೆಯಾಗಿತ್ತು. ಜೊತೆಗೆ ಬೇರೆ ಬೇರೆ ಕ್ರೀಡಾ ಸೌಲಭ್ಯ ಇರುವುದು ಕ್ರೀಡಾಸಕ್ತರಿಗೆ ಈ ಬಾರಿಯ ಯುಗಾದಿ ಸಂತಸ ತರಲಿದೆ.
ಗುರುರಾಜ ಪಿಸೆ, ಕ್ರೀಡಾಸಕ್ತರು