ಕನ್ನಡಪ್ರಭ ವಾರ್ತೆ ಮದ್ದೂರು
ನಗರದ ಗುರುಶಾಂತಪ್ಪ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲು ಆರೋಗ್ಯ ಇಲಾಖೆಗೆ 30 ಕೋಟಿ ರು. ಅನುದಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ನಗರದ ಆಸ್ಪತ್ರೆ ಆವರಣದಲ್ಲಿ ಬುಧವಾರ 2.25 ಕೋಟಿ ರು.ಗಳ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಔಷಧ ವಿತರಣಾ ಕೊಠಡಿ ನಿರ್ಮಾಣ, ಅಡುಗೆ ಮನೆ, ಲಾಂಡ್ರಿ, ಆವರಣ, ಗೋಡೆ ನಿರ್ಮಾಣ ಹಾಗೂ ಹೈಟೆಕ್ ಶವಾಗಾರ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಈಗಾಗಲೇ ಸುಮಾರು 4 ರಿಂದ 5 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಕೇಂದ್ರ ಸೇರಿದಂತೆ ವೈದ್ಯರು ಹಾಗೂ ದಾದಿಯರ ವಸತಿ ಗೃಹಗಳ ನಿರ್ಮಾಣ ಸೇರಿದಂತೆ ಹಲವು ಉನ್ನತೀಕರಣ ಕಾಮಗಾರಿಗೆ 30 ಕೋಟಿ ರು. ಅನುದಾನ ನೀಡುವಂತೆ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಸರಿಪಡಿಸಲು ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಮದ್ದೂರಿನಲ್ಲಿ ಟ್ರಾಮಾ ಕೇರ್ ಕೇಂದ್ರವನ್ನು ಆರಂಭಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ತಾಲೂಕಿಗೆ ಇನ್ನೊಂದು ಸಮುದಾಯ ಆರೋಗ್ಯ ಕೇಂದ್ರವನ್ನು ಇಲಾಖೆಯಿಂದ ದೊರಕುವ ಸಾದ್ಯತೆಗಳಿದೆ ಎಂದರು.
ಈ ವೇಳೆ ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಎಂ.ಬಿ.ಸಚಿನ್, ಸಿದ್ದರಾಜು, ಬಸವರಾಜು, ಮುಖಂಡರಾದ ಎಂ.ಡಿ.ಮಹಾಲಿಂಗಯ್ಯ, ಆರಿಫ್, ಪ್ರಕಾಶ್, ವಿಜಯ್ ಕುಮಾರ್, ಅಪ್ಪೇಗೌಡ, ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಬಾಲಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.