ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನಿವೇಶನ ವಿಚಾರವಾಗಿ ಪಟ್ಟಣದ ಜಯನಗರ ಬಡಾವಣೆ ನಿವಾಸಿಗಳ ನ್ಯಾಯ ಬದ್ಧ ಹೋರಾಟಕ್ಕೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ನಿವಾಸಿಗಳು ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಬೃಹತ್ ಮೆರವಣಿಗೆ ನಡೆಸಿದರು.

ಪ್ರತಿಭಟನೆ ನಡೆಸಿ ತಹಸೀಲ್ದಾರ್ ಡಾ.ಅಶೋಕ್ ಅವರಿಗೆ ಮನವಿ ಸಲ್ಲಿಸಿದ ನಿವಾಸಿಗಳು, ಸರ್ಕಾರದ ಪ್ರತಿಯೊಂದು ಆದೇಶಗಳು ಬಡಾವಣೆ ನಿವಾಸಿಗಳ ಪರ ಇದ್ದರೂ ನಿವಾಸಿಗಳಿಗೆ ತೊಂದರೆ ನೀಡುತ್ತಿರುವ ಕುಳುವಾಡಿ ವಂಶಸ್ಥರ ಬಂಧುಗಳ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಹೊಸ ಹೊಳಲು ಗ್ರಾಮದ ಸರ್ವೇ ನಂಬರ್ 141ರಲ್ಲಿ ಒಂದು ಎಕರೆ 31 ಗುಂಟೆ ಕುಳುವಾಡಿ ಇನಾಂ ಭೂಮಿಯನ್ನು ಆರ್ಥಿಕವಾಗಿ ಹಿಂದುಳಿ ಪರಿಶಿಷ್ಟ ಜಾತಿಯ ಜನರಿಗೆ ನಿವೇಶನ ಕೊಡುವ ಉದ್ದೇಶದಿಂದ ಅಂದಿನ ತಾಲೂಕು ಅಭಿವೃದ್ಧಿ ಮಂಡಳಿ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಭೂಸ್ವಾಧೀನದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪೈಕಿ 9 ಜನ ಒಂದೊಂದು ನಿವೇಶನವನ್ನು ಉಚಿತವಾಗಿ ಕೊಟ್ಟು, ಉಳಿಕೆ ನಿವೇಶನಗಳನ್ನು ಸರ್ಕಾರದ ನಿಯಮಾನುಸಾರ ನಿವೇಶನ ರಹಿತ ಪರಿಶಿಷ್ಟ ಜಾತಿವರಿಗೆ ವಿತರಿಸಿ ಹಕ್ಕುಪತ್ರ ನೀಡಿದ್ದಾರೆ.

ಎಲ್ಲಾ ಕಡತಗಳನ್ನು ಪಟ್ಟಣ ಪಂಚಾಯ್ತಿ ಕಚೇರಿಗೆ ವರ್ಗಾಯಿಸಿ ಈ ದಾಖಲೆಗಳ ಆಧಾರದ ಮೇಲೆ ಕೆಲವು ನಿವೇಶನದಾರರು ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಕ್ರಯಕ್ಕೆ ಪಡೆದ ಕೆಲವರು ಮನೆ ಕಟ್ಟಿಕೊಳ್ಳಲು ನಿವೇಶನಗಳಿಗೆ ಖಾತೆ ಇ- ಸ್ವತ್ತು ಮಾಡಿಕೊಳ್ಳಲು ಕಂದಾಯ ಹಣ ಕಟ್ಟಿ ಪುರಸಭೆಯಿಂದ ಲೈಸನ್ಸ್ ಪಡೆದು ಸುಮಾರು 26 ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸವಾಗಿದ್ದಾರೆ ಎಂದರು.


ಉಳಿಕೆ 14 ನಿವೇಶನಗಳನ್ನು ಕ್ರಯಕ್ಕೆ ಪಡೆದವರು ತಮ್ಮ ಹೆಸರಿಗೆ ನಿವೇಶನ ಖಾತೆ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ. ಈ ಮಧ್ಯೆ ಕುಳುವಾಡಿಕೆ ವಂಶಸ್ಥರು ಮನೆ ಕಟ್ಟುವವರಿಗೆ ಅಡಚಣೆ ಮಾಡಿದ್ದರಿಂದ ನಿವೇಶನದಾರರು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿ ದಾವೆಯು ವಾದಿಯ ಪರವಾಗಿದೆ. ಸರ್ಕಾರದ ಪ್ರತಿಯೊಂದು ಆದೇಶಗಳು ಬಡಾವಣೆ ನಿವಾಸಿಗಳ ಪರ ಇದ್ದರೂ ನಿವಾಸಿಗಳಿಗೆ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕ ಎಸ್ಸಿ-ಎಸ್ಟಿ ಆಯೋಗಕ್ಕೆ 26 ಮನೆ ಹಾಗೂ 14 ನಿವೇಶನಗಳು ಕಾನೂನು ರೀತಿ ಖಾತೆ, ಇ-ಸ್ವತ್ತು ಸ್ವಾಧೀನ ದಾಖಲೆಗಳು ಇದ್ದರೂ ಸಹ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವ ಪುರಸಭೆ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಡಾ.ಅಶೋಕ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತನಾಯಕ ಮುದುಗೆರೆ ಎಂ.ವಿ.ರಾಜೇಗೌಡ, ದಲಿತ ಮುಖಂಡ ಬಸ್ತಿರಂಗಪ್ಪ, ಚೆಲುವಯ್ಯ, ಅಂಚನಹಳ್ಳಿ ಸುಬ್ಬಣ್ಣ, ಬಂಡಿಹೊಳೆ ರಮೇಶ್, ಚಂದ್ರಕಲಾ, ಕೃಷ್ಣಮೂರ್ತಿ, ಪ್ರೇಮಮ್ಮ, ಸೋಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.