** (ಭಾಗ-4)

- - -

- ಜಿಮ್‌-ಫಿಟ್ನೆಸ್ ಟ್ರೈನರ್ಸ್‌, ಮಾಲೀಕರ ಆರೋಗ್ಯ, ರಕ್ತ ಮಾದರಿ ಪರೀಕ್ಷೆಗೆ ಸಲಹೆ - ಪಾಲಿಕೆ ಟ್ರೇಡ್ ಲೈಸೆನ್ಸ್‌, ಸಮೀಪದ ಠಾಣೆಯಿಂದ ಒಪ್ಪಿಗೆ ಪತ್ರ ಕಡ್ಡಾಯಗೊಳಿಸಿ

- ಮಹಿಳೆಯರಿಗೆ ಸರ್ಟಿಫೈಡ್ ಮಹಿಳಾ ಟ್ರೈನರ್‌ಗಳಿಂದಲೇ ತರಬೇತಿಗೆ ಕ್ರಮವಾಗಲಿ

- - -


ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳ ಚೇಂಜಿಂಗ್ ರೂಂ, ಲಾಕರ್ಸ್‌-ವಾಶ್‌ ರೂಂಗಳಲ್ಲಿಟ್ಟ ಹಿಡನ್ ಕ್ಯಾಮೆರಾ, ಅಲ್ಲಿ ಉತ್ತೇಜನಾ ಮಾತ್ರೆಗಳ ಕವರ್‌, ಸ್ಟಿರಾಯ್ಡ್‌ನ ಸಿರಿಂಜ್‌ಗಳು, ಅಲ್ಲಿಗೆ ಫಿಟ್ನೆಸ್‌ಗೆಂದು ಬಂದ ಮಹಿಳೆಯರಿಗೆ ಏಕವಚನ, ಕೇವಲವಾದ ಪದ ಬಳಕೆ, ಅವಹೇಳನ, ದೇಹದ ಬಗ್ಗೆ ಮತ್ತೊಬ್ಬರ ಮುಂದೆ ವ್ಯಂಗ್ಯವಾಡುವ ಘಟನೆಗಳು ಜಿಮ್ ಮತ್ತು ಫಿಟ್ನೆಸ್ ಕ್ಲಬ್‌ಗಳಲ್ಲಿ ಹೊಸದೇನೂ ಅಲ್ಲ. ಆದರೆ, ಇದನ್ನು ಸೂಕ್ಷ್ಮವಾಗಿ ಗಮನಿಸಿದ ಎಷ್ಟೋ ಜನ ಅವತ್ತೇ ಫಿಟ್ನೆಸ್‌ ಅನ್ನೋ ಭ್ರಮೆಯಿಂದ ಹೊರಬಂದ ನಿದರ್ಶನಗಳಿವೆ.

ದಾವಣಗೆರೆಯಲ್ಲಿ 50ಕ್ಕೂ ಹೆಚ್ಚು ಜಿಮ್ ಮತ್ತು ಫಿಟ್ನೆಸ್ ಕ್ಲಬ್‌ಗಳಿವೆ. ಇದರಲ್ಲಿ ಬಹುತೇಕ ಪುರುಷರು- ಮಹಿಳೆಯರಿಗೆ ಪ್ರತ್ಯೇಕ ವಿಭಾಗ, ಸಮಯ ಅಂತೇನೂ ಮಾಡಿಲ್ಲ. ಪ್ರತಿ ತಿಂಗಳು ಶುಲ್ಕ ಕಟ್ಟಿಸಿಕೊಳ್ಳದೆ, ವರ್ಷಕ್ಕೆ ಇಂತಿಷ್ಟು ಎಂಬುದಾಗಿ ದುಬಾರಿ ಶುಲ್ಕ ವಸೂಲಿ ಮಾಡುವ ಕಾರಣಕ್ಕೆ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಜಿಮ್ ಮತ್ತು ಫಿಟ್ನೆಸ್ ಕ್ಲಬ್ ಪಾಶಕ್ಕೆ ಸಿಲುಕಿ ಬದುಕಿಗೆ ಸಂಕಷ್ಟ ತಂದುಕೊಳ್ಳುತ್ತಿರುವುದು ರಹಸ್ಯವಾಗೇನೂ ಉಳಿದೂ ಇಲ್ಲ.

ಫಿಟ್ನೆಸ್ ಕ್ಲಬ್‌, ಜಿಮ್‌ಗಳ ಪೈಕಿ ಕೆಲವು ಪ್ರಭಾವಿಗಳ ಕುಟುಂಬದ ಒಡೆತನದ ಜಾಗದಲ್ಲಿವೆ. ಮತ್ತೆ ಕೆಲವು ಪ್ರಭಾವಿಗಳ ಕೃಪಾಶೀರ್ವಾದ ಇದ್ದವರದ್ದಾಗಿವೆ. ಮತ್ತೆ ಕೆಲವು ಮೃತ ರಾಜಕಾರಣಿ ತಮ್ಮ ಹತ್ತಿರದ ಸಂಬಂಧಿಯೆಂದು ಜಿಮ್, ಫಿಟ್ನೆಸ್ ಕ್ಲಬ್ ನಡೆಸುವುದು ಇಲ್ಲಿ ಕಂಡುಬರುತ್ತಿದೆ. ಮತ್ತೆ ಕೆಲವರು ಪ್ರಭಾವಿ ನಾಯಕರು, ರಾಜಕಾರಣಿಗಳು, ಯುವ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡು, ವಾಟ್ಸಪ್ ಡಿಪಿ, ಸ್ಟೇಟರ್, ಟ್ವೀಟರ್‌, ಇನ್ಸ್ಟಾಗ್ರಾಂಗೆ ಹಾಕಿಕೊಂಡು, ರೀಲ್ಸ್ ಮಾಡಿದವರೂ ಇದ್ದಾರೆ.

ಯಾವುದೇ ಜಿಮ್, ಫಿಟ್ನೆಸ್ ಕ್ಲಬ್‌ನ ಸಿಸಿ ಕ್ಯಾಮೆರಾ, ಹಿಡನ್ ಕ್ಯಾಮೆರಾದ ಸಂಪರ್ಕ ಅವುಗಳ ಮಾಲೀಕರ ಮೊಬೈಲ್‌ಗಿರುತ್ತದೆ. ಹಾಗೆಯೇ ಜಿಮ್‌, ಫಿಟ್ನೆಸ್ ಕ್ಲಬ್‌ಗೆ ಬಂದು ಹೋಗುವ ಮಹಿಳೆಯರಿಗೆ ಯಾಕೆ ಮೇಡಮ್ ತಡವಾಗಿ ಬಂದಿರೆ, ಯಾಕೆ ಮೇಡಮ್ ಬೇಗ ಹೋಗಿದ್ದೀರಿ ಅಂತೆಲ್ಲಾ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳ ಮಾಲೀಕರ ಮಗ ವಾಟ್ಸಪ್ ಕರೆ ಮಾಡಿ, ವಿಚಾರಿಸುತ್ತಿದ್ದಂತೆಯೇ ಜಾಗೃತರಾದ ಅದೆಷ್ಟೋ ಜನರು ಅವತ್ತೇ ಜಿಮ್‌, ಫಿಟ್ನೆಸ್ ಅನ್ನೋದಕ್ಕೆ ಗುಡ್‌ ಬೈ ಹೇಳಿದ್ದಿದೆ.

ಸ್ವತಃ ಆ ವ್ಯಕ್ತಿ ಅಲ್ಲಿ ಇರದಿದ್ದರೂ ತಮ್ಮ ಬಗ್ಗೆ ವಿಚಾರಿಸುವುದು, ತಮ್ಮ ಮೇಲೆ ಎಲ್ಲೋ ಕುಳಿತು, ಚಲನವಲನ ವೀಕ್ಷಣೆ ಮಾಡುತ್ತಾರೆಂದರೆ ಅದೆಷ್ಟರ ಮಟ್ಟಿಗೆ ಹೆಣ್ಣುಮಕ್ಕಳಿಗೆ ಸುರಕ್ಷತೆ ಇದೆಯೆಂದು ಪರಸ್ಪರ ಮಾತನಾಡಿಕೊಂಡು ಎಷ್ಟೋ ಜನರ ಫಿಟ್ನೆಸ್ ಸಹವಾಸವೇ ಬೇಡವೆಂದು ವಾಕಿಂಗ್, ಯೋಗದ ಮೊರೆ ಹೋಗಿದ್ದಾರೆ. ಸಿಸಿ ಕ್ಯಾಮೆರಾಗಳು, ಹಿಡನ್ ಕ್ಯಾಮೆರಾಗಳ ನೇರ ವೀಕ್ಷಣೆ ಅವಕಾಶ ಅವುಗಳ ಮಾಲೀಕರು, ಮಾಲೀಕ ಮತ್ತು ಟೈನರ್ ಆದವರ ಬಳಿ ಇರುತ್ತದೆ. ಇದೆಲ್ಲ ಸೂಕ್ಷ್ಮ ಅರಿತ ಎಷ್ಟೋ ಜನ ಹಣ ಹೋದರೆ ಹೋಗಲಿ, ಇಂತಹವುಗಳ ಸಹವಾಸವೇ ಬೇಡವೆಂದು ಸುಮ್ಮನಾಗಿದ್ದಾರೆ.

ಪ್ರತಿಯೊಂದಕ್ಕೂ ಟ್ರೇಡ್ ಲೈಸೆನ್ಸ್ ಮಾಡಿಸಬೇಕೆಂಬ ದಾವಣಗೆರೆ ಮಹಾ ನಗರಪಾಲಿಕೆ ಅಧಿಕಾರಿಗಳು ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳ ಟ್ರೇಡ್ ಲೈಸೆನ್ಸ್ ಮಾಡಿಸಿದ್ದಾರಾ ಎಂಬ ಬಗ್ಗೆ ಪರಿಶೀಲನೆ ಆಗಬೇಕು. ಜಿಮ್ ಮತ್ತು ಫಿಟ್ನೆಸ್ ಕ್ಲಬ್‌ ಇಂಚಿಂಚೂ ಬಿಡದೇ ತಪಾಸಣೆಯಾಗಬೇಕು. ಕೆಲವು ಕಡೆ ಟ್ರೈನರ್‌ಗಳು ಮಾದಕ ಪದಾರ್ಥ, ಮತ್ತು ಬರಿಸುವ ನೀರನ್ನು ಕುಡಿಸಿ, ಅಮಾಯಕ ಹೆಣ್ಣುಮಕ್ಕಳಿಗೆ ಯಾಮಾರಿಸಿರುವ ನಿದರ್ಶನಗ‍ಳಿವೆ. ಗಾಂಜಾ ಮತ್ತು ಮಾದಕ ವಸ್ತುಗಳನ್ನು ಬಳಸಿ, ದುರ್ಬಳಕೆ ಮಾಡಿಕೊಂಡ ಆರೋಪಗಳೂ ಇವೆ.

ಸುಮೋಟೋ ಕೇಸ್ ದಾಖಲಿಸಲಾಗದ ಪೊಲೀಸ್ ಇಲಾಖೆ ಇಂತಹ ಅನುಮಾನಗಳ ಮೇಲಾದರೂ ಜಿಮ್‌ಗಳು, ಫಿಟ್ನೆಸ್ ಸೆಂಟರ್‌ಗಳ ಮಾಲೀಕರು, ಟ್ರೈನರ್, ಪರ್ಸನಲ್ ಟ್ರೈನರ್‌ಗಳ ಮೊಬೈಲ್‌, ಸೋಷಿಯಲ್ ಮೀಡಿಯಾ ತಪಾಸಣೆ ಮಾಡಬೇಕು, ಇಂತಹವರ ವೈದ್ಯಕೀಯ ಪರೀಕ್ಷೆ ಮಾಡಿಸಬೇಕೆಂಬ ಒತ್ತಾಯ ಅನೇಕರಿಂದ ವ್ಯಕ್ತವಾಗುತ್ತಿದೆ. ದಾವಣಗೆರೆಯಲ್ಲಿ ಬೆಳಕಿಗೆ ಬಾರದ ಇನ್ನೂ ಅದೆಷ್ಟೋ ಪ್ರಕರಣಗಳೂ ಇವೆ. ಪರ ರಾಜ್ಯ, ಪರ ಊರು, ಜಿಲ್ಲೆಯ ವಿದ್ಯಾರ್ಥಿನಿಯರೂ ಇಂತಹವರಿಗೆ ಬಲಿಯಾಗುತ್ತಿದ್ದಾರೆ. ಮದ್ಯ ಕುಡಿಸಿ, ಮಾದಕ ವಸ್ತು, ಗಾಂಜಾ ಸೇವಿಸುವಂತೆ ಮಾಡಿ, ದುರ್ಬಳಕೆ ಮಾಡಿಕೊಂಡು, ಸಮಾಜದ ಎದುರು ಸಜ್ಜನರ ಮುಖವಾಡ ಧರಿಸಿದ ಗುಂಪು ಸಹ ಕ್ರಿಯಾಶೀಲವಾಗಿದೆಯೆಂಬ ದೂರು ಕೇಳಿಬರುತ್ತಿವೆ!!

- - -

* ಸುಮೋಟೋ ಕೇಸ್ ಇಲ್ಲ, ಇದನ್ನಾದ್ರೂ ಮಾಡ್ಲಿ 1. ಪ್ರತಿ ಜಿಮ್‌, ಫಿಟ್ನೆಸ್ ಸೆಂಟರ್ ಗೆ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್, ಸಂಬಂಧಿಸಿದ ಪೊಲೀಸ್ ಠಾಣೆಯಿಂದ ಅನುಮತಿ ಪತ್ರ ಕಡ್ಡಾಯಗೊಳಿಸಬೇಕು.

2. ಜಿಮ್, ಫಿಟ್ನೆಸ್ ಸೆಂಟರ್ ಮಾಲೀಕ, ಪಾಲುದಾರರು, ಟ್ರೈನರ್, ಪರ್ಸನಲ್ ಟ್ರೈನರ್ ಅನಿಸಿಕೊಂಡರವರ ಮೊಬೈಲ್ ನಂಬರ್ ಸಮೇತ ಸಮೀಪದ ಠಾಣೆಗೆ ನೀಡಬೇಕು. ಅಂತಹವರ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಇಲಾಖೆ ಹದ್ದಿನ ಕಣ್ಣಿಡಬೇಕು.

3. ಮಹಿಳೆಯರಿಗೆ ಕಡ್ಡಾಯವಾಗಿ ಸರ್ಟಿಫೈಡ್ ಆದ ಮಹಿಳಾ ತರಬೇತುದಾರರಿಂದಲೇ ತರಬೇತಿ ನೀಡಬೇಕು. ಮಹಿಳೆಯರಿಗಾಗಿ ಪ್ರತ್ಯೇಕ ಸಮಯ ನಿಗದಿಪಡಿಸಬೇಕು.

4. ಪ್ರತಿ ಜಿಮ್, ಫಿಟ್ನೆಸ್ ಸೆಂಟರ್‌ನಲ್ಲಿ ಮಹಿಳೆಯರು, ಟ್ರೈನರ್‌ಗಳಿಗೆ ಗೌರವಯುತವಾದ ಡ್ರೆಸ್ ಕೋಡ್ ಕಡ್ಡಾಯಾಗಿ ಜಾರಿಗೊಳಿಸಬೇಕು. ಪೊಲೀಸ್ ಇಲಾಖೆ ನಿರಂತರ ನಿಗಾ ವಹಿಸಬೇಕು.

5. ಜಿಮ್, ಫಿಟ್ನೆಸ್ ಸೆಂಟರ್‌ನ್ನು ಪೊಲೀಸ್ ಇಲಾಖೆಯ ತಂತ್ರಜ್ಞರಿಂದ ನಿಯಮಿತವಾಗಿ ತಪಾಸಣೆ ಮಾಡಬೇಕು. ಅಲ್ಲಿನ ಟ್ರೈನರ್‌ಗಳ ಆರೋಗ್ಯ ಮತ್ತು ರಕ್ತ ಮಾದರಿಯನ್ನು ನಿಯಮಿತವಾಗಿ ತಪಾಸಣೆ ಮಾಡಿಸಬೇಕು.

6. ಕಾಕದೃಷ್ಟಿ ಬೀರುತ್ತಾ, ಹೆಣ್ಣುಮಕ್ಕಳನ್ನು ನೋಡುತ್ತ, ದುರ್ನಡತೆ ತೋರುವಂತಹ ಟ್ರೈನರ್‌, ಪುರುಷರು, ಮಾಲೀಕರ ವಿರುದ್ಧ ಕ್ರಮ ಕೈಗೊಂಡು, ಅಲ್ಲಿಂದ ಹೊರಹಾಕಬೇಕು.

7. ಜಿಮ್, ಫಿಟ್ನೆಸ್‌ಗೆಂದು ಬರುವ ಮಹಿಳೆಯರೊಂದಿಗೆ ಕುಟುಂಬದ ಓರ್ವ ಸದಸ್ಯರು ಹಾಜರಿರಬೇಕು, ಹೆತ್ತವರಾದರೂ ಸರಿ, ಪತಿ ಅಥವಾ ಸಹೋದರರು ಇರುವಂತೆ ಕ್ರಮ ಕೈಗೊಳ್ಳಬೇಕು.

8. ಯಾವುದೇ ಜಿಮ್ ಬಗ್ಗೆ ದೂರು ವ್ಯಕ್ತವಾದರೆ ಅಂತಹ ಮಹಿಳೆಯರ ನೆರವಿಗಾಗಿ ಪೊಲೀಸ್ ಇಲಾಖೆ ಅಥವಾ ಸಮೀಪದ ಪೊಲೀಸ್ ಠಾಣೆಯಲ್ಲಿ ಸಹಾಯವಾಣಿ ಸ್ಥಾಪಿಸಬೇಕು.

- - -

(ಸಾಂದರ್ಭಿಕ ಚಿತ್ರ).