ಸಾರಾಂಶ
ಸಾವಿರಾರು ವರ್ಷಗಳ ಹಿಂದಿನ ಭಾರತದ ಸುವರ್ಣಯುಗದ ದಿನಗಳು ಮುಂದಿನ ಕೆಲ ವರ್ಷಗಳಲ್ಲಿ ಮರುಕಳಿಸುವ ವಿಶ್ವಾಸವಿದ್ದು ದೇಶ ವಿಶ್ವಗುರುವಾಗಲಿದೆ.
ಕುಮಟಾ:
ಶಿಕ್ಷಣ ವ್ಯವಸ್ಥೆಯಲ್ಲಿ ಸತ್ಯವಾದ ಇತಿಹಾಸ ಮರೆಮಾಚಿದ್ದು ಸತ್ಯವನ್ನು ತಿಳಿದುಕೊಳ್ಳಬೇಕಿದೆ. ಇದೀಗ ಜನರಿಗೆ ಅದರ ಅರಿವು ಬರತೊಡಗಿದೆ ಎಂದು ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಮಟಾ ತಾಲೂಕಿನ ಇತಿಹಾಸ ಕುರಿತು ಆಯೋಜಿಸಿದ್ದ ಜಿಲ್ಲಾಮಟ್ಟದ ಇತಿಹಾಸ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.ಸಾವಿರಾರು ವರ್ಷಗಳ ಹಿಂದಿನ ಭಾರತದ ಸುವರ್ಣಯುಗದ ದಿನಗಳು ಮುಂದಿನ ಕೆಲ ವರ್ಷಗಳಲ್ಲಿ ಮರುಕಳಿಸುವ ವಿಶ್ವಾಸವಿದ್ದು ದೇಶ ವಿಶ್ವಗುರುವಾಗಲಿದೆ ಎಂದ ಅವರು, ಶಿಕ್ಷಣದಲ್ಲಿ ಇತಿಹಾಸಕ್ಕೆ ಅತ್ಯಂತ ಮಹತ್ವವಿದೆ. ಹಾಗೆಯೇ ಭಾಷಾ ಅಂದಾಭಿಮಾನ ತೊರೆದು ಸ್ಥಳೀಯ ಭಾಷೆ, ದೇಶ ಭಾಷೆ (ಹಿಂದಿ), ಇಂಗ್ಲಿಷ್ ಮತ್ತು ಆಯಾ ಶಾಲೆಗಳು ಆಯ್ಕೆಮಾಡುವ ಭಾಷೆಗೆ ಅವಕಾಶ ದೊರೆಯುವಂತಾಗಬೇಕು. ಇದರಿಂದ ಓದಿನ, ಅರಿವಿನ ವಿಸ್ತಾರಕ್ಕೆ ಅನುಕೂಲವಾಗಲಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ, ತಾಲೂಕಿನ ಇತಿಹಾಸದ ಕುರಿತು ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮನೋಭಾವನೆ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಿರ್ಜಾನ ಕೋಟೆ, ಗೋಕರ್ಣ, ಧಾರೇಶ್ವರ ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ಸ್ಥಳಗಳಿವೆ. ಇವುಗಳ ಕುರಿತು ವಿಶೇಷ ಅಧ್ಯಯನ ಮಾಡುವ ಅವಶ್ಯಕತೆ ಇದೆ. ಇತಿಹಾಸದ ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಪ್ರವೃತ್ತಿ ಬೆಳೆಯಬೇಕು. ಅಂದಾಗ ಮಾತ್ರ ಹೊಸ ಸಂಗತಿಗಳು ಬೆಳಕಿಗೆ ಬರಲು ಸಾಧ್ಯ. ಇತಿಹಾಸ ಅರಿತವರು ಮಾತ್ರ ಹೊಸ ಇತಿಹಾಸ ನಿರ್ಮಿಸಲು ಸಾಧ್ಯ ಎಂದರು.ಪ್ರಾಚಾರ್ಯರಾದ ವಿಜಯಾ ಡಿ. ನಾಯ್ಕ, ನಿವೃತ್ತ ಪ್ರಾಧ್ಯಾಪಕ ಎಂ.ಜಿ. ನಾಯ್ಕ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರಮೋದ ಹೆಗಡೆ, ಉಪನ್ಯಾಸಕರಾದ ಪ್ರೊ. ಐ.ಕೆ. ನಾಯ್ಕ, ಪ್ರೊ. ವಿನಾಯಕ ನಾಯಕ, ಡಾ. ಗೀತಾ ಬಿ. ನಾಯಕ, ಗೋಪಾಲಕೃಷ್ಣ ರಾಯ್ಕರ, ಸಂದೇಶ ನಾಯ್ಕ ಇದ್ದರು. ಬಳಿಕ ವಿವಿಧ ಸಂಪನ್ಮೂಲ ವ್ಯಕ್ತಿಗಳು ತಾಲೂಕಿನ ಇತಿಹಾಸದ ಕುರಿತು ಪ್ರಬಂಧ ಮಂಡಿಸಿದರು.