ಕಲಾದಗಿ-ಕಾತರಕಿ ಬ್ಯಾರೇಜ್ ತಲುಪಿದ ಹಿಡಕಲ್ ಡ್ಯಾಂ ನೀರು

| Published : Mar 01 2024, 02:16 AM IST

ಸಾರಾಂಶ

ಜನ, ಜಾನುವಾರುಗಳಿಗೆ ಕುಡಿಯಲೆಂದು ಹಿಡಕಲ್ ಡ್ಯಾಂನಿಂದ ಬಿಟ್ಟಿದ್ದ ೨ ಟಿಎಂಸಿ ನೀರು ಮಂಗಳವಾರ ರಾತ್ರಿ ಹೊತ್ತಿಗೆ ಕಲಾದಗಿ-ಕಾತರಕಿ ಬ್ಯಾರೇಜ್‌ ತಲುಪಿದ್ದು, ಈ ಭಾಗದ ಜನರು, ಜಾನುವಾರು ಮಾಲೀಕರು, ಕುರಿಗಾಹಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಜನ, ಜಾನುವಾರುಗಳಿಗೆ ಕುಡಿಯಲೆಂದು ಹಿಡಕಲ್ ಡ್ಯಾಂನಿಂದ ಬಿಟ್ಟಿದ್ದ ೨ ಟಿಎಂಸಿ ನೀರು ಮಂಗಳವಾರ ರಾತ್ರಿ ಹೊತ್ತಿಗೆ ಕಲಾದಗಿ-ಕಾತರಕಿ ಬ್ಯಾರೇಜ್‌ ತಲುಪಿದ್ದು, ಈ ಭಾಗದ ಜನರು, ಜಾನುವಾರು ಮಾಲೀಕರು, ಕುರಿಗಾಹಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ತಿಂಗಳಲ್ಲಿಯೇ ಕಲಾದಗಿ-ಕಾತರಕಿ ಬ್ಯಾರೇಜ್ ಸೇರಿದಂತೆ ಈ ಭಾಗದಲ್ಲಿನ ಘಟಪ್ರಭೆಯ ಒಡಲು ಖಾಲಿಯಾಗಿ ಭಣಗುಡುತ್ತಿತ್ತು. ನದಿಯ ಒಡಲು ಬರಿದಾಗಿದ್ದರಿಂದ ಆತಂಕಗೊಂಡಿದ್ದ ಜನರು, ಜಾನುವಾರುಗಳ ಮಾಲೀಕರು ನದಿಗೆ ಎಂದು ನೀರು ಬರುತ್ತದೋ ಎಂಬ ಚಾಲಕ ಪಕ್ಷಿಯಂತೆ ಕಾಯುತ್ತಿದ್ದರು. ವಾರದ ಹಿಂದೆಯೇ ಹಿಡಕಲ್ ಡ್ಯಾಂನಿಂದ ಬಿಟ್ಟಿದ್ದ ೨ ಟಿಎಂಸಿಯಷ್ಟು ನೀರು ತೆಗ್ಗುಗಳನ್ನೆಲ್ಲ ತುಂಬಿಕೊಂಡು ಮಂಗಳವಾರ ರಾತ್ರಿ ಹೊತ್ತಿಗೆ ಕಲಾದಗಿ-ಕಾತರಕಿ ಬ್ಯಾರೇಜ್‌ ತಲುಪಿದೆ. ರಾತ್ರಿ ಹೊತ್ತಿಗೆ ಬ್ಯಾರೇಜ್‌ನತ್ತ ಬಂದ ನೀರು, ಗುರುವಾರ ಸಂಜೆ ಹೊತ್ತಿಗೆ ಮೂರುವರೆ ಲೇಯರ್‌ ತುಂಬಿಕೊಂಡಿದೆ, ೫ ಮೀಟರ್ ನಷ್ಟು ತುಂಬಿಕೊಳ್ಳಬೇಕಾದ ಬ್ಯಾರೇಜ್ ಗುರುವಾರ ಸಂಜೆವರೆಗೂ ೩.೩ ಮೀಟರ್ ಮಾತ್ರ ತುಂಬಿಕೊಂಡು ಬ್ಯಾರೇಜ್‌ನ ಶೇಖರಣೆಯ ಶೇ.೬೫ ಸಂಗ್ರಹಗೊಂಡಿತ್ತು ಎನ್ನುತ್ತವೆ ಸಣ್ಣ ನೀರಾವರಿ ಇಲಾಖೆ ಮೂಲಗಳು.

ಕಡಿಮೆಯಾದ ನೀರಿನ ಹರಿವು ?: ಸಂಜೆಯಾದರೂ ಬ್ಯಾರೇಜ್‌ನಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಮುಂಜಾನೆಯಷ್ಟೇ ಇರುವುದು ಕಂಡುಬಂತು., ಮೇಲಿನಿಂದ ಬರುತ್ತಿದ್ದ ನೀರಿನ ಹರಿವು ಬಾಹಶಃ ಕಡಿಮೆಗೊಂಡಿದ್ದು ಇದಕ್ಕೆ ಕಾರಣ ಎನ್ನಲಾಗಿದ್ದು, ಕಾತರಕಿ ಬ್ಯಾರೇಜ್ ತುಂಬಿಕೊಂಡು ಮುಂದೆ ಬನ್ನಿದಿನ್ನಿ ಬ್ಯಾರೇಜ್‌ ವರೆಗೂ ನೀರನ್ನು ಮುಟ್ಟಿಸಬೇಕೆಂಬ ಪ್ರಯತ್ನ ಸಫಲವಾಗುವ ಸಾಧ್ಯತೆ ಬಗ್ಗೆ ಅನುಮಾನ ಉಂಟಾಗಿದೆ.

ಅಧಿಕಾರಿಗಳಿಂದ ಪರಿಶೀಲನೆ: ಬುಧವಾರ ರಾತ್ರಿ ಬ್ಯಾರೇಜ್ ಬಳಿ ಬಂದಿದ್ದ ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ರವಣ ನಾಯಕ, ತಹಸೀಲ್ದಾರ್‌ ಅಮರೇಶ ನಾಯಕ ನೀರಿನ ಹರಿವು ಪರಿಶೀಲಿಸಿದರು.