ಹಿಡಕಲ್‌ ಡ್ಯಾಮ್‌ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ, ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಮಾಸ್ತಿಹೊಳಿ ಸೇರಿದಂತೆ ಸುತ್ತಮುತ್ತಲಿನ 24 ಗ್ರಾಮಗಳ ರೈತರು ಜಾನುವಾರುಗಳೊಂದಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಳಗಾವಿ ಉತ್ತರ ವಲಯ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರವೂ ಮುಂದುವರಿದಿದ್ದು, 3ನೇ ದಿನಕ್ಕೆ ಕಾಲಿಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿಡಕಲ್‌ ಡ್ಯಾಮ್‌ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ, ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಮಾಸ್ತಿಹೊಳಿ ಸೇರಿದಂತೆ ಸುತ್ತಮುತ್ತಲಿನ 24 ಗ್ರಾಮಗಳ ರೈತರು ಜಾನುವಾರುಗಳೊಂದಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಳಗಾವಿ ಉತ್ತರ ವಲಯ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರವೂ ಮುಂದುವರಿದಿದ್ದು, 3ನೇ ದಿನಕ್ಕೆ ಕಾಲಿಟ್ಟಿದೆ.

ಧರಣಿ ನಿರತ ರೈತರು ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ನೀರಾವರಿ ನಿಗಮದ ಕಚೇರಿ ಆವರಣ ಇದೀಗ ಅಕ್ಷರಶಃ ದನದ ಕೊಟ್ಟಿಗೆಯಾಗಿ ಪರಿಣಮಿಸಿದೆ. ಕಳೆದ ಮೂರು ದಿನಗಳಿಂದ ರೈತರು ನಡೆಸುತ್ತಿರುವ ಸತ್ಯಾಗ್ರಹದ ಸ್ಥಳದಲ್ಲೇ ಒಲೆ ಹೊತ್ತಿಸಿ ಅಡುಗೆ ಮಾಡಲಾಗುತ್ತಿದೆ. ಜಾನುವಾರುಗಳನ್ನು ಅಲ್ಲಿಯೇ ಕಟ್ಟಲಾಗಿದೆ. ಅಲ್ಲದೇ,ಅಹೋರಾತ್ರಿ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಈ ವೇಳೆ ಮಾತನಾಡಿದ ರೈತ ಮುಖಂಡ ಬಾಳೇಶ ಮಾವನೂರೆ, ನಾವು ಕಳೆದ ಐದಾರು ವರ್ಷಗಳಲ್ಲಿ ಸುಮಾರು ಹತ್ತರಿಂದ ಹನ್ನೊಂದು ಬಾರಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಳಗಾವಿ ಉತ್ತರ ವಲಯ ಕಚೇರಿ ಎದುರು ಧರಣಿ ನಡೆಸಿದ್ದೇವೆ. ಮಹಿಳೆಯರು ಸಹಿತ ಧರಣಿ ನಡೆಸುತ್ತಿರುವುದು ಇದು ಎರಡನೇ ಬಾರಿ. ಆದರೆ ನಮ್ಮ ಬೇಡಿಕೆ, ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಚಿವರೂ ಆದ ಸತೀಶ ಜಾರಕಿಹೊಳಿ ಅವರಿಗೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿರುವುದು ಗಮನಕ್ಕೆ ಬಂದ ತಕ್ಷಣ, ದಾಖಲೆಗಳನ್ನು ತಿದ್ದುಪಡಿ ಮಾಡಿ ಸರಿಯಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ಸಚಿವರ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದು ಮಾವನೂರೆ ದೂರಿದರು.ಸಚಿವರ ಸೂಚನೆ ನಂತರವೂ ಬರೋಬ್ಬರಿ ಎರಡು ತಿಂಗಳ ಕಾಲಾವಕಾಶ ತೆಗೆದುಕೊಂಡ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಮತ್ತೆ ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನೇ ಸೃಷ್ಟಿಸಿ ಕಳುಹಿಸುವ ಮೂಲಕ ರೈತರಿಗೆ ಹಾಗೂ ಸರ್ಕಾರಕ್ಕೆ ದ್ರೋಹ ಬಗೆದಿದ್ದಾರೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ನಡೆದ ಸಭೆಯಲ್ಲಿ, ತಮ್ಮ ಬಳಿ ಸಂತ್ರಸ್ತ ರೈತರ ಯಾವುದೇ ಮೂಲ ದಾಖಲೆಗಳಿಲ್ಲ ಎಂಬುದನ್ನು ನೀರಾವರಿ ನಿಗಮದ ಅಧಿಕಾರಿಗಳು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇಷ್ಟು ದೊಡ್ಡ ಯೋಜನೆಯಲ್ಲಿ ರೈತರ ಮೂಲ ದಾಖಲೆಗಳನ್ನೇ ಕಳೆದುಕೊಂಡಿರುವುದು ಇವರ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.ಮಾಡಿದ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಅಧಿಕಾರಿಗಳು ಈಗ ಮತ್ತೆ ಎರಡು ದಿನಗಳ ಕಾಲಾವಕಾಶ ಕೇಳುತ್ತಿದ್ದಾರೆ. ಆದರೆ ಇವರ ಯಾವುದೇ ನಾಟಕಗಳನ್ನು ನಾವು ಇನ್ನು ಮುಂದೆ ಒಪ್ಪಲು ಸಿದ್ಧರಿಲ್ಲ. ಕಳೆದ 50 ವರ್ಷಗಳಿಂದ ನಮಗೆ ಮೋಸ ಮಾಡುತ್ತಾ ಬಂದಿರುವ ಇವರ ಭರವಸೆಗಳ ಮೇಲೆ ನಂಬಿಕೆ ಹೊರಟುಹೋಗಿದೆ. ನಮ್ಮ ನ್ಯಾಯಯುತ ಬೇಡಿಕೆಗಳು ಸಂಪೂರ್ಣವಾಗಿ ಈಡೇರುವವರೆಗೂ ನಾನು ಮತ್ತು ನಮ್ಮ ರೈತರು ಇಲ್ಲಿಂದ ಒಂದಿಂಚೂ ಕದಲುವುದಿಲ್ಲ ಎಂದು ರೈತ ಮಹಿಳೆಯರು ಎಚ್ಚರಿಸಿದರು.ಬಿಡದಿ ಮಾದರಿಯಲ್ಲೇ ನಮಗೂ ಪರಿಹಾರ ನೀಡಲಿ: ಹಿಡಕಲ್ ಡ್ಯಾಮ್ ಯೋಜನೆಗಾಗಿ ನಮ್ಮ ಪೂರ್ವಜರು ಜಮೀನು ಕೊಟ್ಟು 50 ವರ್ಷಗಳೇ ಕಳೆದಿವೆ. ಅಂದಿನಿಂದ ಇಂದಿನವರೆಗೆ ಸರ್ಕಾರ ನಮಗೆ ಬಿಡಿಗಾಸು ನೀಡಿ ಸತಾಯಿಸುತ್ತಿದೆ. ಬಿಡದಿಯಲ್ಲಿ ಒಂದು ಎಕರೆ ಜಮೀನಿಗೆ ಎರಡೂವರೆ ಕೋಟಿ ರೂಪಾಯಿ ನೀಡಿದರೂ ಅಲ್ಲಿನ ಜನ ಬಿಡುತ್ತಿಲ್ಲ. ಸರ್ಕಾರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡ ಎಲ್ಲ ರೈತರೂ ಒಂದೇ. ಬೆಂಗಳೂರು ಭಾಗದ ರೈತರಿಗೆ ಒಂದು ನ್ಯಾಯ, ಉತ್ತರ ಕರ್ನಾಟಕದ ರೈತರಿಗೆ ಮತ್ತೊಂದು ನ್ಯಾಯವೇ ಎಂದು ಪ್ರಶ್ನಿಸಿದ ಅವರು, ಬಿಡದಿಯಲ್ಲಿ ನೀಡುತ್ತಿರುವ ಮಾದರಿಯಲ್ಲೇ ನಮಗೂ ಪ್ರತಿ ಎಕರೆಗೆ ಎರಡೂವರೆ ಕೋಟಿ ರುಪಾಯಿ ಪರಿಹಾರವನ್ನು ತಕ್ಷಣ ಘೋಷಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಆಗಲಿ ಅಥವಾ ಪೊಲೀಸ್ ಕಮಿಷನರ್ ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಪೊಲೀಸ್ ಬಲ ಬಳಸಿ ಹತ್ತಿಕ್ಕಲು ಪ್ರಯತ್ನಿಸಿದರೆ ನಾವು ಅದಕ್ಕೆ ಹೆದರುವುದಿಲ್ಲ. ಒಂದು ವೇಳೆ ನಮ್ಮನ್ನು ಇಲ್ಲಿಂದ ಜಬರ್ದಸ್ತ ಆಗಿ ಎಬ್ಬಿಸಲು ನೋಡಿದರೆ, ಪ್ರತಿದಿನ ನೂರಕ್ಕೂ ಹೆಚ್ಚು ಹೊಸ ರೈತರು ಈ ಹೋರಾಟಕ್ಕೆ ಬಂದು ಸೇರಿಕೊಳ್ಳಲಿದ್ದಾರೆ. ನಾವು ನಮ್ಮ ಹಕ್ಕುಗಳಿಗಾಗಿ, 50 ವರ್ಷಗಳ ಅನ್ಯಾಯದ ವಿರುದ್ಧ ಜಾನುವಾರುಗಳೊಂದಿಗೆ ಶಾಂತಿಯುತವಾಗಿ ಧರಣಿ ಕುಳಿತಿದ್ದೇವೆ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಪರಿಹಾರ ನೀಡುವ ಬದಲು, ಅಧಿಕಾರ ಚಲಾಯಿಸಿ ನಮ್ಮ ಧ್ವನಿಯನ್ನು ಅಡಗಿಸಲು ಮುಂದಾದರೆ ಹೋರಾಟ ಮತ್ತಷ್ಟು ಉಗ್ರರೂಪ ತಾಳಲಿದೆ ಎಂದು ಎಚ್ಚರಿಸಿದರು.ಜಿಲ್ಲಾಧಿಕಾರಿ ಸಮ್ಮುಖದಲ್ಲೇ ತಪ್ಪುಗಳನ್ನು ಒಪ್ಪಿಕೊಂಡರೂ, ರೈತರ ಸಮಸ್ಯೆಗೆ ಸ್ಪಂದಿಸದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿರುವ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ ಹಾಗೂ ಮುಖ್ಯ ಇಂಜಿನಿಯರ್ ಬಿ.ಆರ್. ರಾಠೋಡ ಅವರನ್ನು ಸರ್ಕಾರ ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಇದೇ ವೇಳೆ ಸರ್ಕಾರಕ್ಕೆ ಒತ್ತಾಯಿಸಿ ರೈತರು ಘೋಷಣೆಗಳನ್ನು ಕೂಗಿದರು.