ಶಿಕ್ಷಣದ ಬುನಾದಿ ಗಟ್ಟಿ ಇದ್ದರೆ ಉನ್ನತ ಸಾಧನೆ: ಡಾ.ಪ್ರಭಾ ಮಲ್ಲಿಕಾರ್ಜುನ್‌

| Published : Jul 12 2025, 12:32 AM IST

ಶಿಕ್ಷಣದ ಬುನಾದಿ ಗಟ್ಟಿ ಇದ್ದರೆ ಉನ್ನತ ಸಾಧನೆ: ಡಾ.ಪ್ರಭಾ ಮಲ್ಲಿಕಾರ್ಜುನ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಹಂತದ ಶಿಕ್ಷಣದ ಬುನಾದಿಯ ಬೇರುಗಳು ಗಟ್ಟಿಯಾಗಿದ್ದಾಗ ಮಾತ್ರ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಲಾ ಹಂತದ ಶಿಕ್ಷಣದ ಬುನಾದಿಯ ಬೇರುಗಳು ಗಟ್ಟಿಯಾಗಿದ್ದಾಗ ಮಾತ್ರ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ತಿಳಿಸಿದರು.

ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಪರಿಸರ ದಿನ ಹಾಗೂ ವನ ಮಹೋತ್ಸವದಲ್ಲಿ ಶಾಲಾ ಮಕ್ಕಳೊಂದಿಗೆ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯಾವುದೇ ವಿದ್ಯಾರ್ಥಿ ಭದ್ರ ಜೀವನಕ್ಕೆ ಶಾಲಾ ಶಿಕ್ಷಣವೇ ಬುನಾದಿ ಎಂದರು.

ಜೀವನದಲ್ಲಿ ಮೌಲ್ಯಗಳಿದ್ದಾಗ ಮಾತ್ರ ಸರಿಯಾದ ನಿಲುವು, ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಅಂತಹ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದರೆ ಉತ್ತಮ ಶಿಕ್ಷಣ ಅತ್ಯಗತ್ಯ. ನಮ್ಮ ಬೇರುಗಳು ಆಳವಾಗಿ, ಗಟ್ಟಿಯಾಗಿದ್ದರೆ ಯಾವುದೇ ಸಮಸ್ಯೆ ಎದುರಾದರೂ ಭಯಪಡುವ ಅವಶ್ಯಕತೆ ಇಲ್ಲ. ಹಾಗಾಗಿ ಮಕ್ಕಳು ಶಾಲಾ ಹಂತದಿಂದಲೇ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಮೂಡಿಸುವ ಕೆಲಸ ಶಾಲೆಗಳಲ್ಲಿ, ಮನೆಗಳಿಂದಲೇ ಆಗಬೇಕು. ಉತ್ತಮವಾಗಿ ಓದುವ ಅಭ್ಯಾಸ ಹಾಗೂ ಹವ್ಯಾಸವೂ ಒಳ್ಳೆಯ ವಿದ್ಯಾರ್ಥಿಗಳ ಲಕ್ಷಣಗಳಾಗಿವೆ. ಸಮಾಜವೇ ನಮಗೆ ಗುರುವಿದ್ದಂತೆ. ಸಮಾಜ, ನಮ್ಮ ಸುತ್ತಮುತ್ತಲಿನ ಪರಿಸರ, ಜನರಿಂದಲೇ ನಾವು ನೋಡಿ, ಕಲಿಯುವ ಸಾಕಷ್ಟು ಪಾಠಗಳೂ ಇರುತ್ತವೆ. ಜೀವನದಲ್ಲಿ ಗುರುಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ವಿವರಿಸಿದರು.

ಸರಿ, ತಪ್ಪಿನ ಬಗ್ಗೆ ತಿಳಿಸಿ, ಸನ್ಮಾರ್ಗ ತೋರುವ ಎಲ್ಲವೂ ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ಸ್ಪೂರ್ತಿಯಾಗುವ ಎಲ್ಲರು ಗುರುವೇ ಆಗಿರುತ್ತಾರೆ. ಹಾಗಾಗಿ ಎಲ್ಲರನ್ನೂ ಗೌರವಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಅಂತಹ ಗುರಿ ಸಾಧನೆಗೆ ನಿರಂತರ ಪ್ರಯತ್ನಶೀಲರಾಗಬೇಕು. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಗಿಟ್ಟೆ ಮಾಧವ್ ವಿಠಲ್ ರಾವ್, ಪಾಲಿಕೆ ಆಯುಕ್ತರಾದ ರೇಣುಕಾ, ಕಕ್ಕರಗೊಳ್ಳ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು, ಗ್ರಾಮದ ಹಿರಿಯ ಮುಖಂಡರಾದ ಕೆ.ಜಿ.ಬಸವನಗೌಡ್ರು, ಗ್ರಾಪಂ ಅಧ್ಯಕ್ಷೆ ಸಿ.ಆಶಾ, ಉಪಾಧ್ಯಕ್ಷ ಎಸ್.ಗುತ್ಯಪ್ಪ, ಶಾಂತರಾಜ, ಷಾ ಗ್ರೂಪ್ ಆಫ್ ಕಂಪನೀಸ್‌ನ ಎಂ.ನಂದನ ಕುಮಾರ, ಸೈಯದ್ ಅಸ್ಲಂ, ಬೋಧಕರು, ಶಿಕ್ಷಕ-ಶಿಕ್ಷಕಿಯರು, ಮಕ್ಕಳು, ಪಾಲಕರು, ಗ್ರಾಮಸ್ಥರು ಇದ್ದರು.

ಮಕ್ಕಳಿಗೆ ಟಿಪ್ಪಣಿ ಪುಸ್ತಕ, ಬಟ್ಟೆ ಬ್ಯಾಗ್ ಹಾಗೂ ಸಸಿ ವಿತರಿಸಲಾಯಿತು. ಪ್ಲಾಸ್ಟಿಕ್ ನಿಷೇಧ ಕುರಿತು ಭಿತ್ತಿ ಪತ್ರ ಅನಾವರಣ ಮಾಡಲಾಯಿತು. ಇದಕ್ಕೂ ಮುನ್ನ 2023-24ನೇ ಸಾಲಿನ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌ನಿಂದ ಸಿ.ಎಸ್.ಆರ್ ನಿಧಿಯಡಿ ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 15 ಲಕ್ಷ ರು. ವೆಚ್ಚದ ಕೊಠಡಿ ನಿರ್ಮಾಣ ಕಾಮಗಾರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರು.

ಸರ್ಕಾರಿ ಶಾಲೆಗಳ ಉಳಿವಿಗೆ ಮತ್ತು ಅಭಿವೃದ್ಧಿಗೆ ಆಯಾ ಗ್ರಾಮಸ್ಥರು, ಭಾಗದ ಮುಖಂಡರು, ಹಳೆಯ ವಿದ್ಯಾರ್ಥಿಗಳು, ಉಳ್ಳವರು ಕೈಲಾದ ನೆರವಿನ ಹಸ್ತ ಚಾಚಬೇಕು. ಅದೇ ರೀತಿ ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನನ್ನ ಒಂದು ತಿಂಗಳ ವೇತನವನ್ನು ನೀಡುತ್ತಿದ್ದೇನೆ.

ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.