ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಅಭೂತಪೂರ್ವ ‘ಅಭಿಮಾನೋತ್ಸವ’ ಕಾರ್ಯಕ್ರಮ ರಾಜ್ಯ ರಾಜಕಾರಣದ ದಿಕ್ಸೂಚಿಯಾಗುವ ನಿರೀಕ್ಷೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಅಭೂತಪೂರ್ವ ‘ಅಭಿಮಾನೋತ್ಸವ’ ಕಾರ್ಯಕ್ರಮ ರಾಜ್ಯ ರಾಜಕಾರಣದ ದಿಕ್ಸೂಚಿಯಾಗುವ ನಿರೀಕ್ಷೆಯಿದೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಗದ್ದುಗೆ ಹಿಡಿದ ಬೆನ್ನಲ್ಲೇ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಲ್ಲಿಂದ ನೇರವಾಗಿ ಕರ್ನಾಟಕಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಡಿಯೂರಪ್ಪ ಹಾಗೂ ಅವರ ಪುತ್ರರೂ ಆಗಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೆನ್ನಿಗೆ ಹೈಕಮಾಂಡ್ ಇದೆ ಎಂಬ ಸಂದೇಶ ರವಾನಿಸಿದರು.

ಚುನಾವಣೆಗೆ ಸಿದ್ಧತೆ:

‘ರಾಜಕೀಯ ಚಾಣಕ್ಯ’ ಎಂದೇ ಕರೆಸಿಕೊಳ್ಳುವ ಅಮಿತ್ ಶಾ ಅವರು ಚುನಾವಣೆ ನಡೆಯುವ ರಾಜ್ಯದಲ್ಲಿ ಒಂದೆರಡು ವರ್ಷಗಳ ಮೊದಲೇ ಸದ್ದಿಲ್ಲದೆ ತಯಾರಿ ಆರಂಭಿಸುತ್ತಾರೆ. ಇನ್ನು ಎರಡು ವರ್ಷಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯೂ ಎದುರಾಗಲಿದೆ. ಹೀಗಾಗಿ, ಈ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತು ಕಾರ್ಯಕ್ರಮದಲ್ಲಿನ ಲಕ್ಷಾಂತರ ಜನರನ್ನು ನೋಡುವ ಮೂಲಕ ಅಮಿತ್ ಶಾ ಅವರು ಚುನಾವಣೆ ಸಿದ್ಧತೆಯನ್ನೂ ಆರಂಭಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಲ್ಲದೆ, ಈ ಅಭಿಮಾನೋತ್ಸವ ವಿಜಯೇಂದ್ರ ಅವರ ಕೈಯನ್ನೂ ಬಲಪಡಿಸಿದಂತಾಗಿದ್ದು, ಅವರ ಸಂಘಟನಾ ಸಾಮರ್ಥ್ಯವೂ ಹೈಕಮಾಂಡ್ ಗಮನಕ್ಕೆ ಬಂದಂತಾಗಿದೆ.

ಬಿಎಸ್‌ವೈ ಬೆಂಬಲಿಗರಿಗೆ ಸಂತಸ:

ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಯಡಿಯೂರಪ್ಪ ಅವರನ್ನು ಕೊಂಡಾಡಿದ್ದು ವಿಶೇಷವಾಗಿತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿ.ಎಸ್‌.ಯಡಿಯೂರಪ್ಪ ಕಾರಣ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರ ದಾಖಲೆ ಬರೆಯುವಾಗ ಯಡಿಯೂರಪ್ಪ ಅವರ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ಬರೆಯಲಾಗುತ್ತದೆ. ಯಡಿಯೂರಪ್ಪ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಸಂಘರ್ಷಗಳ ನಡುವೆ ದಕ್ಷಿಣ ಭಾರತದ ಬಿಜೆಪಿಯ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಯಡಿಯೂರಪ್ಪನಂಥ ಮತ್ತೊಬ್ಬ ನಾಯಕನಿಲ್ಲ ಎಂದು ಹಾಡಿಹೊಗಳಿದರು.

ಇದೇ ವೇಳೆ ಪ್ರಧಾನಿ ಮೋದಿ ಅವರು ಸುದೀರ್ಘವಾದ ಸಂದೇಶವೊಂದನ್ನು ರವಾನಿಸಿ, ಯಡಿಯೂರಪ್ಪ ಅವರ ಈ ಐವತ್ತು ವರ್ಷದ ಪಯಣವು ಬದ್ಧತೆ, ಹೋರಾಟ, ತ್ಯಾಗ ಮತ್ತು ಜನಸೇವೆಯ ಕಥೆಯಾಗಿದೆ. ಇದು ಕೇವಲ ಕರ್ನಾಟಕದ ಜನರಿಗೆ ಸಂಭ್ರಮದ ಕ್ಷಣವಲ್ಲ, ದೇಶದಾದ್ಯಂತದ ಅನೇಕ ಪಕ್ಷ ಕಾರ್ಯಕರ್ತರಿಗೆ ಪ್ರೇರಣೆ ಮೂಲವೂ ಆಗಿದೆ ಎಂದು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿರುವುದು ಯಡಿಯೂರಪ್ಪ ಮತ್ತವರ ಬೆಂಬಲಿಗರಲ್ಲಿ ಅಪಾರ ಸಂತಸ ತಂದಿದೆ.