- ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ಸೋಲಿಗೆ ಸಂಚು: ಡಿ.ಬಸವರಾಜ, ಚಮನ್ ಸಾಬ್ ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮತ್ತು ವೈರಲ್ ಆಡಿಯೋದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಝೆಡ್. ಜಮೀರ್ ಅಹಮ್ಮದ್ ಖಾನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಎಐಸಿಸಿ ಹಾಗೂ ಕೆಪಿಸಿಸಿ ನಾಯಕರಿಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ದಕ್ಷಿಣದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ವಿರುದ್ಧ ಕಾಂಗ್ರೆಸ್ ಸರ್ಕಾರದ ಮಾಜಿ ಸಚಿವ ಬಿ.ಝೆಡ್. ಜಮೀರ್ ಅಹಮ್ಮದ್ ಖಾನ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ಈಗ ಜಗಜ್ಜಾಹೀರಾಗಿದೆ. ಈ ಹಿನ್ನೆಲೆ ಜಮೀರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ಎಐಸಿಸಿ- ಕೆಪಿಸಿಸಿ ವರಿಷ್ಠರಿಗೆ ಕಳಿಸಿದ ಇ-ಮೇಲ್‌ನಲ್ಲಿ ಮನವಿ ಮಾಡಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆಡಿಯೋ ಕ್ಲಿಪ್‌ನಲ್ಲಿ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ದಾವಣಗೆರೆ ದಕ್ಷಿಣ ಕ್ಷೇತ್ರದ ತಮ್ಮ ಬೆಂಬಲಿಗರೊಬ್ಬರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಅಭ್ಯರ್ಥಿಗೆ ಮುಸ್ಲಿಮರ ಮತಗಳು ಬೀಳಬಾರದು. ಕಾಂಗ್ರೆಸ್ ಓಟುಗಳು ಮೈನಸ್ ಆಗಬೇಕೆಂಬುದಾಗಿ ನೇರವಾಗಿ ಸೂಚನೆ ನೀಡಿರುವುದು, ಕಾಂಗ್ರೆಸ್ ಬದಲಿಗೆ ಪಕ್ಷೇತರರು ಅಥವಾ ಇತರೆ ಸಂಘಟನೆಗಳ ಕುಕ್ಕರ್ ಗುರುತಿನ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಅಲ್ಪಸಂಖ್ಯಾತ ಸಮುದಾಯವನ್ನು ಜಮೀರ್ ಪ್ರಚೋದಿಸಿದ್ದಾರೆ ಎಂದು ಹೇಳಿದ್ದಾರೆ. ಪಕ್ಷದ ಹಿರಿಯ ನಾಯಕರಾಗಿ, ಜವಾಬ್ದಾರಿಯುತ ಸಚಿವರಾಗಿ, ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ವೇಳೆ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಗೆ ಸಂಚು ರೂಪಿಸಿರುವುದು ತಳಮಟ್ಟದ ಕಾರ್ಯಕರ್ತರಲ್ಲಿ ತೀವ್ರ ನಿರಾಶೆ ಮತ್ತು ಆಕ್ರೋಶ ಉಂಟುಮಾಡಿದೆ. ಇದು ಕಾಂಗ್ರೆಸ್ ಪಕ್ಷದ ಶಿಸ್ತು ಮತ್ತು ಸಿದ್ಧಾಂತಕ್ಕೆ ಬಗೆದ ದ್ರೋಹ. ಈ ವಿಚಾರವಾಗಿ ಎಐಸಿಸಿ, ಕೆಪಿಸಿಸಿ ನಾಯಕರು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ವೈರಲ್ ಆಡಿಯೋ ಸಂಭಾಷಣೆಯ ಸತ್ಯಾಸತ್ಯತೆ ಪರಿಶೀಲಿಸಿ, ಪಕ್ಷದ ಘನತೆಗೆ ಧಕ್ಕೆ ತಂದ ಮತ್ತು ಆಂತರಿಕವಾಗಿ ವಿಧ್ವಂಸಕ ಕೃತ್ಯ ಎಸಗಿದ ಜಮೀರ್ ಅಹಮ್ಮದ್ ಖಾನ್ ವಿರುದ್ಧ ತಕ್ಷಣವೇ ಶಿಸ್ತು ಸಮಿತಿ ಮೂಲಕ ಕಾನೂನು ಮತ್ತು ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಕೆ.ಸಿ. ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೇವಾಲಾ, ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ಶಾಸಕಾಂಗ ನಾಯಕ ಡಿ.ಕೆ. ಶಿವಕುಮಾರಗೆ ಕಳಿಸಿದ ಇ-ಮೇಲ್‌ನಲ್ಲಿ ಮಾಜಿ ಸಚಿವ ಜಮೀರ್ ಅಹಮ್ಮದ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಮುಸ್ಲಿಂ ಸಮುದಾಯದ ಮುಖಂಡ, ಮಾಜಿ ಮೇಯರ್ ಕೆ.ಚಮನ್ ಸಾಬ್ ಮನವಿ ಮಾಡಿದ್ದಾರೆ.
- - -
