ವಿದ್ಯುತ್ ಸಂಪರ್ಕ ಕಲ್ಪಿಸಲು ಹೈಕೋರ್ಟ್ ನಿರ್ದೇಶನ

| Published : Jan 24 2025, 12:46 AM IST

ಸಾರಾಂಶ

ಚಳ್ಳಕೆರೆ ನಗರದ ಮಹಾದೇವಿ ರಸ್ತೆಯ ನಗರಸಭೆ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರದ ಬೆಂಗಳೂರು, ಮಹದೇವಿ, ಪಾವಗಡ ಮತ್ತು ಚಿತ್ರದುರ್ಗ ರಸ್ತೆಯ ಒಟ್ಟು 94 ನಗರಸಭೆ ವ್ಯಾಪ್ತಿಯ ಮಳಿಗೆಗಳ ವಿದ್ಯುತ್ ಸಂಪರ್ಕವನ್ನು ನಗರದ ಬೆಸ್ಕಾಂ ಅಧಿಕಾರಿಗಳು ಪೌರಾಯುಕ್ತರ ಲಿಖಿತ ಮನವಿ ಮೇರೆಗೆ ಜ.15ರಂದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬಗ್ಗೆ ಬಾಡಿಗೆದಾರರು ಪೌರಾಯುಕ್ತರು ಮತ್ತು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಮಳಿಗೆಗಳು ಸಂಪೂರ್ಣ ಶಿಥಿಲಗೊಂಡಿದ್ದರಿಂದ ಅಪಾಯದ ಸಂಭವವಿದ್ದು, ಬಾಡಿಗೆದಾರರು ಕೂಡಲೇ ತಮ್ಮ ಮಳಿಗೆಗಳನ್ನು ಖಾಲಿ ಮಾಡಿ ಪೌರಾಯುಕ್ತರ ವಶಕ್ಕೆ ನೀಡಿ ನಗರಸಭೆ ಆಡಳಿತದೊಂದಿಗೆ ಸಹಕರಿಸುವಂತೆ ಶಾಸಕರು ವಿನಂತಿಸಿದ್ದರು.

ಆದರೆ, ಬಾಡಿಗೆದಾರರು ಭವಿಷ್ಯದ ಹಿತದೃಷ್ಟಿಯಿಂದ ಕಳೆದ 30 ವರ್ಷಗಳಿಂದ ಇದೇ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ತಮ್ಮ ಬದುಕು ರೂಪಿಸಿಕೊಂಡಿರುವುದರಿಂದ ಬೇರೆ ಯಾವುದೇ ಮಾರ್ಗವಿಲ್ಲದ ಕಾರಣ, ಹೈಕೋರ್ಟ್ ಮೆಟ್ಟಿಲೇರಿದ್ದರು. ಬಾಡಿಗೆದಾರರ ಮನವಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಹೈಕೋರ್ಟ್ ನ್ಯಾಯಾಪೀಠ ವಿದ್ಯುತ್ ಸಂಪರ್ಕಕಲ್ಪಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಮಹಾದೇವಿ ರಸ್ತೆಯ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದಾರೆ.

ತೂಗುಯಾಲೆಯಲ್ಲಿದ್ದ ನೂರಾರು ಕುಟುಂಬಗಳ ಬದುಕಿಗೆ ಹೈಕೋರ್ಟ್ ಮಧ್ಯ ಪ್ರವೇಶಿಸಿ ವಿದ್ಯುತ್ ಸಂಪರ್ಕಕ್ಕೆ ಆದೇಶ ನೀಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಹೈಕೋರ್ಟ್ ನೀಡುವ ತೀರ್ಮಾನಕ್ಕೆ ಯಾವರೀತಿ ಸ್ಪಂದನೆ ದೊರೆಯುತ್ತದೆ ಎಂದು ಕಾದು ನೋಡಬೇಕಿದೆ.