ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆ ವಿಭಾಗದ ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ನಡೆದಿರುವ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸುವ ಇಂಗಿತ ವ್ಯಕ್ತಪಡಿಸಿರುವ ಹೈಕೋರ್ಟ್, ಆ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ)ಸೂಚಿಸಿದೆ.ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಕ್ರಮದಿಂದ ಕಳಂಕಿತ ಸಹಾಯಕ ಎಂಜಿನಿಯರ್‌ಗಳ ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಲು ನಿರಾಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಕ್ರಮ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಸಹಾಯಕ ಎಂಜಿನಿಯರುಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಎಲ್ಲ ಪ್ರಕ್ರಿಯೆಗಳ ಮಾಹಿತಿಯನ್ನು ಬುಧವಾರ ಸರ್ಕಾರ ಮತ್ತು ಕೆಪಿಎಸ್‌ಸಿ ಬುಧವಾರ ನ್ಯಾಯಾಲಯಕ್ಕೆ ಒದಗಿಸಬೇಕು. ಒಂದು ಲಾರಿ ತೆಗೆದುಕೊಂಡು ಹೋಗಿ ದಾಖಲೆಗಳನ್ನು ತಂದು ಇಟ್ಟುಕೊಂಡು ಬಿಡಿ. ಕಾಲಹರಣ ಮಾಡಬಾರದು. ನ್ಯಾಯಾಲಯ ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿರಬೇಕು ಎಂದು ಸರ್ಕಾರ ಮತ್ತು ಕೆಪಿಎಸಿ ಪರ ವಕೀಲರಿಗೆ ನ್ಯಾಯಪೀಠ ತಾಕೀತು ಮಾಡಿತು.ನೇಮಕಾತಿಯಲ್ಲಿ ಅಕ್ರಮಗಳು ನಡೆಯುವುದು ಹೇಗೆ ಗೊತ್ತೇ? ನಾವು ಏನು ಮಾಡಿದರೂ ನಡೆದು ಹೋಗುತ್ತದೆ ಎಂಬ ಸೊಕ್ಕಿನ ನಡತೆಯಿಂದಷ್ಟೆ. ಆ ನಡತೆಯನ್ನು ಸಂಬಂಧಪಟ್ಟವರು ತಕ್ಷಣವೇ ಬಿಡಬೇಕು. ಅಲೆಕ್ಸಾಂಡರ್‌ನಂತವನು ಕಾಲಗರ್ಭದಲ್ಲಿ ಹುದುಗಿ ಹೋಗಿದ್ದಾನೆ. ಇತಿಹಾಸ ಓದಿದರೆ ಅದೆಲ್ಲಾ ತಿಳಿಯುತ್ತದೆ. ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದರೆ ನ್ಯಾಯಾಲಯ ಸಹ ಸುಮ್ಮನೆ ಬಿಡುವುದಿಲ್ಲ. ನ್ಯಾಯಾಲಯವು ಏನು ಮಾಡಿದರೂ ನಡೆಯುತ್ತದೆ. ಸಂಬಂಧಪಟ್ಟಿವರಿಗೆ ಗಂಭೀರ ಹಾನಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಬಿಐ ತನಿಖೆ ಸೂಕ್ತಇದಕ್ಕೂ ಮುನ್ನ ಈ ಪ್ರಕರಣದಲ್ಲಿ ಸಿಒಡಿ-ಸಿಐಡಿಯಿಂದ ಏನೂ ಮಾಡಲಾಗುವುದಿಲ್ಲ. ಆ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರದ ನಿಯಂತ್ರಣದಲ್ಲೇ ಇರುತ್ತವೆ. ಪ್ರಕರಣವನ್ನು ಸಿಬಿಐಯಿಂದ ತನಿಖೆ ಮಾಡುವುದು ಸೂಕ್ತ. ಆ ಕುರಿತು ನ್ಯಾಯಾಲಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿತು.
ಅದಕ್ಕೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಆಕ್ಷೇಪ ವ್ಯಕ್ತಪಡಿಸಿದಾಗ, ಸೂಕ್ತ ಸಂದರ್ಭದಲ್ಲಿ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವ ಸಾಧ್ಯತೆಯನ್ನು ಪರಿಶೀಲಿಸಬಹುದು. ಈ ಸಂಬಂಧ ಸರ್ಕಾರ, ಕೆಪಿಎಸ್‌ಸಿ ಸೇರಿದಂತೆ ಅರ್ಜಿಯಲ್ಲಿನ ಎಲ್ಲ ಪಕ್ಷಕಾರರು ತಮ್ಮ ಪರ-ವಿರೋಧ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅರ್ಜಿಯಲ್ಲಿ ಸಿಬಿಐ ಅನ್ನು ಪ್ರತಿವಾದ ಮಾಡಬೇಕು. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಸಿಬಿಐ/ಎನ್‌ಐಎ ಪರ ವಕೀಲ ಪಿ.ಪ್ರಸನ್ನಕುಮಾರ ಅವರು ವಿಚಾರಣೆಗೆ ಹಾಜರಿರಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.ವಿಚಾರಣೆಯ ಒಂದು ಹಂತದಲ್ಲಿ ಕೆಪಿಎಸ್‌ಸಿ ಪರ ವಕೀಲ ಹೆಚ್ಚುವರಿ ಅಡ್ವೋಕೇಟ್ ಜನರಲ್ ರೊಬೆನ್ ಜಾಕಬ್, ಸಹಾಯಕ ಎಂಜಿನಿಯರ್ ನೇಮಕಾತಿಯಲ್ಲಿನ ಹಗರಣದ ತನಿಖೆಗಾಗಿ ಕೆಪಿಎಸ್‌ಸಿಯ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿ ತನಿಖೆ ನಡೆಸುತ್ತಿದೆ ಎಂಬ ಮಾಹಿತಿಯನ್ನು 2024ರ ಫೆ.9ರಂದು ಮುಖ್ಯ ಕಾರ್ಯದರ್ಶಿಗೆ ಲಿಖಿತವಾಗಿ ತಿಳಿಸಲಾಗಿತ್ತು. ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಲು ಕೆಪಿಎಸ್‌ಸಿ ಕಾರ್ಯದರ್ಶಿಗೆ ನಿರ್ಣಯದ ಮೂಲಕ ಕೆಪಿಎಸ್‌ಸಿ ತಿಳಿಸಿತ್ತು. ಆದರೆ, ಅವರು ಎಫ್‌ಐಆರ್ ದಾಖಲಿಸಿರಲಿಲ್ಲ ಎಂದು ವಿವರಿಸಿದರು.
ಅದಕ್ಕೆ ವಿಚಾರಣೆಗೆ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾ.ಕೃಷ್ಣ ದೀಕ್ಷಿತ್ ಅವರು, ಸಿಐಡಿ ತನಿಖೆ ಅಗತ್ಯವಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಲಿಖಿತವಾಗಿ ಹೇಳಿರುವಾಗ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಹೇಗೆ ನೀಡಲಾಯಿತು.ಇಂತಹ ನಡೆಯನ್ನೂ ಹಿಂದೆಂದೂ ಕಾಣಲಿಲ್ಲ. ಇದೆಲ್ಲವೂ ಹಾಗೆ ಆಗಿರಲು ಸಾಧ್ಯವಿಲ್ಲ. ವ್ಯವಹಾರ ಏನಾಗಿದೆ ಎಂದು ಎಸ್‌ಎಸ್‌ಎಲ್‌ಸಿ ಓದಿರುವವರಿಗೂ ಗೊತ್ತಿರುತ್ತದೆ. ವ್ಯವಹಾರ ಎಂದರೆ ಬೇರೆ ಏನೋ ಎಂದು ತಿಳಿದುಕೊಳ್ಳಬೇಡಿ. ನೇಮಕಾತಿಗೆ ಸಂಬಂಧಿಸಿದ ವ್ಯವಹಾರಗಳು (ನಡಾವಳಿಗಳು) ಎಂದರ್ಥ. ಆ ಬಗ್ಗೆ ಮಾಹಿತಿ ನೀಡಬೇಕು. ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗುವುದು ಇದೆ. ಅದರಿಂದ ಹಲವರಿಗೆ ಮುಜುಗರವಾಗಲಿದೆ ಎಂದು ತೀಕ್ಷ್ಣವಾಗಿ ಹೇಳಿದರು.