ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳಿಗೆ 2026-27ನೇ ಸಾಲಿನಲ್ಲಿ ನಡೆಯಬೇಕಿದ್ದ, ಕ್ರೀಡಾಕೂಟಕ್ಕೆ ಉಚ್ಚ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. ಉನ್ನತೀಕರಿಸಿದ ಶಾಲೆ ಮತ್ತು 8, 9, 10 ತರಗತಿಯ 14 ವರ್ಷದೊಳಗಿನ ಮಕ್ಕಳಿಗೆ ಅವಕಾಶ ಇಲ್ಲದನ್ನು ಪ್ರಶ್ನಿಸಿ ಪಾಲಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳಿಗೆ 2026-27ನೇ ಸಾಲಿನಲ್ಲಿ ನಡೆಯಬೇಕಿದ್ದ, ಕ್ರೀಡಾಕೂಟಕ್ಕೆ ಉಚ್ಚ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.ಕಳೆದ ಜುಲೈ 14, 2026ರಂದು ಪ್ರಸಕ್ತ ಸಾಲಿನ ಕ್ರೀಡಾಕೂಟ ಆಯೋಜನೆ ಕುರಿತು ಕ್ರೀಡಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಆ ಸುತ್ತೋಲೆಯನ್ನು ಪ್ರಶ್ನಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ, 8ನೇ ತರಗತಿಯ ಬಾಲಕಿಯ ಪಾಲಕರು ಜು. 30ರಂದು ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ಆ. 6ರಂದು ವಿಚಾರಣೆ ಕೈಗೆತ್ತಿಕೊಂಡು ಹೈಕೋರ್ಟ್ ಕ್ರೀಡಾಕೂಟಕ್ಕೆ ತಾತ್ಕಾಲಿಕ ತಡೆ ನೀಡಿ ಮುಂದಿನ ತೀರ್ಪು ಬರುವವರೆಗೂ ಕ್ರೀಡಾಕೂಟಗಳನ್ನು ನಡೆಸುವಂತಿಲ್ಲ ಎಂದಿದೆ.
ಸಮಸ್ಯೆ ಏನು?: ಕ್ರೀಡಾ ಇಲಾಖೆಯ ಮಾರ್ಗದರ್ಶಿ ಪ್ರಕಾರ ಜನವರಿ 1, 2013ರಲ್ಲಿ ಜನಿಸಿದ 14 ವರ್ಷ ಒಳಗಿನ ಮಕ್ಕಳು, ಅವರು 6 ಮತ್ತು 7ನೇ ತರಗತಿ ಅಭ್ಯಾಸ ಮಾಡುತ್ತಿರಬೇಕು, ಅಂತಹ ಮಕ್ಕಳು ತಂಡಗಳನ್ನು ಕಟ್ಟಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಆದರೆ, ಪ್ರೌಢಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ ಓದುವ ಮಕ್ಕಳು ಮತ್ತು ಉನ್ನತೀಕರಿಸಿದ ಶಾಲೆಗಳಲ್ಲಿ ಅಭ್ಯಾಸ ಮಾಡುವ 14 ವರ್ಷದೊಳಗಿನ ಮಕ್ಕಳು ಈ ಕ್ರೀಡೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ನಿಯಮಾವಳಿಯಿಂದ ಪ್ರೌಢಶಾಲೆ ಹಾಗೂ ಉನ್ನತೀಕರಿಸಿದ ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳು ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ.ಈ ಹಿಂದೆ 14 ವರ್ಷದೊಳಗಿನ 8, 9 ಮತ್ತು 10ನೇ ತರಗತಿ ಮಕ್ಕಳು ಭಾಗವಹಿಸಿ ತಂಡಗಳನ್ನು ರಚಿಸಿಕೊಂಡು ಸ್ಪರ್ಧಿಸುತ್ತಿದ್ದರು. ಆದರೆ, ಈ ಬಾರಿಯ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನ 6 ಮತ್ತು 7ನೇ ತರಗತಿಯಲ್ಲಿ ಅಭ್ಯಾಸಿಸುವ ಮಕ್ಕಳಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿದೆ ಎಂಬ ನಿರ್ಧಾರ ಬಹುತೇಕ ಕ್ರೀಡಾಸಕ್ತರ ಆಸೆಗೆ ತಣ್ಣೀರು ಎರಚಿದೆ.
ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಿ, ವಿಜೇತರನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಅರ್ಧ ಆಗಸ್ಟ್ ತಿಂಗಳು ಮುಗಿದಿದೆ. ಹೈಕೋರ್ಟ್‌ನಿಂದ ಮುಂದಿನ ದಿನಗಳಲ್ಲಿ ಕ್ರೀಡಾಕೂಟ ನಡೆಸುವ ತೀರ್ಪು ಬಂದರೂ, ಕ್ರೀಡೆಗಳ ಪಟ್ಟಿ ತಯಾರಿಸಿ ಆಯೋಜಿಸಲು ಕಷ್ಟಸಾಧ್ಯವಾಗಿದ್ದು, ಆಗಸ್ಟ್-27, 28ರಂದು ಸಂಕಲನಾತ್ಮಕ ಪರೀಕ್ಷೆ ಜರುಗಲಿದೆ. ಆದ್ದರಿಂದ ಪರೀಕ್ಷೆಗಳ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕಿದೆ ಎನ್ನುತ್ತಾರೆ ಶಿಕ್ಷಕರು.ತಾತ್ಕಾಲಿಕ ತಡೆ: ತಾಲೂಕಿನಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಎಲ್ಲ ಸಿದ್ಧತೆ ನಡೆದಿತ್ತು. ಆದರೆ, ಕ್ರೀಡಾಕೂಟದಲ್ಲಿ ಉನ್ನತೀಕರಿಸಿದ ಶಾಲೆ ಮತ್ತು 8, 9, 10 ತರಗತಿಯ 14 ವರ್ಷದೊಳಗಿನ ಮಕ್ಕಳಿಗೆ ಅವಕಾಶ ಇಲ್ಲದನ್ನು ಪ್ರಶ್ನಿಸಿ ಪಾಲಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದ್ದರಿಂದ ಕ್ರೀಡಾಕೂಟಕ್ಕೆ ತಾತ್ಕಾಲಿಕ ತಡೆ ನೀಡಿದೆ ಎಂದು ಹೂವಿನಹಡಗಲಿ ತಾಲೂಕು ದೈಹಿಕ ಅಧೀಕ್ಷಕ ಮಹಮದ್ ರಫೀಕ್ ಖವಾಸ್ ಹೇಳಿದರು.