ಕನ್ನಡಪ್ರಭ ವಾರ್ತೆ ಬೆಂಗಳೂರು
ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡದಿದ್ದರೂ 2014ರಲ್ಲಿ ಇಂಗ್ಲೆಂಡ್‌ನಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯೋರ್ವನನ್ನು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಬಂಧಿಸಿದ್ದ ಮತ್ತು ಹೃದ್ರೋಗದಿಂದ ಬಳಲುತ್ತಿದ್ದ ಆತನ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕಿರುಕುಳ ನೀಡಿದ್ದ ಪ್ರಕರಣದಲ್ಲಿ 9 ಲಕ್ಷ ರು. ಪರಿಹಾರ ಪಾವತಿಸಲು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.ವಿದ್ಯಾರಣ್ಯಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ತಮ್ಮನ್ನು ಬಂಧಿಸಿದ್ದನ್ನು ಅಕ್ರಮವೆಂದು ಘೋಷಿಸಬೇಕು ಮತ್ತು ಪರಿಹಾರ ಪಾವತಿಸಲು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿ ವಿದ್ಯಾರಣ್ಯಪುರ ನಿವಾಸಿಗಳಾದ ಪಿ.ಜವರಶೆಟ್ಟಿ ಹಾಗೂ ಅವರ ಪುತ್ರ ಸದ್ಯ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಜೆ.ನವೀನ್ ಕುಮಾರ್ 2015ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಪೀಠ, ಪಿ.ಜವರಶೆಟ್ಟಿ ಅವರಿಗೆ 5 ಲಕ್ಷ ರು. ಮತ್ತು ಜೆ.ನವೀನ್ ಕುಮಾರ್‌ಗೆ 4 ಲಕ್ಷ ರು. ಪರಿಹಾರ ಪಾವತಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ.ಜೊತೆಗೆ, ಈ ಹಣವನ್ನು 2014ರಲ್ಲಿ ನವೀನ್ ಕುಮಾರ್ ಅನ್ನು ಅಕ್ರಮವಾಗಿ ಬಂಧಿಸಿದ ಮತ್ತು ಆತನ ವಿರುದ್ಧ ಅಂತಿಮ ವರದಿಯನ್ನು ನ್ಯಾಯಾಲಯದ ಸಲ್ಲಿಸಿದ ನಂತರವೂ ಜವರಶೆಟ್ಟಿಯನ್ನು ಮನೆಯಿಂದ ಬಲವಂತವಾಗಿ ಖಾಸಗಿ ಖಾರಿನಲ್ಲಿ ಮಲ್ಲೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದ ಅಂದಿನ ವಿದ್ಯಾರಣ್ಯಾಪುರ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ನಿಂದ ವಸೂಲಿ ಮಾಡಬೇಕು ಹಾಗೂ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಬೇಕು ಎಂದು ಪೊಲೀಸ್ ಆಯುಕ್ತರಿಗೆ ನ್ಯಾಯಪೀಠ ಆದೇಶಿಸಿದೆ.
ನವೀನ್ ಕುಮಾರ್ ಅವರನ್ನು ಬಂಧಿಸಿದ್ದ ಮತ್ತು ಅವರ ವಿರುದ್ಧ ಪೊಲೀಸ್ 2014ರಲ್ಲಿ ಹೊರಡಿಸಿದ್ದ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದ ಕ್ರಮವನ್ನು ಅಕ್ರಮವೆಂದು ಘೋಷಿಸಿದೆ.
ಏನಿದು ಪ್ರಕರಣ?
ಜೆ.ನವೀನ್ ಕುಮಾರ್ ಅವರ ಪತ್ನಿ 2015ರಲ್ಲಿ ನವೀನ್, ಅವರ ಪೋಷಕರು, ಸಹೋದರ ಮತ್ತು ಸಹೋದರಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ 2014ರ ಮಾ.10ರಂದು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ನವೀನ್‌ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಹೀಗಿದ್ದರೂ ಇಂಗ್ಲೆಂಡ್‌ನಿಂದ ನಗರಕ್ಕೆ ಬಂದ ಕೂಡಲೇ 2014ರ ಆ.16ರಂದು ಅವರನ್ನು ವಿದ್ಯಾರಣ್ಯಾಪುರ ಠಾಣಾ ಪೊಲೀಸ್ ಇನ್ ಸ್ಪೆಕ್ಟರ್ ಬಂಧಿಸಿದ್ದರು. 2014ರ ಜು.19ರಂದು ಹೃದ್ರೋಗದಿಂದ ಬಳಲುತ್ತಾ ನವೀನ್ ಅವರ ತಂದೆಯನ್ನು ಖಾಸಗಿ ಕಾರಿನಲ್ಲಿ ಕೂರಿಸಿಕೊಂಡು ಮಲ್ಲೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಇದರಿಂದ ತಮ್ಮ ಬಂಧನವನ್ನು ಅಕ್ರಮವೆಂದು ಘೋಷಿಸಬೇಕು. ತಮಗೆ ಪರಿಹಾರ ನೀಡಲು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ನವೀನ್ ಕೋರಿದ್ದರು.