ಸಾರಾಂಶ
ಕನಕಗಿರಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಧಾರವಾಡ ಹೈಕೋರ್ಟ್ ಪೀಠದ ನಾಲ್ವರು ನ್ಯಾಯಾಧೀಶರು ಶನಿವಾರ ಭೇಟಿ ನೀಡಿ ದರ್ಶನ ಪಡೆದರು.
ಧಾರವಾಡ ಪೀಠದ ನ್ಯಾಯಾಧೀಶರಾದ ಎಸ್.ಜಿ. ಪಂಡಿತ, ಅಶೋಕ ಎಸ್. ಕಿಣಗಿ, ಎನ್.ಎಸ್. ಸಂಜಯಗೌಡ, ಎಸ್. ವಿಶ್ವಜೀತ ಶೆಟ್ಟಿ ಆಗಮಿಸಿ, ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿದ ಪುಣ್ಯ ಕ್ಷೇತ್ರದ ಮಾಹಿತಿ ಪಡೆದರು.
ಇನ್ನು ದೇಗುಲದ ಪ್ರಾಂಗಣದ ಸುತ್ತ ಇರುವ ಶಿಲ್ಪಕಲೆ, ಪಂಚ ಕಳಶ ಸಹಿತ ಗೋಪುರ ದರ್ಶನ, ತೊಟ್ಟಿಲು ತೀರ್ಥದ ಮಹತ್ವ, ಗರ್ಭಗೃಹದೊಳಗಿನ ದಕ್ಷಿಣ ಗೋಪುರದ ಬಿಂಬ ಉಲ್ಟಾ ಕಾಣುವುದು, ಪನ್ನಿದ್ಧರಾಳ್ವರ್, ಮುಖ್ಯಪ್ರಾಣ ದೇವರು ಹಾಗೂ ಹಲವು ಕಡೆಗಳಲ್ಲಿ ಶಿವ ಲಿಂಗಾಕಾರವಿದ್ದರೆ ಇಲ್ಲಿ ಮಹೇಶ್ವರ ಮೂರ್ತಿ ಇರುವ ವಿಶೇಷತೆ ತಿಳಿಸಲಾಯಿತು.
ಇದಕ್ಕೂ ಮೊದಲು ಗಣಪತಿ, ಶಾರದಾ ಹಾಗೂ ಏಕ ಶಿಲಾಮೂರ್ತಿ ಸಂಜೀವನ (ಪ್ರಾಣ ದೇವರ) ದರ್ಶನ ಪಡೆದು ಭಕ್ತಿ ಮೆರೆದರು. ಲಕ್ಷ್ಮೀ ನರಸಿಂಹಸ್ವಾಮಿಯ ದರ್ಶನದ ನಂತರ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.
ಇತಿಹಾಸಕಾರ ದುರ್ಗಾದಾಸ ಯಾದವ್ ನ್ಯಾಯಾಧೀಶರಿಗೆ ದೇಗುಲದ ಇತಿಹಾಸ ಹಾಗೂ ಇಲ್ಲಿ ಆಳ್ವಿಕೆ ನಡೆಸಿದವರ ಕುರಿತು ಸವಿಸ್ತಾರ ಮಾಹಿತಿ ತಿಳಿಸಿದರು.ತಹಶೀಲ್ದಾರ ವಿಶ್ವನಾಥ ಮುರುಡಿ, ಗ್ರೇಡ್-೨ ತಹಶೀಲ್ದಾರ ವಿ.ಎಚ್. ಹೊರಪೇಟೆ, ದೇವಸ್ಥಾನ ಸಮಿತಿ ಸದಸ್ಯ ವೆಂಕಟೇಶ ಸೌದ್ರಿ, ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖರಾದ ಕನಕರೆಡ್ಡಿ ಮಹಲನಮನಿ, ಮಲ್ಕೇಶ ಕೋಟೆ, ಶರಣಪ್ಪ ಸಜ್ಜನ, ವಿರೇಶ ಮಿಟ್ಲಕೋಡ್, ಹನುಮೇಶ ಮಹಿಪತಿ ಇದ್ದರು.