ಸಾರಾಂಶ
ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್‌ಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಸಿ.ಎನ್.ಅಶ್ಚತ್ಥನಾರಾಯಣ ಅವರಿಗೆ ಹೈಕೋರ್ಟ್ ಹೇಳಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ತಮ್ಮ ಬಳಿ ಇರುವ ಸಾಕ್ಷ್ಯ ಹಾಗೂ ಮಾಹಿತಿಗಳನ್ನು ನೀಡುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಏಕಸದಸ್ಯ ತನಿಖಾ ಆಯೋಗವು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಐವರಿಗೆ ನೋಟಿಸ್ ಜಾರಿಗೊಳಿಸಿದೆ.ಇವರೆಲ್ಲರಿಗೂ ಬುಧವಾರ ಖುದ್ದು ಹಾಜರಾಗಿ ಅಥವಾ ವಕೀಲರ ಮೂಲಕ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.ವಕೀಲರೊಬ್ಬರು ತನಿಖಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದರಲ್ಲಿ ಕೆಲ ರಾಜಕಾರಣಿಗಳು ಪಿಎಸ್‌ಐ ನೇಮಕಾತಿ ಅವ್ಯವಹಾರ ಪ್ರಕರಣ ಸಂಬಂಧ ತಮ್ಮ ಬಳಿ ಎಲ್ಲಾ ಮಾಹಿತಿ ಇದೆ ಎಂದು ಹೇಳಿರುವ ವಿಡಿಯೊಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಈ ಅಫಿಡವಿಟ್ ಆಧರಿಸಿ ತನಿಖಾ ಆಯೋಗವು ಎಚ್.ಡಿ.ಕುಮಾರಸ್ವಾಮಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಅವರ ಸಹೋದರ ಸತೀಶ್, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕನಕಗಿರಿ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಬಸವರಾಜ ದಡೇಸಗೂರು ಅವರಿಗೆ ತಮ್ಮ ಬಳಿ ಇರುವ ಸಾಕ್ಷ್ಯ ಹಾಗೂ ಮಾಹಿತಿಯನ್ನು ಆಯೋಗಕ್ಕೆ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.