ರೈಲು ನಿಲ್ದಾಣ ಬಳಿ ಅಡುಗೆ ಮನೆ ಸುತ್ತೋಲೆಗೆ ಹೈಕೋರ್ಟ್ ಅಸ್ತು

| Published : Feb 23 2024, 01:48 AM IST

ರೈಲು ನಿಲ್ದಾಣ ಬಳಿ ಅಡುಗೆ ಮನೆ ಸುತ್ತೋಲೆಗೆ ಹೈಕೋರ್ಟ್ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ರೈಲ್ವೆ ನಿಲ್ದಾಣದ ಬಳಿಯೇ ರೈಲ್ವೆ ಕ್ಯಾಟರಿಂಗ್‌ ಇರಬೇಕು ಎಂಬ ನಿಯಮ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೈಲ್ವೆ ನಿಲ್ದಾಣಗಳ ಬಳಿಯೇ ಅಡುಗೆ ಕೋಣೆ ಸೌಕರ್ಯ ಹೊಂದಬೇಕೆಂಬ ನಿಯಮವನ್ನು ಸೇರ್ಪಡೆ ಮಾಡಿ ‘ರೈಲ್ವೆ ಕ್ಯಾಟರಿಂಗ್ ನೀತಿ-2017’ಕ್ಕೆ ತಿದ್ದುಪಡಿ ಮಾಡಿ ರೈಲ್ವೆ ಸಚಿವಾಲಯ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಕ್ಯಾಟರಿಂಗ್ ಸೇವೆ ಕುರಿತು 2023ರ ನ.14ರಂದು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ನೈಋತ್ಯ ಕ್ಯಾಟರಿಂಗ್ ಗುತ್ತಿಗೆದಾರರ ಸಂಘ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಆಹಾರ ಸಿದ್ಧಪಡಿಸುವ, ಪೂರೈಸುವ ವೇಳೆ ಗುಣಮಟ್ಟ ಮತ್ತು ಸ್ವಚ್ಛತೆ ಖಾತರಿಪಡಿಸುವುದು ಸೇರಿದಂತೆ ಮತ್ತಿತರ ವಿಚಾರಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ರೈಲ್ವೆ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಈ ವಿಚಾರಗಳಲ್ಲಿ ತನ್ನ ವ್ಯವಸ್ಥೆ ಸರಿಯಾಗಿಟ್ಟುಕೊಳ್ಳುವ ಹೊಣೆಗಾರಿಕೆ ಸಚಿವಾಲಯದ ಮೇಲಿದೆ. ಆಹಾರ ಪೂರೈಕೆಯಲ್ಲಿ ಗುಣಮಟ್ಟ ಮತ್ತು ಹೊಣೆಗಾರಿಕೆ ತರಲು ನೀತಿಯಲ್ಲಿ ತಿದ್ದುಪಡಿ ಮಾಡಿರುವುದು, ಕಾನೂನುಬಾಹಿರ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಲಾಗದು. ಈ ವಿಚಾರದಲ್ಲಿ ಗುತ್ತಿಗೆದಾರರ ಹಿತಕ್ಕಿಂತ ಸಾರ್ವಜನಿಕ ಹಿತವೇ ಮುಖ್ಯವಾಗುತ್ತದೆ. ಹಾಗಾಗಿ, ಸಚಿವಾಲಯದ ನಿರ್ಧಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಸಲ್ಲ ಎಂದು ಆದೇಶದಲ್ಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲರು, 2017ರ ರೈಲ್ವೆ ಕ್ಯಾಟರಿಂಗ್ ನೀತಿಯನ್ನು ಬಜೆಟ್ ನಲ್ಲಿ ಘೋಷಿಸಿದ ನಂತರ ಜಾರಿಗೊಳಿಸಲಾಗಿದೆ. ಆದರೆ, ತಿದ್ದುಪಡಿಯನ್ನು ಸಂಪುಟದ ಮುಂದೆ ತರದೇ ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಮಂಡಳಿಯೇ ನಿರ್ಧಾರ ಕೈಗೊಂಡಿದೆ. ಹಾಗಾಗಿ, ಆ ತೀರ್ಮಾನ ಊರ್ಜಿತವಲ್ಲ. ನೀತಿಯ ಪ್ರಕಾರ ಐಆರ್‌ಟಿಸಿ ಹೊರತುಪಡಿಸಿ ಇತರೆ ಗುತ್ತಿಗೆದಾರರಿಗೆ ಅವಕಾಶವಿರುವುದಿಲ್ಲ. ಆದರೆ ಇದೀಗ ಇತರೆ ಗುತ್ತಿಗೆದಾರರಿಗೂ ಮುಕ್ತ ಅವಕಾಶ ನೀಡಲಾಗುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ರೈಲ್ವೇ ಸಚಿವಾಲಯದ ಪರ ವಕೀಲರು, ರೈಲುಗಳಲ್ಲಿ ಆಹಾರ ಪೂರೈಕೆದಾರರ ಅಡುಗೆ ಕೋಣೆಗಳಲ್ಲಿ ಶುಚಿತ್ವದ ದೊಡ್ಡ ಪ್ರಶ್ನೆ ಎದುರಾಗಿತ್ತು. ಹಾಗಾಗಿ ಯಾವ ಅಡುಣೆ ಕೋಣೆಗಳಿಂದ ಆಹಾರ ಪೂರೈಸಲಾಗುತ್ತಿದೆ ಎಂಬ ಖಚಿತ ಪಡಿಸಿಕೊಳ್ಳಲು, ಆಹಾರ ಪದಾರ್ಥಗಳಲ್ಲಿ ಸ್ವಚ್ಛತೆ, ಗುಣಮಟ್ಟ ಕಾಯ್ದುಕೊಳ್ಳುವ ಹೊಣೆಗಾರಿಕೆಯನ್ನು ನಿಗದಿಪಡಿಸುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.