ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸ ಎದುರು ಕಬ್ಬು ಬೆಳೆಗಾರರು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಹೈಕೋರ್ಟ್ ತಡೆ ನೀಡಿದೆ. ಜನವಸತಿ ಪ್ರದೇಶದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬೇಡಿ. ಬೇರೆಡೆ ನಿಗದಿತ ಜಾಗ ಗುರುತಿಸಿ ಅಲ್ಲಿ ಹೋರಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಹುಬ್ಬಳ್ಳಿ:
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸ ಎದುರು ಕಬ್ಬು ಬೆಳೆಗಾರರು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಹೈಕೋರ್ಟ್ ತಡೆ ನೀಡಿದೆ. ಜನವಸತಿ ಪ್ರದೇಶದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬೇಡಿ. ಬೇರೆಡೆ ನಿಗದಿತ ಜಾಗ ಗುರುತಿಸಿ ಅಲ್ಲಿ ಹೋರಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಇದರಿಂದಾಗಿ ಬೆಳಗಾವಿಯಿಂದ ಹುಬ್ಬಳ್ಳಿ ಚಲೋ ನಡೆಸುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಜಾಗ ಎಲ್ಲಿ ಎಂಬ ಪ್ರಶ್ನೆ ಇದೀಗ ಉದ್ಭವವಾದಂತಾಗಿದೆ.ಸಚಿವ ಜೋಶಿ ಮನೆ ಎದುರಿಗೆ ಹೋರಾಟ ನಡೆಸುವುದಾಗಿ ಘೋಷಣೆ ಮಾಡಿದ್ದ ಕಬ್ಬು ಬೆಳೆಗಾರರು, ಬೆಳಗಾವಿಯಿಂದ ಹುಬ್ಬಳ್ಳಿ ಚಲೋ ಪಾದಯಾತ್ರೆ ಆರಂಭಿಸಿದ್ದಾರೆ. ಸದ್ಯ ಪಾದಯಾತ್ರೆಯು ಕಿತ್ತೂರಿನ ಬಳಿ ಇದೆ. ಈ ಹಿನ್ನೆಲೆಯಲ್ಲಿ ಜೋಶಿ ನಿವಾಸ ಇರುವ ಮಯೂರಿ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಬ್ಯಾರಿಕೇಡ್ ಅಳವಡಿಸಿ ಸೀಲ್ಡೌನ್ ಮಾಡಲಾಗಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ.
ಹದಿನೈದು ದಿನದ ಹಿಂದೆ ಕಬ್ಬು ಬೆಳೆಗಾರರು ನಡೆಸಿದ ಪ್ರತಿಭಟನೆಯಿಂದ ಸ್ಥಳೀಯ ಜನಜೀವನಕ್ಕೆ ತೊಂದರೆಯಾಗಿದೆ. ಆದಕಾರಣ ಇಲ್ಲಿ ಹೋರಾಟ ನಡೆಸದಂತೆ ಸೂಚಿಸಬೇಕೆಂದು ಅಲ್ಲಿನ ನಿವಾಸಿಗಳಾದ ಸಂಗಮ ಹಂಜಿ ಸೇರಿದಂತೆ ಐದಾರು ಜನ ಸೇರಿಕೊಂಡು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಹಾಕಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಸ್. ಭರತ್ಕುಮಾರ್, ಅನು ಶಿವರಾಮ್ ಅವರಿದ್ದ ಹೈಕೋರ್ಟ್ ಪೀಠ, ಅರ್ಜಿಯನ್ನು ಪರಿಶೀಲನೆ ನಡೆಸಿ, ತಡೆಯಾಜ್ಞೆ ನೀಡಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸವಿರುವ ಹುಬ್ಬಳ್ಳಿಯ ಮಯೂರಿ ಎಸ್ಟೇಟ್ ಬಳಿ ಇನ್ನು ಮುಂದೆ ಪ್ರತಿಭಟನೆ ನಡೆಸುವಂತಿಲ್ಲ. ಜತೆಗೆ ಪ್ರತಿಭಟನೆಗೆ ಪರ್ಯಾಯ ಸ್ಥಳ ಗುರುತಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ. ಈ ನಡುವೆ ಜೋಶಿ ನಿವಾಸ ಎದುರೇ ಪ್ರತಿಭಟನೆ ನಡೆಸುವುದಾಗಿ ಘೋಷಿಸಿರುವ ರೈತರಿಗೆ ಜಿಲ್ಲಾಡಳಿತ ಪರ್ಯಾಯವಾಗಿ ಎಲ್ಲಿ ಜಾಗ ತೋರಿಸುತ್ತದೆ? ರೈತರು ತಮ್ಮ ಮುಂದಿನ ಹೋರಾಟ ಯಾವ ರೀತಿ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ ಸಂಗಮ ಹಂಜಿ ಪತ್ರಿಕೆಯೊಂದಿಗೆ ಮಾತನಾಡಿ, ರೈತರು ಹೋರಾಟ ನಡೆಸುವುದಕ್ಕೆ ತಮ್ಮದೇನು ಅಭ್ಯಂತರವಿಲ್ಲ. ಆದರೆ, ಮಯೂರಿ ಎಸ್ಟೇಟ್ನಲ್ಲಿ ನಡೆಸುವುದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈಗಲೇ ಬ್ಯಾರಿಕೇಡ್ ಹಾಕಿ ಅಕ್ಷರಶಃ ಸೀಲ್ಡೌನ್ ಮಾಡಲಾಗಿದೆ. ಮಕ್ಕಳನ್ನು ಶಾಲೆ ಕಳುಹಿಸಿ, ಕರೆದುಕೊಂಡು ಬರಲು ಹೆಣಗಾಡಬೇಕಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಪಿಐಎಲ್ ಹಾಕಿದ್ದೇವು. ಇಲ್ಲಿ ಪ್ರತಿಭಟನೆ ನಡೆಸಬಾರದು ಎಂದು ಹೈಕೋರ್ಟ್ ಪೀಠ ಸೂಚನೆ ನೀಡಿದೆ. ಪರ್ಯಾಯ ಸ್ಥಳ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ ಎಂದು ತಿಳಿಸಿದರು.