ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಚೋದನಕಾರಿ ಹಾಗೂ ಆಕ್ಷೇಪಾರ್ಹ ಭಾಷಣ ಮಾಡುತ್ತಾರೆಂಬ ಕಾರಣ ಮುಂದೊಡ್ಡಿ ಜಿಲ್ಲಾಡಳಿತ ನಮೋ ಬ್ರಿಗೇಡ್ ಹಾಗೂ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಲಬುರಗಿ ಜಿಲ್ಲೆ ಪ್ರವೇಶವನ್ನು ನಿಷೇಧಿಸಿ ಫೆ. 28 ರ ಬುಧವಾರ ಹೊರಡಿಸಿದ್ದ ಆದೇಶವನ್ನು ತೆರವುಗೊಳಿಸಿರುವ ಕಲಬುರಗಿಯಲ್ಲಿರುವ ಹೈಕೋರ್ಟ್ ಪೀಠ ಉಫನ್ಯಾಸ ಸಮಾರಂಭಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಸೂಚಿಸಿ ಮಹತ್ವದ ತೀಪ್ರು ನೀಡಿದೆ.ಈ ಬೆಳವಣಿಗೆಯಿಂದಾಗಿ ಕಲಬುರಗಿ ಜಿಲ್ಲಾಡಳಿತಕ್ಕೆ ತೀವ್ರವಾದಂತಹ ಮುಖಭಂಗ ವಾದಂತಾಗಿದೆ. ಇಲ್ಲಿನ ಕಲಬುರಗಿ ಉಫ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಸೂಲಿಬೆಲೆ ಕಲಬುರಗಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಅದಕ್ಕೆ ಜಿಲ್ಲಾ ಎಸ್ಪಿಯವರ ಪತ್ರ, ಅವರು ನೀಡಿರುವಂತಹ ಶಾಂತಿ ಭಂಗದ ಕಾರಣಗಳನ್ನು ಉಲ್ಲೇಖಿಸಿ ಫೆ. 28 ರಿಂದ ಮಾ. 4 ರ ವರೆಗೂ ನಿಷೇಧ ಹೇರಿತ್ತು.
ಈ ಆದೇಶಕ್ಕನುಗುಣವಾಗಿ ಜಿಲ್ಲಾ ಪೊಲೀಸರು ಭಾಲ್ಕಿಯಿಂದ ಕಲಬುರಗಿಗೆ ಆಗಮಿಸುತ್ತಿದ್ದ ಚಕ್ರವರ್ತಿ ಸೂಲಿಬಲೆ ಅವರಿಗೆ ಕಮಲಾಪುರ ಬಳಿಯೇ ವಶಕ್ಕೆ ಪಡೆದು ಹಳ್ಳಿಖೇಡ ಊರಲ್ಲಿ ರಾತ್ರಿ ತಂಗುವಂತೆ ಮಾಡಿದ್ದರು. ಕಲಬುರಗಿ ಜಿಲ್ಲಾಡಳಿತ ಹಾಗೂ ಪೊಲೀಸರ ಈ ಕ್ರಮವನ್ನು ಪ್ರಶ್ನಿಸಿ ಚಕ್ರವರ್ತಿ ಸೂಲಿಬೆಲೆ ಅವರು ಹೈಕರ್ಟ್‌ನಲ್ಲಿ ದಾವೆ ಹೂಡಿದ್ದರು.ಗುರುವಾರವೇ ಸದರಿ ದಾವೆಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಜಿಲ್ಲಾಡಳಿತದ ಆದೇಶಕ್ಕೆ ತಡೆ ನೀಡಿದ್ದಲ್ಲದೆ ಚಿತ್ತಾಪುರದಲ್ಲಿನ ಸೂಲಿಬೆಲೆ ಭಾಷಣ ಸಮಾರಂಭಕ್ಕೆ ಬಿಗಿ ಬಂದೋಬಸ್ತ್ ಒದಗಿಸುವಂತೆಯೂ ಸೂಚಿಸಿದೆ.
ಬುಧವಾರ ಮಧ್ಯರಾತ್ರಿ ಪೂರ್ತಿಯಾಗಿ ಪೊಲೀಸರ ಕೈಯಲ್ಲಿದ್ದ ಸೂಲಿಬೆಲೆಯವರು ಇಂದು ಕಲಬುರಗಿ ಹೈಕೋಟ್ರ್ ತೀಪ್ರಿನಿಂದಾಗಿ ನೇರವಾಗಿ ಸಂಜೆ ಚಿತ್ತಪೂರಕ್ಕೆ ಹೋಗಿ ನಮೋ ಬ್ರಿಗೇಡ್ ಆಯೋಜಿಸಿರುವ ಸಮಾರಂಭಧಲ್ಲಿ ಪಾಲ್ಗೊಂಡಿದ್ದಾರೆ.ಪ್ರಿಯಾಂಕ್ ವಿರುದ್ಧ ಮುಗಿಬಿದ್ದ ಸೂಲಿಬೆಲೆ: ಚಿತ್ತಾಪೂರದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಮಾತಿನುದ್ದಕ್ಕೂ ಚಿತ್ತಾಪೂರ ಶಾಸಕ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ಚಕ್ರವರ್ತಿ ಸೂಲಿಬೆಲೆ ಅವರನ್ನು ಇಷ್ಟೆಲ್ಲಾ ಕಾಡಿಸುತ್ತಿದ್ದಾರೆ, ಚಿತ್ತಪೂರಕ್ಕೆ ಬರಬೇಕಾದರೆ ನಾನು ಹೀಗೆಲ್ಲಾ ಬರೋದಾಯ್ತು, ಈ ಕೆಲಸ ಮಾಡಬೇಕಿತ್ತು. ಇದಕ್ಕೆಲ್ಲ ಕಾರಣವೆಂದರೆ ಹಿಟ್ ಆಂಡ್ ರನ್ ಎನ್ನುವ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರ್ದೈವ ವಾಗಿದೆ ಎಂದು ಮಾತಿನಲ್ಲೇ ಪ್ರಿಯಾಂಕ್ ವಿರುದ್ಧ ಹರಿಹಾಯ್ದರು.ಕಲಬುರ್ಗಿ ಜಿಲ್ಲೆಗೆ ಬರಬೇಡ ಎನ್ನಲು ಇರ್ಯರ್ಯಾರು? ಕಲಬುರಗಿ ಜಿಲ್ಲೆ ಅವರಪ್ಪನ ಆಸ್ತಿನಾ?, ಕಲಬುರ್ಗಿ ಬರದಂತೆ ತಡೆಯಲು ನನ್ನ ವಿರುದ್ಧ ಸಂಚು ರೂಪಿಸಿದ್ದವರಿಗೆ ಹೈಕೋರ್ಟ್ ಛೀಮಾರಿ ಹಾಕಿ ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಎತ್ತಿ ಹಿಡಿದಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೆಸರು ಪ್ರಸ್ತಾಪಿಸದೆಯೇ ಪರೋಕ್ಷವಾಗಿ ಪ್ರಿಯಂಕ್ ಖರ್ಗೆ ವಿರುದ್ಧ ಮಾತಿನುದ್ದಕ್ಕೂ ಮುಗಿಬಿದ್ದರು.
ದೇಶದ ಪ್ರಧಾನಿಯ ಸಾಧನೆಗಳನ್ನು ಜನತೆಗೆ ತಿಳಿಸುವುದು ನಮ್ಮ ಕೆಲಸ. ಅದನ್ನು ಮಾಡಲು ಬರುತ್ತಿದ್ದೇನೆ. ತಮ್ಮ ಕುಟುಂಬದವರನ್ನು ತನ್ನ ಪರಿವಾರ ಎನ್ನದೇ ದೇಶದ ಜನತೆಗೆ ತಮ್ಮ ಪರಿವಾರ ಎನ್ನುವ ಏಕೈಕ ವ್ಯಕ್ತಿಯಾಗಿ ಮೋದಿ ಹೊರಹೊಮ್ಮಿದ್ದಾರೆ.ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿಯೊಂದು ರಾಜ್ಯ ಹಾಗೂ ರೈತರಿಗೆ, ಜನಸಾಮಾನ್ಯರಿಗೆ ಸೌಲಭ್ಯಗಳನ್ನು ಒದಗಿಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಸೂಲಿಬೆಲೆ ಮೋದಿಯವರ ದಶಕದ ಪ್ರಧಾನಿ ಆಡಳಿತಾವಧಿಯನ್ನು ಪ್ರಂಶಂಸಿಸಿದರು.
ಸೂಲಿಬೆಲೆ ವಿರುದ್ಧ ಜಿಲ್ಲಾಡಳಿತ ಆದೇಶ ಹೊರಡಿಸಿ ಕಲಬುರಗಿ ಪ್ರವೇಶ ನಿರ್ಬಂಧಿಸಿದ್ದರಿಂದ ಚಿತ್ತಾಪೂರ ಸಮಾರಂಭ ಜನಮನ ಸೆಳೆದಿತ್ತು. ಹೀಗಾಗಿ ಇಂದು ನಡೆದ ಚಿತ್ತಾಪೂರ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು ವಿಶೇಷವಾಗಿತ್ತು. ಹೆಚ್ಚಿನವರು ಯುವಕರೇ ಆಗಿದ್ದರಲ್ಲದೆ ಸೂಲಿಬೆಲೆಯ ಪ್ರತಿ ಮಾತಿಗೂ ಕೂಗು ಹಾಕುತ್ತ ಪ್ರೋತ್ಸಾಹಿಸುತ್ತಿದ್ದರು.