ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷರ ನಾಮನಿರ್ದೇಶನಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ: ಚಂದ್ರಲಿಂಗು

| Published : Jan 03 2025, 12:32 AM IST

ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷರ ನಾಮನಿರ್ದೇಶನಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ: ಚಂದ್ರಲಿಂಗು
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ಕಾರ್ಯಕಾರಿ ಮಂಡಳಿ ರಚನೆಗೆ ನೀಡಿದ ನಿರ್ದೇಶನವು ಸಾಹಿತ್ಯ ಪರಿಷತ್ತಿನ ಬೈಲಾ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಜಿಲ್ಲೆಯ ಕಾರ್ಯಕಾರಿ ಮಂಡಳಿ ಸದಸ್ಯರು ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು. ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಅಧ್ಯಕ್ಷರ ನಾಮನಿರ್ದೇಶನಕ್ಕೆ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಮಂಡ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಅವರು ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಗೆ ಡಾ.ಎಚ್.ಎಸ್.ಮುದ್ದೇಗೌಡ ಅವರನ್ನು ಅಧ್ಯಕ್ಷರು ಎಂದು ಘೋಷಿಸಿ ಆದೇಶ ಹೊರಡಿಸಿದ್ದರು ಎಂದರು.

ನೂತನ ಕಾರ್ಯಕಾರಿ ಮಂಡಳಿ ರಚನೆಗೆ ನೀಡಿದ ನಿರ್ದೇಶನವು ಸಾಹಿತ್ಯ ಪರಿಷತ್ತಿನ ಬೈಲಾ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಜಿಲ್ಲೆಯ ಕಾರ್ಯಕಾರಿ ಮಂಡಳಿ ಸದಸ್ಯರು ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು. ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಎಂದರು.

ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರು ಜಿಲ್ಲಾ ಸಮಿತಿಗೆ ನೇಮಿಸಿದ್ದ ಅಧ್ಯಕ್ಷರ ನಾಮನಿರ್ದೇಶನಕ್ಕೆ ತಡೆ ನೀಡಿರುವುದರಿಂದ ಮೊದಲಿನಂತೆ ಜಿಲ್ಲೆಯ ಕಾರ್ಯಕಾರಿ ಮಂಡಳಿ ಹಾಗೂ ಎಲ್ಲ ತಾಲೂಕುಗಳ ಮತ್ತು ಹೋಬಳಿಗಳ ಸಮಿತಿಗಳು ಯಥಾವತ್ತಿನಂತೆ ಮುಂದುವರೆಯಲಿವೆ ಎಂದು ವಿವರಿಸಿದರು.

ಬೈಲಾದ ಪ್ರಕಾರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಕಾರ್ಯಕಾರಿ ಸಮಿತಿ ಚುನಾಯಿತ ಸದಸ್ಯರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಬೇಕು. ಬೇರೆಯವರನ್ನು ಆಯ್ಕೆ ಮಾಡಲು ಆಯಾ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಅಧಿಕಾರ ಹೊಂದಿದೆ ಅಥವಾ ಜಿಲ್ಲಾ ಘಟಕ ಆಯ್ಕೆ ಮಾಡುವವರನ್ನು ಕೇಂದ್ರ ಸಮಿತಿಗೆ ಸಲ್ಲಿಸಿ ಆಯ್ಕೆ ಮಾಡಿಕೊಳ್ಳಬಹುದು ಎಂದರು.

87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಜಿಲ್ಲೆಯ ಎಲ್ಲ ಶಾಸಕರು, ಸಂಘಟನೆಗಳು, ಸಾರ್ವಜನಿಕರು ಹಾಗೂ ರಾಜ್ಯದ ಎಲ್ಲ ಕನ್ನಡ ಪ್ರೇಮಿಗಳಿಗೆ ಧನ್ಯವಾದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಮಳವಳ್ಳಿ ತಾಲೂಕು ಅಧ್ಯಕ್ಷ ಎಲ್.ಚೇತನ್‌ಕುಮಾರ್, ಪಾಂಡವಪುರ ತಾಲೂಕು ಅಧ್ಯಕ್ಷ ಪ್ರಕಾಶ್, ಪದಾಧಿಕಾರಿಗಳಾದ ಅಂಜನಾ ಶ್ರೀಕಾಂತ್, ಪ್ರಮೀಳಾ, ಸುವರ್ಣಾವತಿ, ರತ್ನಾಕರ್ ಇದ್ದರು.