ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ಯಶಸ್ವಿ ಮತದಾನ ನಡೆಯಿತು. ಕೆಲ ಮತಗಟ್ಟೆಗಳ ಬಳಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ವಾಕ್ಸಮರ, ಪ್ರತಿಭಟನೆ ಸೇರಿದಂತೆ ಸಣ್ಣ ಪ್ರಮಾಣದ ಅಹಿತಕರ ಘಟನೆಗಳ ನಡುವೆ ಬಹುತೇಕ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಜರುಗಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ಯಶಸ್ವಿ ಮತದಾನ ನಡೆಯಿತು. ಕೆಲ ಮತಗಟ್ಟೆಗಳ ಬಳಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ವಾಕ್ಸಮರ, ಪ್ರತಿಭಟನೆ ಸೇರಿದಂತೆ ಸಣ್ಣ ಪ್ರಮಾಣದ ಅಹಿತಕರ ಘಟನೆಗಳ ನಡುವೆ ಬಹುತೇಕ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಜರುಗಿತು.

ಬೆಂಗಳೂರು ಶಿಕ್ಷಕರ ಕ್ಷೇತ್ರವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ 58 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆವರೆಗೂ ಬಿರುಸಿನ ಮತದಾನ ನಡೆಯಿತು. ಪ್ರತಿ ಮತಗಟ್ಟೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 6 ಮಂದಿ ಸ್ಪರ್ಧಿಗಳಿದ್ದಾರೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಮತ್ತು ಜೆಡಿಎಸ್‌ ಅಭ್ಯರ್ಥಿ ಎ.ಪಿ.ರಂಗನಾಥ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬೆಳಗ್ಗೆ ನಿಧಾನಗತಿಯಲ್ಲಿ ಸಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಬಿರುಸುಗೊಂಡಿತ್ತು. ಬೆಳಗ್ಗೆಯಿಂದಲೇ ಮತಗಟ್ಟೆಗಳ ಸಮೀಪ ಬಿಜೆಪಿ-ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಜಮಾಯಿಸಿದ್ದರು. ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರ ಬಳಿ ಮನವಿ ಮಾಡುವ ದೃಶ್ಯಗಳು ಮತಗಟ್ಟೆಗಳ ಬಳಿ ಕಾಣಸಿಕ್ಕಿತು.

ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ:

ನಾಗರಬಾವಿಯ ಅಂಬೇಡ್ಕರ್ ಕಾಲೇಜು ಮತಗಟ್ಟೆ‌ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು. ಕೊಟ್ಟಿಗೆಪಾಳ್ಯದ ಮಾಜಿ ಕಾರ್ಪೊರೇಟರ್‌ ಮೋಹನ್‌ ಕುಮಾರ್‌ಗೆ ಬಿಜೆಪಿ ಕಾರ್ಯಕರ್ತರು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿತು. ಈ ವಿಚಾರವಾಗಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ವಿಚಾರ ತಿಳಿದು ಜಿಬಿಎ ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್‌ ಮತಗಟ್ಟೆಗೆ ಬಂದು ಘಟನೆ ಕುರಿತು ಪೊಲೀಸರಿಂದ ಮಾಹಿತಿ ಪಡೆದರು.

ಗೆಲುವು ಖಚಿತ: ಪುಟ್ಟಣ್ಣ

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಚೆನ್ನಾಗಿ ಮತದಾನ ಆಗುತ್ತಿದೆ. ಶಿಕ್ಷಕರ ಸಮೂಹ ಎಲ್ಲ ಕಡೆ ಮತದಾನ ಮಾಡುತ್ತಿದ್ದಾರೆ. ನನಗೆ ಗೆಲುವಾಗುವುದು ಖಚಿತ. ಕಳೆದ ಬಾರಿಯೂ ನಾನೇ ಗೆದ್ದಿದ್ದೆ. ಈ ಚುನಾವಣೆಯಲ್ಲಿ ಮತ ಹಾಕುವವರು ಶಿಕ್ಷಕರೇ ಹೊರತು ಪಕ್ಷದ ಕಾರ್ಯಕರ್ತರಲ್ಲ. ಇಲ್ಲಿ ಬಲ ಪ್ರಯೋಗ, ಒತ್ತಡ ನಡೆಯಲ್ಲ. ಶಿಕ್ಷಕರು ಸರಿಯಾಗಿ ಮೌಲ್ಯ ಮಾಪನ ಮಾಡುತ್ತಿದ್ದಾರೆ. ನಾನು ಶಿಕ್ಷಕರಿಗೆ ಸ್ಪಂದಿಸಿದ್ದೇನೆ. ಅವರು ನನ್ನ ಕೈ ಹಿಡಿದು ದೊಡ್ಡ ಅಂತರಿಂದ ಗೆಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಮುನಿರತ್ನ ನೇತೃತ್ವದಲ್ಲಿ ಪ್ರತಿಭಟನೆ:

ಇದೇ ವೇಳೆ ನಾಗರಬಾವಿಯ ಅಂಬೇಡ್ಕರ್‌ ಕಾಲೇಜು ಮತಗಟ್ಟೆ ಬಳಿ ಬಿಜೆಪಿ ಶಾಸಕ ಮುನಿರತ್ನ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿತು. ಮತಗಟ್ಟೆ ಬಳಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಗುಂಪುಗಳು ಜಮಾಯಿಸಿದ್ದವು. ಶಾಸಕ ಮುನಿರತ್ನ ಮತಗಟ್ಟೆ ಬಳಿ ಬರುತ್ತಿದ್ದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ ಗಲಾಟೆ ಶುರುವಾಯಿತು. ಈ ವೇಳೆ ಶಾಸಕರ ರಕ್ಷಣೆಗೆ ಧಾವಿಸಿದ ಪಾಲಿಕೆ ಬಿಜೆಪಿ ಮಾಜಿ ಸದಸ್ಯ ಗೋವಿಂದರಾಜು ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಇದರಿಂದ ಮತಗಟ್ಟೆ ಬಳಿ ಕೆಲ ಕಾಲ ಗೊಂದಲ ವಾತಾವರಣ ಸೃಷ್ಟಿಯಾಯಿತು. ಈ ಘಟನೆ ಖಂಡಿಸಿ ಶಾಸಕ ಮುನಿರತ್ನ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು:

ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆ ತಿಳಿಗೊಳಿಸಿದರು. ಶಾಸಕ ಮುನಿರತ್ನ ಅವರ ಮನವೊಲಿಸಿ ಪ್ರತಿಭಟನೆ ಕೈಬಿಡಿಸುವಲ್ಲಿ ಯಶಸ್ವಿಯಾದರು. ಬಳಿಕ ಹಲ್ಲೆಗೊಳಗಾದ ಗೋವಿಂದರಾಜು ಘಟನೆ ಸಂಬಂಧ ದೂರು ನೀಡಲು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆ ಕಡೆಗೆ ತೆರಳಿದರು. ಈ ಘಟನೆ ಬಳಿಕ ಅಂಬೇಡ್ಕರ್‌ ಕಾಲೇಜು ಮತಗಟ್ಟೆ ಬಳಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಯಿತು. ಮತದಾನ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಪೊಲೀಸರು ನೋಡಿಕೊಂಡರು.

ಶಾಸಕರ ನಿಂದಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ:

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಕಾರ್ಪೊರೇಟರ್‌ ಗೋವಿಂದರಾಜು, ಬೆಳಗ್ಗೆ ಮತಹಾಕಲು ಬಂದ ಮತದಾರರಿಗೆ ಕಾಂಗ್ರೆಸ್‌ ಕಾರ್ಯಕರ್ತರು ತೊಂದರೆ ನೀಡುತ್ತಿದ್ದರು. ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಒತ್ತಡ ಹಾಕುತ್ತಿದ್ದರು. ಶಾಸಕ ಮುನಿರತ್ನ ಮತಗಟ್ಟೆ ಬಳಿ ಬಂದಾಗ ಆಕ್ಷೇಪಾರ್ಹ ಪದ ಬಳಸಿ ಘೋಷಣೆ ಕೂಗಿದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ದೂರು ನೀಡುತ್ತೇನೆ ಎಂದು ಹೇಳಿದರು.

ಫ್ಲೆಕ್ಸ್‌ ವಿಚಾರಕ್ಕೆ ಗಲಾಟೆ:

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್ ಪಟ್ಟಣದ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಫ್ಲೆಕ್ಸ್‌ ಇರಿಸಿಕೊಂಡು ಮತದಾರರ ಹೆಸರು ಬರೆದುಕೊಡುತ್ತಿದ್ದರು. ಈ ವೇಳೆ ಆನೇಕಲ್‌ ಪುರಸಭೆ ಮುಖ್ಯಾಧಿಕಾರಿ ಕುಮಾರ್‌ ಅವರು ಆ ಫ್ಲೆಕ್ಸ್‌ ತೆರವುಗೊಳಿಸಿದರು. ಇದನ್ನು ಬಿಜೆಪಿ ಕಾರ್ಯಕರ್ತರು ವಿರೋಧಿಸಿದರು. ಈ ವೇಳೆ ಕಾರ್ಯಕರ್ತರು ಮತ್ತು ಕುಮಾರ್ ನಡುವೆ ಮಾತಿಕ ಚಕಮಕಿ ನಡೆಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದು ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಂಡರು.

ನನ್ನ ಮೇಲೆ ಹಲ್ಲೆಗೆ ಸಂಚು: ಶಾಸಕ ಮುನಿರತ್ನ ಆರೋಪ

ಮತಗಟ್ಟೆ ಬಳಿ ನಾನು ಬರುತ್ತಿದ್ದಂತೆ ಹಲ್ಲೆ ಮಾಡಲು ಕಾಂಗ್ರೆಸ್‌ ಕಾರ್ಯಕರ್ತರು ಸಂಚು ರೂಪಿಸಿದ್ದರು. ಮಾಜಿ ಕಾರ್ಪೊರೇಟರ್‌ ಗೋವಿಂದರಾಜು ನನ್ನ ರಕ್ಷಣೆಗೆ ಬಂದಾಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಪೊಲೀಸರು ನನಗೆ ರಕ್ಷಣೆ ನೀಡಿದರು. ಈ ಹಲ್ಲೆ ಖಂಡಿಸಿ ನಾನು ರಿಂಗ್ ರಸ್ತೆಯಲ್ಲಿ ಧರಣಿ ಕುಳಿತೆ. ಈ ವೇಳೆ ಡಿಸಿಪಿ ಅವರು ಅಲ್ಲಿಗೆ ಬಂದು ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಧರಣಿ ಕೈಬಿಡಲಾಯಿತು. ಈ ವಿಚಾರವನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ತಿಳಿಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೂ ತಿಳಿಸಲು ಪ್ರಯತ್ನಿಸಿದ್ದೇನೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದರು.