ಬಜೆಟ್ ಮೇಲೆ ಭಾರೀ ನಿರೀಕ್ಷೆ, ಈಡೇರೀತೆ ಕನಸು

| Published : Feb 16 2024, 01:51 AM IST

ಸಾರಾಂಶ

ಇಂದು ರಾಜ್ಯ ಬಜೆಟ್, ಜಿಲ್ಲೆಯ ಜನತೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಉನ್ನತ ಮಟ್ಟದ ಆರೋಗ್ಯ ಸೇವೆ, ಶಿಕ್ಷಣ, ಸಂಪರ್ಕ, ಮೂಲಭೂತ ಸೌಲಭ್ಯ, ರೈತರು, ತೋಟಗಾರಿಕೆ, ಮೀನುಗಾರಿಕೆಗೆ ವಿಶೇಷ ಯೋಜನೆ ಸೇರಿದಂತೆ ಹತ್ತು ಹಲವು ಕನಸುಗಳನ್ನು ಜಿಲ್ಲೆಯ ಜನತೆ ಕಾಣುತ್ತಿದ್ದಾರೆ.

ಕಾರವಾರ: ಇಂದು ರಾಜ್ಯ ಬಜೆಟ್, ಜಿಲ್ಲೆಯ ಜನತೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಉನ್ನತ ಮಟ್ಟದ ಆರೋಗ್ಯ ಸೇವೆ, ಶಿಕ್ಷಣ, ಸಂಪರ್ಕ, ಮೂಲಭೂತ ಸೌಲಭ್ಯ, ರೈತರು, ತೋಟಗಾರಿಕೆ, ಮೀನುಗಾರಿಕೆಗೆ ವಿಶೇಷ ಯೋಜನೆ ಸೇರಿದಂತೆ ಹತ್ತು ಹಲವು ಕನಸುಗಳನ್ನು ಜಿಲ್ಲೆಯ ಜನತೆ ಕಾಣುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ಇಂದು ನಿನ್ನೆಯದಲ್ಲ. ಇಲ್ಲಿ ಜನತೆಯ ಜೀವಕ್ಕೇ ಗ್ಯಾರಂಟಿ ಇಲ್ಲ. ಹೃದಯಾಘಾತ ಆದರೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರೆ, ತುರ್ತು ಸಂದರ್ಭದಲ್ಲಿ ಸುಸಜ್ಜಿತ ಆಸ್ಪತ್ರೆಗೆ ಸೇರಿಸಬೇಕು ಎಂದರೆ 4-5 ಗಂಟೆ ಕ್ರಮಿಸಿ ಮಂಗಳೂರು, ಉಡುಪಿ, ಬೆಳಗಾವಿ, ಗೋವಾ ಮತ್ತಿತರ ಕಡೆ ಹೋಗಬೇಕು. ಅಲ್ಲಿಯ ತನಕ ಜೀವ ಹಿಡಿದುಕೊಂಡಿರಲೇಬೇಕು. ಇದೇ ಕಾರಣಕ್ಕೆ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಕಳೆದ ವಿಧಾನಸಭೆ ಚುನಾವಣೆ ವೇಳೆ ವಿಧಾನಸಭೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಗ್ರಹ ಕೇಳಿಬಂತು. ಅಂದಿನ ಬಿಜೆಪಿ ಸರ್ಕಾರ ಕುಮಟಾದಲ್ಲಿ ಸ್ಥಳ ಪರಿಶೀಲನೆ ನಡೆಸಿ ಬಜೆಟ್‌ನಲ್ಲಿ ಘೋಷಣೆ ಮಾಡಿತು. ಅಷ್ಟರಲ್ಲಿ ಚುನಾವಣೆ ಬಂದು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು ತಣ್ಣಗಾಯಿತು. ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಆಸ್ಪತ್ರೆ ಕುರಿತು ಪ್ರಸ್ತಾಪವೇ ಇರಲಿಲ್ಲ. ರಾಜಕೀಯ ಏನೇ ಇರಲಿ. ಜಿಲ್ಲೆಯ ಜನತೆ ಮಾತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಈ ಬಜೆಟ್‌ನಲ್ಲಾದರೂ ಘೋಷಣೆ ಆಗಲಿದೆ ಎಂದು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪ್ರವಾಸೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆ. ನೈಸರ್ಗಿಕ, ಧಾರ್ಮಿಕ, ಪೌರಾಣಿಕ, ಐತಿಹಾಸಿಕ ತಾಣಗಳಿಗೆ ಕೊರತೆ ಇಲ್ಲ. ಆದರೆ ಎಲ್ಲೆಡೆ ಮೂಲಭೂತ ಸೌಲಭ್ಯದ ಕೊರತೆ ಇದೆ. ಪ್ರಮುಖ ಜಲಪಾತಗಳಿಗೆ ತೆರಳಲು ರಸ್ತೆಯೇ ಸಮರ್ಪಕವಾಗಿಲ್ಲ. ಜಲಪಾತಗಳ ಎದುರೇ ನಿಂತಿದ್ದರೂ ಕುಡಿಯಲು ನೀರು ಸಿಗದು. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಯೋಜನೆಯನ್ನು ಪ್ರಕಟಿಸಬೇಕು ಎನ್ನುವುದು ಬಹುತೇಕ ಜನರ ಅಭಿಪ್ರಾಯ.

ಅಡಕೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಆದರೆ ಅಡಕೆ ಬೆಳೆಗಾರರಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ರಿಯಾಯತಿ ದರದಲ್ಲಿ ಉಪಕರಣಗಳನ್ನು ನೀಡುವ ಬಗ್ಗೆ ಘೋಷಣೆ ಆಗಬೇಕು.

ಕರಾವಳಿಯುದ್ದಕ್ಕೂ ಬಹುತೇಕ ಜನರು ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಮೀನುಗಾರರು ವಾಸ್ತವ್ಯ ಮಾಡಿರುವ ಸಾವಿರಾರು ಮನೆಗಳ ಜಾಗಕ್ಕೆ ಪಟ್ಟಾ ಇಲ್ಲ. ಇದರಿಂದ ಸರ್ಕಾರದ ವಸತಿ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಇವರಿಗೆ ಪಟ್ಟಾ ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗಬೇಕು.

ಜಿಲ್ಲೆಯ ಕುಗ್ರಾಮಗಳಲ್ಲಿ ದಲಿತರು, ಹಿಂದುಳಿದವರು, ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಇವರಿಗೆ ಸಂಪರ್ಕವೇ ಇರುವುದಿಲ್ಲ. ಕುಗ್ರಾಮಗಳಲ್ಲಿ ಕೊನೆಪಕ್ಷ ಕಾಲುಸೇತುವೆಯನ್ನಾದರೂ ನಿರ್ಮಿಸುವ ಘೋಷಣೆ ಆಗಬೇಕಿದೆ.

ಕರಾವಳಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದು ಮಾಮೂಲಿ. ಕಡಲತೀರದ ಅಂಚಿನ ಗ್ರಾಮಗಳ ಬಾವಿಯಲ್ಲಿ ಉಪ್ಪು ನೀರು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಪೈಪ್‌ಲೈನ್ ಮೂಲಕ ನೀರು ಪೂರೈಕ ಮಾಡಬೇಕೆಂಬ ಆಗ್ರಹ ಬಹುಕಾಲದಿಂದ ಇದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಇಲ್ಲ. ಜತೆ ವಿ.ವಿ. ಸ್ಥಾಪನೆಯ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಉತ್ತರ ಕನ್ನಡ ಜಿಲ್ಲೆ ಬಹುಪಾಲು ಅರಣ್ಯದಿಂದ ಆವೃತವಾಗಿದೆ. ಭೌಗೋಳಿಕವಾಗಿ ಅರೆಬಯಲು ಸೀಮೆ, ಮಲೆನಾಡು ಹಾಗೂ ಕರಾವಳಿಯನ್ನು ಹೊಂದಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉನ್ನತ ಶಿಕ್ಷಣ, ರೈತರು, ತೋಟಗಾರಿಕೆಗೆ ಅನುಕೂಲ ಕಲ್ಪಿಸಲು ಯೋಜನೆ ಘೋಷಿಸಬೇಕು ಎನ್ನುವುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಗ್ರಾಪಂ ಸದಸ್ಯ ರಾಜೀವ ಭಟ್ ಹೇಳುತ್ತಾರೆ.