ಸಾರಾಂಶ
-ಕಳೆದ ಬಜೆಟ್‌ನಲ್ಲಿ ವಿಜ್ಞಾನ ತಾರಾಲಯ, ಹತ್ತಿ ಸಂಸ್ಕರಣಾ ಘಟಕ, ಭತ್ತದ ತಳಿ ಸಂಶೋಧನಾ ಕೇಂದ್ರ ಅನುಷ್ಠಾನದಲ್ಲಿ ಸರ್ಕಾರದ ಮೀನಮೇಷ
-------ಬಜೆಟ್ ಘೋಷಣೆಗಳೇ ಹೊರತು ಅನುಷ್ಠಾನಗಳೇ ಇಲ್ಲ
----ಕನ್ನಡಪ್ರಭ ವಾರ್ತೆ ಯಾದಗಿರಿ
15ವರ್ಷಗಳ ಹಿಂದೆ ಜಿಲ್ಲಾ ಕೇಂದ್ರವೆಂದು ಘೋಷಣೆಗೊಂಡ ಯಾದಗಿರಿ ಅಭಿವೃದ್ಧಿಗಾಗಿ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ಒಂದಿಷ್ಟು ಅನುಕೂಲತೆಗಳಿಗೆ ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದೇ ಎಂಬ ನಿರೀಕ್ಷೆಗಳು ಜನರಲ್ಲಿ ಗರಿಗೆದರಿವೆ. ಅಷ್ಟಕ್ಕೂ, ಘೋಷಣೆಗಳ ಬದಲು, ಅವುಗಳಲ್ಲಿ ಒಂದಿಷ್ಟಾದರೂ ಅನುಷ್ಠಾನವಾಗುವುದೇ ಎಂಬ ಪ್ರಶ್ನೆಯೂ ಕೂಡ ಕಾಡುತ್ತಿದೆ.ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ವಿಜ್ಞಾನ ತಾರಾಲಯ, ಹತ್ತಿ ಸಂಸ್ಕರಣಾ ಘಟಕ, ಭತ್ತದ ತಳಿ ಸಂಶೋಧನಾ ಕೇಂದ್ರ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿಶ್ವ ವಿದ್ಯಾನಿಲಯ ಅಡಿಯಲ್ಲಿ ಪ್ರತಿ ತಾಲೂಕುಗಳಲ್ಲಿ ಕಾಲೇಜು ಸ್ಥಾಪನೆ ಘೋಷಣೆ ಮಾಡಲಾಗಿತ್ತು, ಆದರೆ, ಅವುಗಳ ಅನುಷ್ಠಾನದಲ್ಲಿ ಸರ್ಕಾರದ ಮೀನಮೇಷ, ಬಜೆಟ್ ಬಗ್ಗೆ ಜನರ ನಿರಾಸೆಗೆ ಕಾರಣವಾಗುತ್ತಿದೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ನ್ಯಾಯ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.ತಾಲೂಕುಗಳ ಘೋಷಣೆಯಾಯ್ತಷ್ಟೇ:
ಈ ಹಿಂದೆ 2018ರಲ್ಲಿ ಅಂದಿನ ಸರ್ಕಾರ ವಡಗೇರಾ, ಗುರುಮಠಕಲ್ ಮತ್ತು ಹುಣಸಗಿ ನೂತನ ತಾಲೂಕುಗಳ ರಚನೆ ಮಾಡಿತು, ಆದರಲ್ಲಿ ಕಚೇರಿ ಕಟ್ಟಡಗಳು, ಬಹುತೇಕ ಅಧಿಕಾರಿ-ಸಿಬ್ಬಂದಿಯ ಕೊರತೆ ಬಗೆಹರಿದಿಲ್ಲ. ಇದರಿಂದ ಜನರ ಗೋಳು ಕೇಳುವರು ಯಾರು ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ,ಸರ್ಕಾರ ಬಜೆಟ್‌ನಲ್ಲಿ ಮೊದಲು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನುದಾನ, ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕ ಮಾಡುವುದು ಅಗತ್ಯವಾಗಿದೆ. ಯಾದಗಿರಿ ಮತಕ್ಷೇತ್ರದ ವಡಗೇರಾ ತಾಲೂಕಿನ ಕೊನೆಯ ಭಾಗದ ರೈತರಿಗೆ ನಾರಾಯಣಪೂರ ಬಸವಸಾಗರ ಜಲಾಶಯದ ನೀರು ತಲುಪದೇ ರೈತಾಪಿ ವರ್ಗ ಸಂಕಷ್ಟದಲ್ಲಿದ್ದಾರೆ.
ಗುರುಮಠಕಲ್ ಮತಕ್ಷೇತ್ರದ ಹತ್ತಿಕುಣಿ ಹಾಗೂ ಸೌದಾಗರ ಜಲಾಶಯಗಳು ಕಾಲುವೆಗಳ ದುರಸ್ತಿ ಮಾಡುವುದು ಅಗತ್ಯವಾಗಿದೆ. ಯಾದಗಿರಿ ನಗರಕ್ಕೆ ಸಮೀಪದ ಭೀಮಾನದಿ ಗುರುಸುಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ನಗರದಲ್ಲಿ ವಾಸಿಸುವ ಜನರಿಗೆ ನಗರಸಭೆಯಿಂದ ದಿನಾಲೂ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಯೋಜನೆ ಪೂರ್ಣಗೊಳಿಸಲು ಸರ್ಕಾರ ವಿಶೇಷ ಅನುದಾನ ನೀಡಿ, ಪೂರ್ಣಗೊಳಿಸಲು ಪ್ರಯತ್ನಿಸುವುದು ಅನಿವಾರ್ಯವಾಗಿದೆ.ನಿರುದ್ಯೋಗ-ಗುಳೇ:
ನಿರುದ್ಯೋಗ-ಗುಳೇ ಇಲ್ಲಿನ ದೊಡ್ಡ ಸಮಸ್ಯೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾದಗಿರಿ-ರಾಯಚೂರ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಪರಿಗಣಿಸಿವೆ. ಗುರುಮಠಕಲ್ ಮತಕ್ಷೇತ್ರದ ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ 12 ವರ್ಷಗಳ ಹಿಂದೆ 3200 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ, ಅದರಲ್ಲಿ ಸಣ್ಣ-ಪುಟ್ಟ ಕೆಲವು ಕಾರ್ಖಾನೆಗಳು ಕಾರ್ಯಾರಂಭಗೊಂಡಿವೆ, ಪ್ರಮುಖವಾಗಿ ರೈಲ್ವೆ ಬಿಡಿ ಭಾಗಗಳ, ಭೋಗಿ ತಯಾರಿಕಾ ಘಟಕ್ಕೆ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಲು ಅಷ್ಟೊಂದು ಆಸಕ್ತಿವಹಿಸಿಲ್ಲ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಕೂಡ ಭೇಟಿ ನೀಡಿ, ಪರಿಶೀಲಿಸಿ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ, ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಕೂಡ ನಯಾಪೈಸೆ ಬಿಡುಗಡೆ ಮಾಡಿಲ್ಲ, ಇನ್ನು ಯುವಕರಿಗೆ ಉದ್ಯೋಗಗಳು ಸಿಗುವ ಮಾತು ದೂರವಾಗಿದೆ, ಇದರಿಂದ, ತಾಂತ್ರಿಕ ಕೌಶಲ್ಯ ಅಭ್ಯಾಸ ಮಾಡಿದ ವಿಧ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದೆ.ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ಪ್ರತಿವರ್ಷ ಹಿಂದುಳಿದಿರುವ ಗಿರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ, ಶಿಕ್ಷಕರು ಹಾಗೂ ಆರೋಗ್ಯಧಿಕಾರಿಗಳನ್ನು ನೇಮಕ ಮಾಡಿ, ಸೂಕ್ತ ನಿರ್ವಹಣೆ ಮಾಡಿದಲ್ಲಿ ಮಾತ್ರ ಬದಲಾವಣೆ ಕಾಣಲು ಸಾಧ್ಯ, ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬ ಯಕ್ಷಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಗ್ರಾಮೀಣ ಭಾಗದ ರಸ್ತೆಗಳ ಪರಿಸ್ಥಿತಿ ದೇವರೇ ಬಲ್ಲ, ಸಂಪೂರ್ಣ ಹದಗೆಟ್ಟಿದ್ದು, ಶಾಲಾ ಕಾಲೇಜು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗೆ ನಗರಗಳಿಗೆ ಹಾಗೂ ಪಟ್ಟಣಗಳಿಗೆ ಆಗಮಿಸಲು ತೊಂದರೆ ಅನುಭವಿಸುತ್ತಿದ್ದಾರೆ.ಪ್ರವಾಸೋದ್ಯಮ ಕ್ಷೇತ್ರಕ್ಕೆ ಗಿರಿಜಿಲ್ಲೆ ಪೂರಕವಾಗಿದೆ, ಆದರೆ, ಅವುಗಳ ಅಭಿವೃದ್ಧಿ ಕಡೆಗೆ ಸರ್ಕಾರ ಗಮನ ನೀಡಿ, ಅನುದಾನ ಒದಗಿಸುವುದು ಅವಶ್ಯಕವಾಗಿದೆ, ಈ ವರ್ಷ ಬಜೆಟ್‌ನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಮಸ್ಯೆಗಳ ಪ್ರಸ್ತಾವಕ್ಕೆ ಸರ್ಕಾರ ಅಂಕಿತ ಹಾಕುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
----