ಸಾರಾಂಶ
ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಖಾಸಗಿ ಶಾಲಾ-ಕಾಲೇಜುಗಳು ಮಕ್ಕಳ ಪೋಷಕರಿಂದ ಭಾರೀ ಶುಲ್ಕ ವಸೂಲಿ ಮಾಡುತ್ತಿರುವುದು ಪ್ರತಿವರ್ಷ ಸಾಮಾನ್ಯವಾಗಿಬಿಟ್ಟಿದೆ.ಖಾಸಗಿ ಶಾಲೆಗಳು ಶಾಲಾ ಆರಂಭದ ದಿನಗಳಲ್ಲಿಯೇ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಶುಲ್ಕ ವಸೂಲಿಗೆ ಇಳಿದಿವೆ. ಶುಲ್ಕದ ವಿವರವನ್ನು ಕಡ್ಡಾಯವಾಗಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಆದೇಶವಿದ್ದರೂ ಯಾವೊಂದು ಖಾಸಗಿ ಶಾಲೆಗಳೂ ಪಾಲಿಸುತ್ತಿಲ್ಲ. ಸೂಚನಾಫಲಕದಲ್ಲಿ ಶುಲ್ಕದ ವಿವರವನ್ನು ಪ್ರಕಟಿಸದೆ ದರ್ಪ ಮೆರೆಯುತ್ತಿವೆ.
ದಂಡ ವಸೂಲಿಯಾಗಿಲ್ಲ:ಶುಲ್ಕದ ವಿವರವನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದರೂ ಖಾಸಗಿ ಶಾಲೆಯವರು ಪ್ರಕಟಿಸದೇ ಮುಲಾಜಿಲ್ಲದೆ ವಸೂಲಿಗಿಳಿದಿದ್ದಾರೆ. ನಿಯಮಗಳನ್ನು ಗಾಳಿಗೆ ತೂರುವ ಶಾಲೆಗಳಿಗೆ ಸರಕಾರ ₹೧ ಲಕ್ಷ ದಂಡ ವಿಧಿಸಬೇಕು ಎಂಬ ನಿಯಮ ನಿಯಮವಾಗಿಯೇ ಉಳಿದಿದೆ. ತಾಲೂಕಿನಲ್ಲಿಯೂ ದಂಡ ವಿಧಿಸಿದ ಉದಾಹರಣೆಗಳಿಲ್ಲ. ಪಟ್ಟಣದ ಎಂಟಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಶಾಲಾ-ಕಾಲೇಜುಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಎರಡು ಖಾಸಗಿ ಶಾಲೆಗಳು ಭಾರಿ ಮೊತ್ತದ ಶುಲ್ಕ ವಸೂಲಿ ಮಾಡುತ್ತಿರುವುದು ಹೊಸದೇನಲ್ಲ.
ಪೋಷಕರ ಜೇಬಿಗೆ ಕತ್ತರಿ:ಖಾಸಗಿ ಶಾಲೆಯವರು ನೋಂದಣಿ, ಬಟ್ಟೆ, ಪುಸ್ತಕ, ಬ್ಯಾಗ್, ವಾಹನದ ಬಾಡಿಗೆ ಎಂದು ವಸೂಲಿ ಮಾಡುತ್ತಿದ್ದಾರೆ. ಬಟ್ಟೆ ವ್ಯಾಪಾರಿಗೆ ಇಂತಿಷ್ಟು ಮೊತ್ತಕ್ಕೆ ಒಂದು ಜೊತೆ ಬಟ್ಟೆ ಎಂದು ಮಾತಾಡಿ, ಅತ್ಯಂತ ಕಳಪೆ ಗುಣಮಟ್ಟದ ಬಟ್ಟೆಗಳನ್ನು ಮಕ್ಕಳಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ತಾಲೂಕಿನ ಖಾಸಗಿ ಶಾಲೆಗಳಲ್ಲಿ ಪ್ರತೀ ಮಗುವಿಗೆ ₹೨೦ ರಿಂದ ೩೦ ಸಾವಿರ ವಸೂಲಿ ಮಾಡುತ್ತಿದ್ದಾರೆ. ಶುಲ್ಕ ತೆಗೆದುಕೊಂಡ ಮೇಲೆ ಯಾವುದೇ ಅಧಿಕೃತ ರಸೀದಿಗಳನ್ನು ಶಾಲೆಗಳು ನೀಡುತ್ತಿಲ್ಲ. ಸರ್ಕಾರಕ್ಕೆ ಲೆಕ್ಕ ಕೊಡುವ ರಸೀದಿಯೇ ಬೇರೆ, ಪೋಷಕರಿಂದ ವಸೂಲಿ ಮಾಡಿದ ರಸೀದಿ ಬೇರೆಯಾಗಿರುತ್ತದೆ.
ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಖಾಸಗಿ ಶಾಲೆಗಳು ಕಡ್ಡಾಯವಾಗಿ ನೋಟಿಸ್ ಬೋರ್ಡ್ ಮೇಲೆ ತರಗತಿವಾರು ಶುಲ್ಕದ ಮಾಹಿತಿ ಪ್ರಕಟಿಸಬೇಕು. ಹೆಚ್ಚು ಶುಲ್ಕ ವಸೂಲಿ ಮಾಡುವ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ನವೀಕರಣಗೊಳ್ಳದ, ಶಿಕ್ಷಣ ಇಲಾಖೆಯ ಮಾರ್ಗಸೂಚಿ ಅನುಸರಿಸದ ತಾಲೂಕಿನ ಎಂಟು ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ ಎನ್ನುತ್ತಾರೆ ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್.ಖಾಸಗಿ ಶಾಲೆಗಳು ಅಧಿಕ ಶುಲ್ಕ ವಸೂಲಿ ಮೂಲಕ ಮಕ್ಕಳಿಗೆ ಮಾನಸಿಕ ಕಿರಿಕಿರಿ ಕೊಡುತ್ತಿದ್ದಾರೆ. ಸರ್ಕಾರಿ ನಿಯಮ ಪಾಲಿಸದೇ ಶಿಕ್ಷಣವನ್ನು ವ್ಯಾಪಾರವಾಗಿಸಿದ್ದಾರೆ. ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ತೆರೆದಿದೆ. ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸಬೇಕು ಎನ್ನುತ್ತಾರೆ ಶಿಕ್ಷಣಪ್ರೇಮಿ ಒಪ್ಪತ್ತೇಶ್ವರ ಬಣಕಾರ.
;Resize=(128,128))
;Resize=(128,128))
;Resize=(128,128))
;Resize=(128,128))