ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಲವು ದಶಕಗಳಿಂದ ಜಿಲ್ಲೆಯ ಮಲೆನಾಡು ಭಾಗದ ಜನರಿಗೆ ಕಂಟಕಪ್ರಾಯ ಆಗಿರುವ ಮಂಗನಕಾಯಿಲೆ ನಿಯಂತ್ರಣದ ಕುರಿತು ಶೀಘ್ರದಲ್ಲಿ ಬೆಂಗಳೂರಿನಲ್ಲಿ ತಜ್ಞರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಹಾಗೂ ತಂತ್ರಜ್ಞರೊಂದಿಗೆ ಸಭೆ ನಡೆಸಿದ ಅವರು, ಪ್ರಸಕ್ತ ಸಾಲಿನಲ್ಲಿ ಈವರೆಗೆ ಗುರುತಿಸಲಾಗಿರುವ 130 ಪ್ರಕರಣಗಳಲ್ಲಿ 5 ಜನರು ಮೃತರಾಗಿರುವುದು ಅತ್ಯಂತ ನೋವಿನ ಸಂಗತಿ. ಸಕಾಲದಲ್ಲಿ ಕಾಯಿಲೆಗೆ ಚಿಕಿತ್ಸೆ ದೊರೆಯುವಂತೆ ವೈದ್ಯಾಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಸೂಚನೆ ನೀಡಿದರು.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಈ ಹಿಂದೆ ಬಳಸುತ್ತಿದ್ದ ತೈಲವನ್ನು ಹಲವು ಕಾರಣಗಳಿಂದಾಗಿ ಹಿಂಪಡೆಯಲಾಗಿದೆ. ಅಲ್ಲದೇ ಕಾಯಿಲೆಯ ನಿಯಂತ್ರಣಕ್ಕೆ ಔಷಧ ಸಂಶೋಧಿಸಲು ಐದು ವರ್ಷಗಳ ಹಿಂದೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಅಲ್ಲದೇ, ಇತ್ತೀಚೆಗೆ ಕೇಂದ್ರ ವೈದ್ಯಕೀಯ ಸಚಿವರೊಂದಿಗೆ ಈ ಕುರಿತು ಚರ್ಚೆ ನಡೆಸಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರೆಗಳ ಕೊರತೆ ಇದ್ದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.

ಸ್ವಚ್ಛತೆ ನಿರ್ಲಕ್ಷಿಸಿದರೆ ಪರವಾನಗಿ ರದ್ದು:


ಜಿಲ್ಲೆಯಲ್ಲಿ ಡೆಂಘೀಜ್ವರ, ಚಿಕೂನ್‌ ಗುನ್ಯಾ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧಗಳ ದಾಸ್ತಾನು ಇದೆ. ಈ ಕಾಯಿಲೆಗಳ ನಿಯಂತ್ರಣ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿ ಜನರಲ್ಲಿ ಸ್ವಚ್ಚತೆಯ ಕುರಿತು ಅರಿವು ಮೂಡಿಸುವುದು ಸೊಳ್ಳೆಗಳ ನಿಯಂತ್ರಣ ಕ್ರಮದ ಮೊದಲ ಹೆಜ್ಜೆಯಾಗಿದೆ. ಅಗತ್ಯ ಇರುವೆಡೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಯಂತ್ರಗಳನ್ನು ಬಳಸಬೇಕು. ಸ್ಥಳೀಯ ಸಂಸ್ಥೆಗಳು ಅಂಗಡಿ ಮುಂಗಟ್ಟುಗಳ ಪರವಾನಿಗೆ ನೀಡುವ ಸಂದರ್ಭದಲ್ಲಿ ಸ್ವಚ್ಛತೆಯ ಕುರಿತು ನಿಬಂಧನೆಗಳನ್ನು ವಿಧಿಸಬೇಕು. ತಪ್ಪಿದಲ್ಲಿ ನಿರ್ದಾಕ್ಷಿಣ್ಯವಾಗಿ ಪರವಾನಿಗೆ ರದ್ದುಗೊಳಿಸಬೇಕು ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ ಬಡತನ ರೇಖೆಯ ಕೆಳಗಿನ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಚಿಕಿತ್ಸೆಗೆ ದಾಖಲಾದ ವ್ಯಕ್ತಿಯಿಂದ ಹಣ ವಸೂಲಾತಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ಅಂತಹ ಘಟನೆಗಳು ಮರುಕಳಿಸಿ ದೂರುಗಳು ದಾಖಲಾದಲ್ಲಿ ಅಂತಹ ಅಧಿಕಾರಿ-ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಆಯುಷ್ಮಾನ್ ಯೋಜನೆಯ ನೋಂದಣಿ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ, ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿರುವುದು ಕಂಡುಬಂದಿದೆ. ಇಂತಹ ವಿಷಯಗಳಲ್ಲಿ ದೂರುಗಳು ದಾಖಲಾದಲ್ಲಿ ಆರೋಗ್ಯಮಿತ್ರ ಸಿಬ್ಬಂದಿ ಮತ್ತು ಸಂಬಂಧಿಸಿದ ಕಾರ್ಯಕ್ರಮ ಸಂಯೋಜಕರ ವಿರುದ್ಧ ಕ್ರಮ ಅನಿವಾರ್ಯ. ಆರೋಗ್ಯ ಇಲಾಖೆಯ ಎಲ್ಲ ಹಂತದ ಅಧಿಕಾರಿ-ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಸಲ್ಲಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ , ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.