ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್ಐಟಿಕೆ) ಸುರತ್ಕಲ್ ಮಂಗಳೂರು ಹಾಗೂ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್ಐ) ಬೆಂಗಳೂರು ಸಂಯುಕ್ತವಾಗಿ ಎನ್ಐಟಿಕೆಯಲ್ಲಿ ‘ಬ್ಲೂ ಕಾರ್ಬನ್ ಪರಿಸರ ವ್ಯವಸ್ಥೆಗಳು ಮತ್ತು ಮ್ಯಾಂಗ್ರೋವ್ ಯೋಜನೆಗಳು’ ಕುರಿತ ಉನ್ನತ ಮಟ್ಟದ ಹಿತಾಸಕ್ತಿದಾರರ ಸಭೆ ನಡೆಸಿತು.
ಮಂಗಳೂರು: ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್ಐಟಿಕೆ) ಸುರತ್ಕಲ್ ಮಂಗಳೂರು ಹಾಗೂ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್ಐ) ಬೆಂಗಳೂರು ಸಂಯುಕ್ತವಾಗಿ ಎನ್ಐಟಿಕೆಯಲ್ಲಿ ‘ಬ್ಲೂ ಕಾರ್ಬನ್ ಪರಿಸರ ವ್ಯವಸ್ಥೆಗಳು ಮತ್ತು ಮ್ಯಾಂಗ್ರೋವ್ ಯೋಜನೆಗಳು’ ಕುರಿತ ಉನ್ನತ ಮಟ್ಟದ ಹಿತಾಸಕ್ತಿದಾರರ ಸಭೆ ನಡೆಸಿತು.ಕರ್ನಾಟಕ ನೆಟ್ ಜೀರೋ ಟಾಸ್ಕ್ ಫೋರ್ಸ್ನ ಉಪಾಧ್ಯಕ್ಷ, ಕರ್ನಾಟಕದ ಮುಖ್ಯಮಂತ್ರಿಯವರ ಹವಾಮಾನ ಬದಲಾವಣೆ ಸಲಹೆಗಾರರು ಹಾಗೂ ಕರ್ನಾಟಕದ ಹವಾಮಾನ ರಾಯಭಾರಿ ಉಪೇಂದ್ರ ತ್ರಿಪಾಠಿ ಉದ್ಘಾಟಿಸಿ ಮಾತನಾಡಿ, ಸಹಯೋಗ ಮತ್ತು ವಿಸ್ತರಣೀಯ ಯೋಜನೆಗಳ ಮೂಲಕ ರಾಜ್ಯದ ನೆಟ್ ಜೀರೋ ಗುರಿಯನ್ನು ಸಾಧಿಸುವ ದೃಷ್ಟಿಕೋನ ವಿವರಿಸಿದರು. ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷ ಟನ್ ಇಂಗಾಲ ಹೊರಸೂಸುವಿಕೆ ಕಡಿತಗೊಳಿಸುವಂತಹ ಯೋಜನೆಗಳನ್ನು ರೂಪಿಸಬಹುದು. ಇಂತಹ ಉಪಕ್ರಮಗಳಲ್ಲಿ ಭಾಗವಹಿಸುವ ಕೈಗಾರಿಕೆಗಳಿಗೆ ಎನ್ಐಟಿಕೆ ಹಾಗೂ ಇಎಂಪಿಆರ್ಐ ಸಂಸ್ಥೆಗಳ ಬೌದ್ಧಿಕ ಪರಿಣಿತಿ ಹಾಗೂ ಕರ್ನಾಟಕ ಸರ್ಕಾರದ ಸಾಂಸ್ಥಿಕ ಬೆಂಬಲ ದೊರೆಯಲಿದೆ ಎಂದರು.
ಪರಿಸರ ಮತ್ತು ಪರಿಸರ ಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಇಎಂಪಿಆರ್ಐ ಮಹಾನಿರ್ದೇಶಕ ಶ್ರೀನಿವಾಸಲು ಮಾತನಾಡಿ, ಹವಾಮಾನ ಬದಲಾವಣೆಯ ಕುರಿತ ಜಾಗತಿಕ ಚರ್ಚೆ ಅರಿವು, ಎಚ್ಚರಿಕೆ, ಭರವಸೆ, ಕ್ರಿಯೆ ಮತ್ತು ಅವಕಾಶ ಎಂಬ ಐದು ಹಂತಗಳಲ್ಲಿ ಬೆಳವಣಿಗೆಯಾಗಿದೆ. ಹವಾಮಾನ ಕ್ರಮಗಳು ಈಗ ದಾನ ಧರ್ಮವಲ್ಲ. ಅದು ಹಸಿರು ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿ. ಮಂಗಳೂರಿನ ಬಗ್ಗೆ ನಮಗೆ ಅಪಾರ ನಿರೀಕ್ಷೆಗಳಿವೆ. ಉದ್ಯೋಗ ಸೃಷ್ಟಿ, ಹೂಡಿಕೆ ಹಾಗೂ ಕಾರ್ಬನ್ ಹಣಕಾಸಿನ ಅವಕಾಶಗಳನ್ನು ಹೇಳಿದರು.ಕರ್ನಾಟಕ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಪಡೆ ಅಧಿಕಾರಿ ಡಾ.ಮೀನಾಕ್ಷಿ ನೇಗಿ ಮಾತನಾಡಿ, ಹವಾಮಾನ ಕ್ರಮಗಳಲ್ಲಿ ಸಾಮಾಜಿಕ-ಆರ್ಥಿಕ ಅಂಶಗಳು ಹಾಗೂ ವಿಜ್ಞಾನಿಗಳು, ಸಮಾಜ ಮತ್ತು ಸರ್ಕಾರದ ನಡುವಿನ ಸಹಭಾಗಿತ್ವ ಅಗತ್ಯ. ರಾಸಾಯನಿಕ ಗೊಬ್ಬರಗಳಿಂದ ಸಾವಯವ ಕೃಷಿಗೆ ಪರಿವರ್ತನೆಯಾಗುವ ಸಂದರ್ಭದಲ್ಲಿ ಸಣ್ಣ ರೈತರಿಗೆ ಸೂಕ್ತ ಪರಿಹಾರ ದೊರೆತಾಗ ಮಾತ್ರ ಸುಸ್ಥಿರ ಕೃಷಿ ಮತ್ತು ಮಣ್ಣಿನ ಸಂರಕ್ಷಣೆ ಯಶಸ್ವಿಯಾಗುತ್ತದೆ ಎಂದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಅಗುಂಬೆಯಂತಹ ಪ್ರದೇಶಗಳಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕಕಾರಿ. ಮ್ಯಾಂಗ್ರೋವ್ ಹಾಗೂ ಅರಣ್ಯ ಪರಿಸರ ವ್ಯವಸ್ಥೆಗಳು ಕಾರ್ಬನ್ ಕ್ರೆಡಿಟ್ ಸೃಷ್ಟಿಗೆ ಹೆಚ್ಚಿನ ಅವಕಾಶಗಳನ್ನು ಹೊಂದಿವೆ. ಪರಿಸರ ಸಂರಕ್ಷಣೆಯತ್ತ ಜಿಲ್ಲಾಡಳಿತದ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.ಮಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಕಮಲಾ ಮಾತನಾಡಿ, ಮ್ಯಾಂಗ್ರೋವ್ಗಳನ್ನು ಬಾಳೆಗಿಡಕ್ಕೆ ಹೋಲಿಸಿ, ಬೇರುಗಳಿಂದ ಹಿಡಿದು ಎಲೆಗಳವರೆಗೆ ಅದರ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದೆ ಎಂದು ಹೇಳಿದರು. ಮ್ಯಾಂಗ್ರೋವ್ಗಳು ದೀರ್ಘಕಾಲದಿಂದ ಕರಾವಳಿ ಪ್ರದೇಶಗಳಿಗೆ ಚಂಡಮಾರುತ ಹಾಗೂ ಸುನಾಮಿಗಳ ವಿರುದ್ಧ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಿವೆ. ಈಗ ಅವುಗಳನ್ನು ಪರಿಣಾಮಕಾರಿ ಕಾರ್ಬನ್ ಸಿಂಕ್ಗಳಾಗಿ ಗುರುತಿಸುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎನ್ಐಟಿಕೆ ಮತ್ತು ಇಎಂಪಿಆರ್ಐ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಲು ಸಿದ್ಧವಾಗಿದೆ ಎಂದು ಹೇಳಿದರು.ಎನ್ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ ಮಾತನಾಡಿ, ಜಾಗತಿಕ ಶ್ರೇಷ್ಠತೆಯೊಂದಿಗೆ ಸ್ಥಳೀಯ ಪ್ರಸ್ತುತತೆ ಎಂಬ ಸಂಸ್ಥೆಯ ಧ್ಯೇಯವನ್ನು ಪುನರುಚ್ಚರಿಸಿದರು. ಸಾಗರ ಎಂಜಿನಿಯರಿಂಗ್ ಹಾಗೂ ಬ್ಲೂ ಎಕಾನಮಿ ಕ್ಷೇತ್ರಗಳಲ್ಲಿ ಹೊಸ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಆರಂಭಿಸುವ ಅಗತ್ಯವನ್ನು ಸೂಚಿಸಿದರು.
ಒಪ್ಪಂದಕ್ಕೆ ಸಹಿ:ಎನ್ಐಟಿಕೆ ಸುರತ್ಕಲ್ ಮತ್ತು ಇಎಂಪಿಆರ್ಐ ಬೆಂಗಳೂರು ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಹವಾಮಾನ ಕ್ರಮಗಳು, ಬ್ಲೂ ಕಾರ್ಬನ್ ಪರಿಸರ ವ್ಯವಸ್ಥೆಗಳು, ಸುಸ್ಥಿರ ಪರಿಸರ ನಿರ್ವಹಣೆ, ಸಂಶೋಧನೆ, ನೀತಿ ಬೆಂಬಲ, ಸಾಮರ್ಥ್ಯ ಅಭಿವೃದ್ಧಿ, ಹಿತಾಸಕ್ತಿದಾರರ ಪಾಲ್ಗೊಳ್ಳುವಿಕೆ ಹಾಗೂ ಅನುಷ್ಠಾನಾಧಾರಿತ ಉಪಕ್ರಮಗಳಲ್ಲಿ ಸಹಯೋಗವನ್ನು ಬಲಪಡಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.ಸಭೆಯ ನಂತರ ನಡೆದ ತಾಂತ್ರಿಕ ಅಧಿವೇಶನಗಳು ನಡೆಯಿತು. ಎನ್ಐಟಿಕೆ ಸಂಶೋಧನೆ ಮತ್ತು ನವೋದ್ಯಮ ವಿಭಾಗದ ಡೀನ್ ಪ್ರೊ.ಬಿ.ರಾಮಚಂದ್ರ ಭಟ್ ಅಂತರಶಾಸ್ತ್ರೀಯ ಸಂಶೋಧನೆ, ಭಾಷಾಂತರ ಹಾಗೂ ಉದ್ಯಮಶೀಲತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.