ವಿಧಾನ ಸೌಧದ ಆವರಣದಲ್ಲಿ ನಾಯಿ ಕಾಟ ತಪ್ಪಿಸಲು ಉನ್ನತ ಸಭೆ : ಸ್ಪೀಕರ್‌ ಯು. ಟಿ. ಖಾದರ್

| N/A | Published : Feb 04 2025, 12:35 AM IST / Updated: Feb 04 2025, 11:22 AM IST

ವಿಧಾನ ಸೌಧದ ಆವರಣದಲ್ಲಿ ನಾಯಿ ಕಾಟ ತಪ್ಪಿಸಲು ಉನ್ನತ ಸಭೆ : ಸ್ಪೀಕರ್‌ ಯು. ಟಿ. ಖಾದರ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಕಾಟ ತಪ್ಪಿಸಲು ಉನ್ನತ ಮಟ್ಟದ ಸಭೆ ನಡೆಸಲು ಸ್ಪೀಕರ್‌ ಯು.ಟಿ. ಖಾದರ್‌ ಫರೀದ್‌ ನಿರ್ಧರಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

 ಮಂಗಳೂರು  : ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಕಾಟ ತಪ್ಪಿಸಲು ಉನ್ನತ ಮಟ್ಟದ ಸಭೆ ನಡೆಸಲು ಸ್ಪೀಕರ್‌ ಯು.ಟಿ. ಖಾದರ್‌ ಫರೀದ್‌ ನಿರ್ಧರಿಸಿದ್ದಾರೆ!

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಸೌಧದ ಆವರಣದ ಸುತ್ತ ಸಾಕಷ್ಟು ಬೀದಿ ನಾಯಿಗಳು ಅಡ್ಡಾಡುತ್ತಿವೆ. ಕಾರ್ಪೆಟ್‌ಗಳನ್ನು ಹಾಳು ಮಾಡುತ್ತಿರುವುದಲ್ಲದೆ, ವಾಕಿಂಗ್‌ ಬರುವವರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳೂ ಬರುತ್ತಿವೆ. ಹಾಗಾಗಿ ಬೀದಿ ನಾಯಿಗಳ ಈ ಸಮಸ್ಯೆಯನ್ನು ಹೇಗೆ ಇತ್ಯರ್ಥಪಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಾಣಿ ದಯಾ ಸಂಘದ ಮುಖ್ಯಸ್ಥರನ್ನು ಕರೆದು, ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಮೂರ್ನಾಲ್ಕು ದಿನದೊಳಗೆ ಸಭೆ ಕರೆಯುವ ಇರಾದೆ ಇದೆ ಎಂದು ಹೇಳಿದರು.ಬೀದಿ ನಾಯಿಗಳಿಂದ ಸಮಸ್ಯೆಯಾಗುವ ಬಗ್ಗೆ ಕೆಲವರು ಆಕ್ಷೇಪಿಸಿದರೆ, ಮತ್ತೆ ಕೆಲವರು ಅವುಗಳ ಪರವಾಗಿದ್ದಾರೆ. ನಾಯಿಗಳಿಗೂ ಅನ್ಯಾಯ ಆಗಬಾರದು, ಅವುಗಳಿಂದ ಜನರಿಗೂ ತೊಂದರೆ ಆಗಬಾರದು. ಈ ಶ್ವಾನಗಳಿಗೆ ಆಹಾರ ಸೇರಿದಂತೆ ಸಮರ್ಪಕ ನಿರ್ವಹಣೆಗಾಗಿ ಸೂಕ್ತ ಜಾಗ ಒದಗಿಸಲು ಚಿಂತಿಸಲಾಗಿದೆ ಎಂದರು.

ಶಾಸಕರನ್ನಾದರೂ ಹೊರಹಾಕಬಹುದು, ನಾಯಿಗಳನ್ನಲ್ಲ:

ವಿಧಾನಸೌಧ ಆವರಣದ ನಾಯಿಗಳನ್ನು ಹೊರ ಹಾಕೋದೆ ಸಮಸ್ಯೆ. ಶಾಸಕರನ್ನಾದರೂ ಹೊರ ಹಾಕಬಹುದು, ನಾಯಿಗಳನ್ನು ಹೊರ ಹಾಕೋದೆ ದೊಡ್ಡ ಸಮಸ್ಯೆ. ಕಾನೂನು ನಿಯಮಗಳು ಹಾಗೆ ಇವೆ. ಆದ್ದರಿಂದ ಕಾನೂನ ವ್ಯಾಪ್ತಿಯಲ್ಲಿ ಚರ್ಚಿಸಿ ತೀರ್ಮಾನಿಸಲಿದ್ದೇವೆ ಎಂದು ಯು.ಟಿ. ಖಾದರ್‌ ಹೇಳಿದರು.

 ವಿಧಾನ ಸೌಧಕ್ಕೆ ಶಾಶ್ವತ ಲೈಟಿಂಗ್‌ ವ್ಯವಸ್ಥೆ

ಕೆಲವೇ ಕೆಲವು ಪ್ರಮುಖ ದಿನಗಳಂದು ತಾತ್ಕಾಲಿಕವಾಗಿ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ವಿಧಾನಸೌಧಕ್ಕೆ ಶೀಘ್ರವೇ ಶಾಶ್ವತ ಲೈಟಿಂಗ್‌ ವ್ಯವಸ್ಥೆ ಬರಲಿದೆ.

ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹೀಗೆ ಪ್ರಮುಖ ದಿನಗಳು ಹಾಗೂ ಹಬ್ಬಗಳ ಸಂದರ್ಭ ವಿಧಾನಸೌಧಕ್ಕೆ ತಾತ್ಕಾಲಿಕ ಲೈಟಿಂಗ್‌ ವ್ಯವಸ್ಥೆ ಮಾಡಲು ಲಕ್ಷಾಂತರ ರು. ಬೇಕಾಗುತ್ತದೆ. ವರ್ಷದಲ್ಲಿ ಇದರ ವೆಚ್ಚವೇ ಕೆಲವು ಕೋಟಿ ರು. ಆಗುತ್ತದೆ. ಇದಕ್ಕೆ ಬದಲಾಗಿ ವಿಧಾನ ಸೌಧದಲ್ಲಿ ಶಾಶ್ವತ ಲೈಟಿಂಗ್‌ ವ್ಯವಸ್ಥೆ ಕಲ್ಪಿಸಿ, ಪ್ರತಿ ಶನಿವಾರ- ಭಾನುವಾರ ಹಾಗೂ ಇತರ ಪ್ರಮುಖ ದಿನಗಳ ಸಂದರ್ಭ ಬೆಳಕಿನ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿದ್ದೆ. ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಟೆಂಡರ್‌ ಕರೆಯಲಾಗಿದೆ. ಶೀಘ್ರದಲ್ಲೇ ಇದು ಸಾಕಾರವಾಗಲಿದೆ ಎಂದು ಯು.ಟಿ. ಖಾದರ್‌ ತಿಳಿಸಿದರು.