ಪ್ರತಿಭೆ, ಜ್ಞಾನ, ಆಸಕ್ತಿ ಇದ್ದರೆ ಉನ್ನತ ಸ್ಥಾನ: ಸಾಹಿತಿ

| Published : Apr 29 2024, 01:36 AM IST

ಸಾರಾಂಶ

ಮಕ್ಕಳಿಗೆ ಓದುವ, ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಥೆ ಪುಸ್ತಕಗಳನ್ನು ನೀಡುವ ಮೂಲಕ ಅವರಿಗೆ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಮಕ್ಕಳು ಆಸಕ್ತಿಯಿಂದ ಅಭ್ಯಾಸ ಮಾಡುವ ಮೂಲಕ ತಂದೆ- ತಾಯಿಗೆ, ನಾಡಿಗೆ ಕೀರ್ತಿ ತರುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉತ್ತಮ ಹಾಗೂ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಶಿಕ್ಷಣ ಒದಗಿಸಲು ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರತಿಭೆ, ಜ್ಞಾನ, ಆಸಕ್ತಿ ಇದ್ದರೆ ಮಕ್ಕಳು ಉನ್ನತ ಸ್ಥಾನಕ್ಕೆ ಏರಬಹುದು ಎಂದು ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ತಿಳಿಸಿದರು.

ತಾಲೂಕಿನ ಹೇಮಗಿರಿಯ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಯುಕೆಜಿ ಮಕ್ಕಳ ಪದವಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಬೇಸಿಗೆ ಶಿಬಿರದಲ್ಲಿ ವೇದಿಕೆಗಳನ್ನು ಒದಗಿಸಿಕೊಡಬೇಕು. ಆಗ ಮಾತ್ರ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರಯತ್ನಿಸುತ್ತಾರೆ ಎಂದರು.

ಮಕ್ಕಳಿಗೆ ಓದುವ, ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಥೆ ಪುಸ್ತಕಗಳನ್ನು ನೀಡುವ ಮೂಲಕ ಅವರಿಗೆ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಮಕ್ಕಳು ಆಸಕ್ತಿಯಿಂದ ಅಭ್ಯಾಸ ಮಾಡುವ ಮೂಲಕ ತಂದೆ- ತಾಯಿಗೆ, ನಾಡಿಗೆ ಕೀರ್ತಿ ತರುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉತ್ತಮ ಹಾಗೂ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಶಿಕ್ಷಣ ಒದಗಿಸಲು ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಗ್‌ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಮಾತನಾಡಿ, ಬೇಸಿಗೆ ಶಿಬಿರಗಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ವಿವಿಧ ಜಾನಪದ ಕಲೆ, ಸಂಸ್ಕೃತಿ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಆಟದ ಜೊತೆಗೆ ಮನರಂಜನೆ ಇದ್ದಾಗ ಮಕ್ಕಳ ಪ್ರತಿಭೆ ಬೆಳಕಿಗೆ ಬರುತ್ತದೆ. ಶಾಲೆಯಲ್ಲಿ ಮಕ್ಕಳ ನಿರಂತರ ಪದಬಳಕೆ ನೋಡಿದರೆ ಇಂಗ್ಲೀಷ್ ಕಲಿಕೆ ಬಹಳ ಉತ್ತಮವಾಗಿದೆ ಎಂದು ತಿಳಿಸಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಜೀವನದಲ್ಲಿ ಕೇವಲ ಓದು ಮಾತ್ರವಲ್ಲದೇ ವಿವಿಧ ರೀತಿಯ ಕಲಿಕೆ ಬಹಳ ಮುಖ್ಯವಾಗಿದೆ. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಕಲಿತು ಪರಿಣಿತರಾಗಿ ಕಲಾವಿದರಾಗಿ ಹೊರಹೊಮ್ಮುತ್ತಾರೆ. ಶಿಬಿರಗಳಲ್ಲಿ ಮಕ್ಕಳಿಗೆ ಕರಾಟೆ, ಸಂಗೀತ, ನಟನೆ, ನಾಟಕ, ಮನರಂಜನೆ, ಕ್ರೀಡೆ ಮುಂತಾದವುಗಳ ಬಗ್ಗೆ ಪರಿಣಿತರಿಂದ ತರಬೇತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು. ತುಕಾಲಿ ಸಂತೋಷ್, ಮಾನಸ ದಂಪತಿಗಳು ಕೆಲಕಾಲ ತಮ್ಮ ಪಂಚಿಂಗ್ ಡೈಲಾಗ್‌ಗಳ ಮೂಲಕ ರಂಜಿಸಿದರು. ಮರುವನಹಳ್ಳಿ ಬಸವರಾಜು, ಬಿಜಿಎಸ್ ಹೇಮಗಿರಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಆನಂದ್, ಹಾಗೂ ಶಿಕ್ಷಕ ವರ್ಗ, ಪೋಷಕರು, ಮಕ್ಕಳು ಹಾಜರಿದ್ದರು.