ಮುಖ್ಯ ಅರ್ಚಕನ ಕೊಲೆ: ತನಿಖೆ ಚುರುಕು

| Published : Jul 23 2024, 12:39 AM IST

ಸಾರಾಂಶ

ದೇವೇಂದ್ರಪ್ಪಜ್ಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯ ಫೋಟೋವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ವ್ಯಕ್ತಿಯ ಚಲನವಲನ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಹುಬ್ಬಳ್ಳಿ:

ಇಲ್ಲಿನ ಈಶ್ವರ ನಗರದ ಶ್ರೀ ವೈಷ್ಣೋದೇವಿ ಮಂದಿರದ ಮುಖ್ಯ ಧರ್ಮದರ್ಶಿ, ಅರ್ಚಕ ದೇವೇಂದ್ರಪ್ಪಜ್ಜ ವನಹಳ್ಳಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ದೇವಸ್ಥಾನದ ಪಕ್ಕದಲ್ಲೇ ಕೊಲೆ ನಡೆದಿರುವುದರಿಂದ ಹಿಂಬದಿಯಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಮುಂಬಾಗಿಲು ಮಾತ್ರ ಓಪನ್‌ ಇದ್ದು, ಅದರ ಮೂಲಕವೇ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೂ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ.

ಆರೋಪಿ ಇನ್ನು ಪತ್ತೆಯಾಗಿಲ್ಲ. ಈಗಾಗಲೇ ಡಿಸಿಪಿ ನೇತೃತ್ವದಲ್ಲಿ 8 ತಂಡಗಳನ್ನು ರಚಿಸಿದ್ದು, ಆರೋಪಿಯ ಹುಡುಕಾಟ ತೀವ್ರಗೊಳಿಸಲಾಗಿದೆ. ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ನಡುವೆ ದೇವಪ್ಪಜ್ಜನಿಗೆ ಯಾರು ಶತ್ರುಗಳಿರಲಿಲ್ಲ ಎಂದು ಅವರ ಸಹೋದರ ಸಂಬಂಧಿ ತಿಪ್ಪಣ್ಣ ಮಾಹಿತಿ ನೀಡಿದ್ದಾನೆ.

ಶ್ವಾನದಳದಿಂದ ಪರಿಶೀಲನೆ:

ಕೊಲೆ ನಡೆದ ಸ್ಥಳಕ್ಕೆ ಸೋಮವಾರ ಬೆಳಗ್ಗೆ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಸ್ಥಳಕ್ಕೆ ಶ್ವಾನದಳದ ತಂಡವು ಆಗಮಿಸಿ ಪರಿಶೀಲಿಸಿತು. ಅಲ್ಲದೇ ಕೊಲೆ ನಡೆದ ಈಶ್ವರನಗರ ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳಲ್ಲಿರುವ ಸಿಸಿ ಕ್ಯಾಮೆರಾಗಳ ಪರಿಶೀಲನೆ ಸಹ ಮಾಡಲಾಗಿದ್ದು, ಆರೋಪಿಯ ನಿಖರ ಮಾಹಿತಿ ಈವರೆಗೆ ತಿಳಿದುಬಂದಿಲ್ಲ. ಬೇರೆ ಬೇರೆ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವುದು ಸೋಮವಾರ ಕಂಡುಬಂದಿತು.

ದೇವಸ್ಥಾನದ ಹಿಂದಿನ ಗೇಟ್‌ ಬಂದ್‌:

ಕೊಲೆ ನಡೆದ ಶ್ರೀ ವೈಷ್ಣೋದೇವಿ ದೇವಸ್ಥಾನದ ಹಿಂಭಾಗದಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದಾರೆ. ದೇವಸ್ಥಾನದ ಹಿಂಭಾಗಕ್ಕೆ ಸೇರುವ ಮುಖ್ಯರಸ್ತೆಗೂ ಬ್ಯಾರಿಕೇಡ್‌ ಅಳವಡಿಸಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದು, ಪೊಲೀಸರ ಕಣ್ಗಾವಲು ಹಾಕಲಾಗಿದೆ. ದೇವಸ್ಥಾನದ ಮುಂಭಾಗದ ಬಾಗಿಲು ತೆರೆದಿದ್ದು, ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅನಕೂಲ ಕಲ್ಪಿಸಲಾಗಿದೆ.

ಭಯಭೀತರಾದ ಜನತೆ:

ಭಾನುವಾರ ಸಂಜೆ ನಡೆದ ಕೊಲೆಯಿಂದಾಗಿ ಈಶ್ವರ ನಗರ ಸೇರಿದಂತೆ ಅಕ್ಕಪಕ್ಕದ ನಗರಗಳ ಜನರು ಭಯಭೀತರಾಗಿದ್ದಾರೆ. ನಿತ್ಯವೂ ದೇವಸ್ಥಾನಕ್ಕೆ ನೂರಾರು ಜನ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ, ಸೋಮವಾರ ದೇವಸ್ಥಾನಕ್ಕೆ ಭಕ್ತರು ಬರಲು ಹಿಂದೇಟು ಹಾಕಿದರು. ಈಶ್ವರ ನಗರದ ತುಂಬೆಲ್ಲ ಪೊಲೀಸ್‌ ಆಯುಕ್ತರು, ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿರುವುದರಿಂದ ಇಡೀ ನಗರದ ತುಂಬೆಲ್ಲ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿರುವುದು ಕಂಡುಬಂದಿತು.

ಇಂದು ಅಂತ್ಯಸಂಸ್ಕಾರ:

ಮೂಲತಃ ಕುಸುಗಲ್ಲ ಗ್ರಾಮದವರಾದ ದೇವೇಂದ್ರಪ್ಪಜ್ಜ ಹಲವು ವರ್ಷಗಳಿಂದ ಹುಬ್ಬಳ್ಳಿಯ ವಿದ್ಯಾನಗರದಲ್ಲಿಯೇ ನೆಲೆಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾನಗರದಲ್ಲಿರುವ ಮೃತರ ನಿವಾಸಕ್ಕೆ ಶವ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ಬಳಿ ಕುಸುಗಲ್ಲಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುವ ಕುರಿತು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಮೃತ ದೇವೇಂದ್ರಪ್ಪಜ್ಜನಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಪತ್ನಿ ಹಾಗೂ ಓರ್ವ ಪುತ್ರಿ ವೈದ್ಯರಾಗಿದ್ದು, ಮತ್ತೋರ್ವ ಪುತ್ರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪುತ್ರನು ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಪುತ್ರ ಬಂದ ಬಳಿಕ ಅಂತ್ಯಸಂಸ್ಕಾರದ ಎಲ್ಲ ಪ್ರಕ್ರಿಯೆಗಳು ಜರುಗಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಆರೋಪಿ ಪತ್ತೆಗೆ 8 ತಂಡ ರಚನೆ: ಶಶಿಕುಮಾರ್

ಮುಖ್ಯ ಅರ್ಚಕನ ಕೊಲೆಗಾರನ ಪತ್ತೆಗಾಗಿ ಈಗಾಗಲೇ ಡಿಸಿಪಿ ನೇತೃತ್ವದಲ್ಲಿ 8 ತಂಡ ರಚಿಸಲಾಗಿದೆ. ಶೀಘ್ರವೇ ಆರೋಪಿ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಅವರು ಸೋಮವಾರ ಇಲ್ಲಿನ ಕಿಮ್ಸ್‌ನ ಶವಾಗಾರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೃತರು ಮಾಟ, ಮಂತ್ರ ಮಾಡುತ್ತಿದ್ದರಂತೆ. ಆ ವಿಚಾರಕ್ಕೆ ಕೊಲೆ ಮಾಡಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಕೊಲೆಗೆ ನಿಖರ ಕಾರಣ ಏನು ಎಂಬುದು ಈ ವರೆಗೂ ತಿಳಿದು ಬಂದಿಲ್ಲ ಎಂದರು.

ಮೃತ ದೇವೇಂದ್ರಪ್ಪಜ್ಜ ಈಶ್ವರ ನಗರದಲ್ಲಿರುವ ಶ್ರೀ ವೈಷ್ಣೋದೇವಿ ದೇವಸ್ಥಾನ ಮತ್ತು ನರೇಂದ್ರ ಬಳಿಯ ಶ್ರೀ ಯಲ್ಲಮ್ಮ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಿತ್ಯವೂ ಇವರ ಬಳಿ ಸಮಸ್ಯೆ ಹೇಳಿಕೊಂಡು ಹಲವು ಜನರು ಬರುತ್ತಿದ್ದರು. ಅವರಿಗೆ ಪರಿಹಾರ ಸೂತ್ರಗಳನ್ನು ಹೇಳುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಕುಟುಂಬದ ಸದಸ್ಯರು ಯಾವಾಗ ಮರಣೋತ್ತರ ಪರೀಕ್ಷೆ ಮಾಡಲು ಹೇಳುತ್ತಾರೆ ಆಗ ಮಾಡಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದರು.ಯಾರೂ ಶತ್ರುಗಳಿರಲಿಲ್ಲ: ತಿಪ್ಪಣ್ಣ

ನನ್ನ ಸಹೋದರ ದೇವೇಂದ್ರಪ್ಪಗೆ ಯಾರು ಶತ್ರುಗಳಿರಲಿಲ್ಲ. ಏತಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ ಎಂದು ಮೃತ ದೇವೇಂದ್ರಪ್ಪಜ್ಜನ ಸಹೋದರ ಸಂಬಂಧಿ ತಿಪ್ಪಣ್ಣ ವನಹಳ್ಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಜಮೀನು ವಿವಾದ ಇತ್ತು. ಜಮೀನು ವಿವಾದ ಇತ್ಯರ್ಥಗೊಂಡು ಹಲವು ವರ್ಷಗಳೇ ಕಳೆದಿವೆ. ಜಮೀನು ವಿವಾದಕ್ಕೂ ಈ ಕೊಲೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕಷ್ಟವಿದೆ ಎಂದು ಬಂದ ಭಕ್ತರಿಗೆ ನನ್ನ ಸಹೋದರ ಜ್ಯೋತಿಷ್ಯ ಹೇಳುತ್ತಿದ್ದ. ಮಾಟ ಮಂತ್ರ ಮಾಡುತ್ತಿದ್ದುದರ ಬಗ್ಗೆ ನಮಗೆ ಯಾವುದೇ ಮಾಹಿತಿಯಲ್ಲ. ಏಕೆ ಕೊಲೆಯಾಗಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ನೊಂದು ನುಡಿದರು.

ಶಂಕಿತ ಆರೋಪಿಯ ಭಾವಚಿತ್ರ ಬಿಡುಗಡೆ

ದೇವೇಂದ್ರಪ್ಪಜ್ಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯ ಫೋಟೋವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ವ್ಯಕ್ತಿಯ ಚಲನವಲನ ಕುರಿತು ಮಾಹಿತಿ ಪಡೆದಿರುವ ಪೊಲೀಸರು ಈ ವ್ಯಕ್ತಿಯೇ ಕೊಲೆ ಮಾಡಿರುವ ಆರೋಪಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತರೆ ಡಿಸಿಪಿ 9480802005, 9480802003, ಎಸಿಪಿ 9480802012, 9480802029, ಪಿಐ 9480802039 ಈ ಮೊಬೈಲ್‌ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಶಶಿಕುಮಾರ ತಿಳಿಸಿದ್ದಾರೆ.