ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾ ಕೇಂದ್ರವಾದ ಮೇಲೆ ಕೊಪ್ಪಳ ಸೇರಿದಂತೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭಾರಿ ಬೆಳವಣಿಗೆಯಾಗುತ್ತಿರುವುದರಿಂದ ಅದಕ್ಕೆ ಪೂರಕವಾಗಿ ಅಭಿವೃದ್ಧಿಯ ಅಗತ್ಯವಿದ್ದು, ಅದನ್ನು ಪ್ರಾಮಾಣಿಕವಾಗಿ ಮಾಡುವುದಕ್ಕೆ ಬದ್ಧನಾಗಿದ್ದೇನೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹೇಳಿದ್ದಾರೆ.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಹಿರಿಯ ಮಾರ್ದರ್ಶನದಲ್ಲಿ ಮತ್ತು ಪಕ್ಷದ ಮುಖಂಡರ ನಿರ್ದೇಶನದಂತೆ ಅಭಿವೃದ್ಧಿ ಮಾಡುತ್ತೇನೆ. ಅಭಿವೃದ್ಧಿ ಮಾಡುವುದಕ್ಕೆ ಪ್ರಾಧಿಕಾರದಲ್ಲಿ ವಿಫುಲ ಅವಕಾಶಗಳು ಇರುವುದರಿಂದ ಅವುಗಳನ್ನು ಸದ್ಬಳಕೆ ಮಾಡಿಕೊಂಡು ಪ್ರಾಧಿಕಾರ ವ್ಯಾಪ್ತಿಯುದ್ದಕ್ಕೂ ಅಗತ್ಯ ಅಭಿವೃದ್ಧಿ ಮಾಡಲಾಗುವುದು ಎಂದರು.
ನಿವೇಶನ ಹಂಚಿಕೆ, ವೃತ್ತಗಳ ಅಭಿವೃದ್ಧಿ, ನಗರಕ್ಕೆ ಬೇಕಾಗಿರುವ ಇನ್ನಿತರ ಸೌಕರ್ಯಗಳನ್ನೊಳಗೊಂಡು ನಗರ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸಮಗ್ರ ನೀಲನಕ್ಷೆ ರೂಪಿಸಿ, ಅಭಿವೃದ್ಧಿಗೆ ಶ್ರಮಿಸಲಿ. ಕೊಪ್ಪಳ ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಯ ಜೊತೆ ಜೊತೆಗೆ ೩೦-೪೦ ವರ್ಷದ ದೂರದೃಷ್ಟಿಯ ಅನುಸಾರ ಅಭಿವೃದ್ಧಿಗೆ ಒತ್ತು ನೀಡಬೇಕು. ನಗರದಲ್ಲಿ ಅಗತ್ಯ ಮೂಲ ಸೌಕರ್ಯ ಸೇರಿದಂತೆ ಉದ್ಯಾನವನಗಳು, ಲೇಔಟ್‌ಗಳು ಸೇರಿ ಸ್ಥಳೀಯ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಬೇಕು ಮತ್ತು ಅದರಡಿಯಲ್ಲಿಯೇ ಅಭಿವೃದ್ಧಿಯಾಗಬೇಕು ಎಂದರು.
ಮಾಜಿ ಶಾಸಕ ಬಸವರಾಜ ಹಿಟ್ನಾಳ ಮಾತನಾಡಿ, ಕೊಪ್ಪಳದ ಜನತೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಗರಸಭೆ ಅಧ್ಯಕ್ಷರು ಮತ್ತು ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಚೇರಿಯ ಸಿಬ್ಬಂದಿ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವ ಮೂಲಕ ಜನತೆಯ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನ ಮಾಡಲಿ ಎಂದರು.ಜಿಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ, ಜನಾರ್ದನ ಹುಲಿಗಿ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಅಬ್ದುಲ್ ಲತೀಫ್ ಖತೀಬ್, ಮಾರ್ಕಂಡೇಶ್ವರ ಕಲ್ಲನವರ, ಚನ್ನಬಸಯ್ಯ ಚನ್ನವಡಿಯರಮಠ, ಕಾಳಮ್ಮ, ಪ್ರಾಧಿಕಾರದ ಆಯುಕ್ತ ಯೋಗಾನಂದ ಸೇರಿ ಹಲವರು ಉಪಸ್ಥಿತರಿದ್ದರು.