ಅಮೃತ್ ಮಹಲ್ ತಳಿ ಸಂವರ್ಧನೆಗೆ ಹೆಚ್ಚಿನ ಆದ್ಯತೆ: ಸಚಿವ ಕೆ.ವೆಂಕಟೇಶ್

| Published : Jan 30 2025, 12:32 AM IST

ಸಾರಾಂಶ

ಬೀರೂರು: ಅಮೃತ್ ಮಹಲ್ ತಳಿ ಸಂವರ್ಧನೆಗೆ ರಾಷ್ಟ್ರಮಟ್ಟದಲ್ಲಿ ಕಳೆದ 2023ರಲ್ಲಿ ಹರಿಯಾಣದ ನ್ಯಾಷನಲ್ ಬ್ಯೂರೊ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ನಲ್ಲಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಜಿಲ್ಲಾ ನಿರ್ದೇಶಕರ ಘಟಕಕ್ಕೆ ಪ್ರಶಸ್ತಿ ಲಭಿಸಿರುವುದು ಶ್ಲಾಘನೀಯ. ಇದರ ಗೌರವ ಇಲ್ಲಿನ ರೈತರಿಗೆ ಸಲ್ಲಬೇಕು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

- ಬೀರೂರಿನ ಅಮೃತ್ ಮಹಲ್ ಹೋರಿ ಕರುಗಳ ಬಹಿರಂಗ ಹರಾಜಿನಲ್ಲಿ ಭಾಗಿ: ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಲಭಿಸಿರುವುದು ಶ್ಲಾಘನೀಯ

ಕನ್ನಡಪ್ರಭ ವಾರ್ತೆ, ಬೀರೂರು: ಅಮೃತ್ ಮಹಲ್ ತಳಿ ಸಂವರ್ಧನೆಗೆ ರಾಷ್ಟ್ರಮಟ್ಟದಲ್ಲಿ ಕಳೆದ 2023ರಲ್ಲಿ ಹರಿಯಾಣದ ನ್ಯಾಷನಲ್ ಬ್ಯೂರೊ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ ನಲ್ಲಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಜಿಲ್ಲಾ ನಿರ್ದೇಶಕರ ಘಟಕಕ್ಕೆ ಪ್ರಶಸ್ತಿ ಲಭಿಸಿರುವುದು ಶ್ಲಾಘನೀಯ. ಇದರ ಗೌರವ ಇಲ್ಲಿನ ರೈತರಿಗೆ ಸಲ್ಲಬೇಕು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.ಬೀರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಮೃತ್ ಮಹಲ್ ತಳಿ ಸಂವರ್ಧನಾ ಉಪ ಕೇಂದ್ರದಲ್ಲಿ ಬುಧವಾರ ಅಮೃತ್ ಮಹಲ್ ಹೋರಿ, ಕರುಗಳ ಬಹಿರಂಗ ಹರಾಜಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮೃತ್ ಮಹಲ್ ತಳಿಯನ್ನು ದೇಶಕ್ಕೆ ಪರಿಚಹಿಸಿದವರು ಅಂದಿನ ಮೈಸೂರು ಮಹಾರಾಜರು. ಅವರು ಪರಿಯಿಸಿದ ಈ ತಳಿಗೆ ರೈತರಿಂದ ಇಂದಿಗೂ ಬೇಡಿಕೆ ಹೆಚ್ಚಿದ್ದು, ಅದನ್ನು ಪೋಷಿಸಿ, ಆರೈಕೆ ಮಾಡಲು ಸರ್ಕಾರ ಅನೇಕ ವಿವಿಧ ಯೋಜನೆ ಕೈಗೊಂಡಿದೆ. ಬಯಲು ಸೀಮೆ ಭಾಗದ11 ಅಮೃತ್ ಮಹಲ್ ಕೇಂದ್ರಗಳಲ್ಲಿ ಅತೀ ಹೆಚ್ಚು ಜಾಗವಿದ್ದು ಅಮೃತ್ ಮಹಲ್ ತಳಿಯ ಕರುಗಳನ್ನು ಇನ್ನು ಹೆಚ್ಚು ವೃದ್ಧಿಸಲು ಪ್ರಯತ್ನಿಸಲಾಗುವುದು ಎಂದರು.

ಕರುಗಳನ್ನು ಖರೀದಿಸಲು ಬೇರೆ ಜಿಲ್ಲೆಗಳಿಂದ ರೈತರು ಬಂದಿರುವುದು ಸಂತಸ ತಂದಿದೆ. ಕರುಗಳ ಬಗ್ಗೆ ರೈತರು ಒಲವು ತೋರುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಈ ಹಿಂದೆ 2019 ರಲ್ಲಿ ಇಲ್ಲಿನ 11 ಅಮೃತ್ ಮಹಲ್ ಕೇಂದ್ರಗಳಿಗೆ ಜಂಟಿ ನಿರ್ದೇಶಕರ ಕಚೇರಿಯಾಗಿ ಬೀರೂರು ಅಮೃತ್ ಮಹಲ್ ಕೇಂದ್ರದಲ್ಲಿ ಅಧಿಕಾರಿ ನೇಮಕವಾಗಿ ಇದ್ದ ಪರಿಣಾಮ ಎಲ್ಲಾ ಕೇಂದ್ರಗಳನ್ನು ಉತ್ತಮವಾಗಿ ನೋಡಿಕೊಳ್ಳುತ್ತಿತ್ತು. ಆದರೆ ಕೆಲವು ರಾಜಕಾರಣದ ಪರಿಣಾಮ ಈ ಜಂಟಿ ನಿರ್ದೇಶಕರ ಕಚೇರಿಯನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಯಿತು. ಇದರಿಂದ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡುವುದು ತೊಂದರೆಯಾದ ಹಿನ್ನಲೆಯಲ್ಲಿ ಇದರ ಆಡಳಿತ ಮತ್ತು ನಿರ್ವಹಣೆಯನ್ನು ಅಜ್ಜಂಪುರ ಜಿಲ್ಲಾ ನಿರ್ದೇಶಕರಿಗೆ ನೀಡಲಾಗಿದೆ. ಇದನ್ನು ಬೀರೂರಿನಲ್ಲಿಯೇ ಉಳಿಯುವಂತೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವರು, ಇದುವರೆಗು ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ತಳಿ ಸಂವರ್ಧನೆಗೆ ಒಳಿತಾದರೆ ಅದಕ್ಕೂ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್, ಕಡೂರು, ತರೀಕೆರೆ, ಬೀರೂರು ಭಾಗದ ಬಯಲು ಸೀಮೆ ರೈತರೆಲ್ಲ ಹಾಸನ ಹಾಲು ಒಕ್ಕೂಟಕ್ಕೆ ಹಾಲು ಮಾರುತ್ತಿದ್ದರು. ಆದರೆ ಸರ್ಕಾರ ಜಿಲ್ಲೆಗೊಂದು ಹಾಲು ಉತ್ಪಾದಕರ ಒಕ್ಕೂಟ ಮಾಡುವ ಪ್ರಯತ್ನ ನಡೆಸಿದ್ದು, ಅದರಂತೆಯೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೀರೂರು ಹಾಲು ಉತ್ಪಾದಕರ ಘಟಕಕ್ಕೆ ಪ್ರತ್ಯೇಕ ಬಯಲು ಸೀಮೆಗೆ ಒತ್ತು ನೀಡಿದರೆ ಇಲ್ಲಿನ ರೈತರಿಗೆ ಅನುಕೂಲವಾಗುವ ಜೊತೆಗೆ ಹೈನುಗಾರಿಕೆಗೂ ಒತ್ತು ನೀಡಿದಂತಾಗುತ್ತದೆ ಎಂದಿದ್ದಕ್ಕೆ ಒಪ್ಪಿದ ಸಚಿವರು, ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅನುಕೂಲಮಾಡಿಕೊಡುವ ಭರವಸೆ ನೀಡಿದರು.

ರೈತರ ಬಗ್ಗೆ ಕಾಳಜಿ ಇಲ್ಲವೇ:

ಅಮೃತ್ ಮಹಲ್ ಹೋರಿ ಕರುಗಳನ್ನು ಖರೀದಿಸಲು ಅನೇಕ ಜಿಲ್ಲೆಯ ರೈತರು ಈ ಬಿಡ್ ಗೆ ಭಾಗವಹಿಸಲು ಆಗಮಿಸಿರುತ್ತಾರೆ. ಆದರೆ ಅಧಿಕಾರಿಗಳು ನಮ್ಮ ಬಳಿ ಲಕ್ಷಾಂತರ ರು. ಕಟ್ಟಿಸಿ ಕೊಂಡು, ಊಟ ಹೋಗಲಿ ಕುಡಿಯುವ ನೀರನ್ನೂ ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಹೀಗಾದರೇ ಹೇಗೆ? ಸರ್ಕಾರಕ್ಕೆ, ಇಲಾಖೆಗೆ ರೈತರ ಬಗ್ಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಎಲ್ಲವನ್ನು ಮಾಡಿರುವುದಾಗಿ ಹೇಳಿದ್ದಕ್ಕೆ ಆಕ್ರೋಶಗೊಂಡ ರೈತರು ಹಣ ಪಾವತಿ ಊಟ ಮಾಡುವ ಕ್ಯಾಂಟಿನ್ ವ್ಯವಸ್ಥೆ ಇದೆ. ಎಂದಾಗ ಗರಂ ಆದ ಸಚಿವರು ಇಂತಹ ಲೋಪಗಳಿಗೆ ಆಸ್ಪದ ನಿಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯ ಅಮೃತ್ ಮಹಲ್ ಪ್ರಾಜೆಕ್ಟ್ ನಿರ್ದೇಶಕ ಶ್ರೀನಿವಾಸ್ ನಮ್ಮ ಅಧಿಕಾರಿಗಳ ಎಡವಟ್ಟಿನಿಂದ ತಪ್ಪಾಗಿದ್ದು ಮುಂದಿನ ದಿನಗಳಲ್ಲಿ ಹರಾಜಿನಲ್ಲಿ ಭಾಗವಿಸುವ ರೈತರ ಪ್ರತಿ ಟೋಕನ್‌ಗೆ 3 ಮೂವರಿಗೆ ಉಚಿತ ಊಟ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ.ರಾಘವೇಂದ್ರ ಪಟೇಲ್, ಪಶು ವೈದ್ಯಾಧಿಕಾರಿ ಎ.ಬಿ.ಪ್ರಭಾಕರ್, ಇದ್ದರು. 29 ಬೀರೂರು 1ಬೀರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಮೃತ್ ಮಹಲ್ ತ ಳಿ ಸಂವರ್ಧನಾ ಕೇಂದ್ರಲ್ಲಿ ಬುಧವಾರ ಕರುಗಳ ಬಹಿರಂಗ ಹರಾಜಿನಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಪರಿಶೀಲನೆ ನಡೆಸಿದರು. ಶಾಸಕ ಆನಂದ್, ರಾಜ್ಯ ಅಮೃತ್ ಮಹಲ್ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀನಿವಾಸ್ ಇದ್ದರು.