ಕನ್ನಡಪ್ರಭ ವಾರ್ತೆ ಕಾರವಾರ
ಶಾಲೆಗಳ ಸುರಕ್ಷತೆ ದೃಷ್ಟಿಯಿಂದ ಹಾಗೂ ಶಾಲಾ ಆವರಣದಲ್ಲಿನ ಸ್ವತ್ತುಗಳನ್ನು ಸಂರಕ್ಷಿಸಲು ಕಾಂಪೌಂಡ್ ನಿರ್ಮಾಣ ಅತ್ಯಗತ್ಯವಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಅನುದಾನದ ಕೊರತೆಯಿಂದಾಗಿ ಅದೆಷ್ಟೋ ಶಾಲೆಗಳಿಗೆ ಕಾಂಪೌಂಡ್ ಭಾಗ್ಯವೇ ಇಲ್ಲದಂತಾಗಿದೆ. ಹೀಗಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಾಮುಖ್ಯತೆ ನೀಡಿ ಶಾಲೆಗೆ ಭದ್ರತೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಶಾಲೆಗೆ ಅಗತ್ಯವಿರುವ ಶೌಚಾಲಯ, ಆಟದ ಮೈದಾನ, ಅಂಗನವಾಡಿ ಕಟ್ಟಡ, ಮಳೆ ನೀರಿನ ಕೊಯ್ಲು, ಕಾಂಪೌಂಡ್, ಹಾಗೇ ಅಡುಗೆ ಕೋಣೆ, ಭೋಜನಾಲಯದಂತಹ ಅನೇಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಒಂದೊಂದಾಗಿ ಪೂರೈಸಲ್ಪಡುತ್ತಿವೆ.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂನ ಮುಠ್ಠಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗೆ ಸುಭದ್ರ ಕಾಂಪೌಂಡ್ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಸ್ಥಳೀಯರ ಸಹಕಾರದೊಂದಿಗೆ ಈ ಕಾಂಪೌಂಡ್ ಹಸೆಮಣೆ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದು, ದಾರಿಹೋಕರ ಕಣ್ಮನ ಸೆಳೆಯುತ್ತಿದೆ. ಅಂದಾಜು ಮೊತ್ತ 3 ಲಕ್ಷದ 52 ಸಾವಿರ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾದ ಈ ಕಾಮಗಾರಿಯು ಶಾಲೆಗೆ ಸುಭದ್ರತೆ ಕಲ್ಪಿಸಿದೆ.ಇನ್ನೂ ಈ ಶಾಲೆಯಲ್ಲಿ ದಾಸೋಹ ಕೊಠಡಿಯೂ ಶಿಥಿಲಗೊಂಡು ನಾಶದಂಚಿನಲ್ಲಿತ್ತು. ಇದನ್ನರಿತ ಗ್ರಾಪಂ ಸುಮಾರು ₹7 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಅಡುಗೆ ಕೋಣೆ ನಿರ್ಮಿಸಲಾಗಿದ್ದು ಶಾಲೆಯ ದಾಸೋಹ ತಯಾರಿಕೆಗೆ ಅನುಕೂಲವಾಗಿದೆ.
ತಾಲೂಕಿನಲ್ಲಿ ಎಲ್ಲಾ ಗ್ರಾಪಂಗಳಲ್ಲಿಯೂ ಶಾಲಾ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಬಹುಮುಖ್ಯವಾಗಿ ಪರಿಗಣಿಸಲಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಶಾಲೆಗಳು ಹೊಸತನ ಕಂಡುಕೊಳ್ಳುತ್ತಿವೆ. ಜೊತೆಗೆ ಮಕ್ಕಳ ಉತ್ಸಾಹಕ್ಕೂ ಕಾರಣವಾಗಿವೆ ಎನ್ನುತ್ತಾರೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ದೇವರಾಜ್ ಹಿತ್ತಲಕೊಪ್ಪ.
ನಮ್ಮ ಗ್ರಾಪಂನಲ್ಲಿ ಶಾಲೆಗಳಿಗೆ ಅನುಕೂಲವಾದ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಜೊತೆಗೆ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಯ ಆಶಯದೊಂದಿಗೆ ಸ್ಥಳೀಯರ ಸಹಕಾರದೊಂದಿಗೆ ನರೇಗಾ ಯೋಜನೆಯು ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯ್ಕ ತಿಳಿಸಿದ್ದಾರೆ.