‘ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತೋ ಅದೇ ಅಂತಿಮ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಪದೇ ಪದೆ ಯಾಕೆ ಕೇಳುತ್ತೀರಿ’ ಎಂದು ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ/ಬೆಳಗಾವಿ

‘ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತೋ ಅದೇ ಅಂತಿಮ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಪದೇ ಪದೆ ಯಾಕೆ ಕೇಳುತ್ತೀರಿ’ ಎಂದು ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಸುವರ್ಣ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ವಿಚಾರದಲ್ಲಿ ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ’ ಎಂದು ಹೇಳಿದರು.

ಬಳಿಕ ಯತೀಂದ್ರ ಹಾಗೂ ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಬೆಳಗಾವಿಗೆ ತೆರಳಿದರು. ಸರ್ಕ್ಯೂಟ್‌ ಹೌಸ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಅವಧಿ ಮಾತನಾಡಿದ ತಂದೆ-ಪುತ್ರರ ನಡುವೆ ಮುಖ್ಯಮಂತ್ರಿ ಬದಲಾವಣೆ ಕುರಿತ ಹೇಳಿಕೆ ಬಗ್ಗೆಯೇ ಚರ್ಚೆ ನಡೆದಿದೆ ಎನ್ನಲಾಗಿದೆ.

ಸರ್ಕ್ಯೂಟ್ ಹೌಸ್‌ನಲ್ಲಿ ಎದುರಾದ ಸುದ್ದಿಗಾರರು ಯತೀಂದ್ರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಲ್ಲವೇ ಎಂದು ಕೇಳಿದಾಗ, ‘ಯತೀಂದ್ರ ಏನು ಹೇಳಿದ್ದಾನೆ? ಹೈಕಮಾಂಡ್ ಹೇಳಿದರೆ ಮಾತ್ರ ಎಂದೇ ನಾವು ಹೇಳುತ್ತಿದ್ದೇವೆ. ಮತ್ತೆ ಯಾಕೆ ಅದನ್ನೇ ಕೇಳುತ್ತಿರಾ?’ ಎಂದು ಸಿಡಿಮಿಡಿಗೊಂಡರು.

ಹೇಳಬೇಕಾಗಿದ್ದನ್ನು ಹೇಳಿದ್ದೇನೆ:

ಬಳಿಕ ಪ್ರತಿಕ್ರಿಯಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ, ‘ಹೇಳಬೇಕಾಗಿದ್ದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಪದೇ ಪದೆ ಮಾತನಾಡುವುದಿಲ್ಲ. ಯಾರ್‍ಯಾರ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಹೇಳಬೇಕಾಗಿದ್ದು ಹೇಳಿದ್ದಾಗಿದೆ’ ಎಂದು ಹೇಳಿದರು.

-ಬಾಕ್ಸ್‌-

ಫಿರೋಜ್‌ ಸೇಠ್ ನಿವಾಸದಲ್ಲಿ

ಅಹಿಂದ ನಾಯಕರ ಡಿನ್ನರ್‌ ಸಭೆ

ರಾಜಕೀಯ ಬೆಳವಣಿಗೆಗಳ ನಡುವೆಯೇ ಮಾಜಿ ಶಾಸಕ ಫಿರೋಜ್‌ ಸೇಠ್‌ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್‌ ಅಹಮದ್‌ಖಾನ್‌, ರಹೀಂ ಖಾನ್‌ ಸೇರಿ ಅಹಿಂದ ನಾಯಕರು ಡಿನ್ನರ್‌ ಸಭೆ ನಡೆಸಿದ್ದಾರೆ.

ಆಸಿಫ್‌ ಸೇಠ್, ಅಶೋಕ್‌ ಪಟ್ಟಣ್‌, ಖನಿಜ್‌ ಫಾತಿಮಾ, ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌ ಸೇರಿ ಕೇವಲ ಅಹಿಂದ ನಾಯಕರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದು ಹಾಗೂ ಡಿ.ಕೆ.ಶಿವಕುಮಾರ್‌ ಸೇರಿ ಅವರ ಬಣದ ನಾಯಕರಿಗೆ ಆಹ್ವಾನ ಇಲ್ಲದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಫಿರೋಜ್‌ ಸೇಠ್‌, ಪ್ರತಿ ವರ್ಷವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಮ್ಮ ಮನೆಗೆ ಊಟಕ್ಕೆ ಬರುತ್ತಿರುತ್ತಾರೆ. ನಮ್ಮ ಮನೆಯಲ್ಲಿ 20 ಮಂದಿಗೆ ಮಾತ್ರ ಸ್ಥಳಾವಕಾಶ ಇದ್ದುದ್ದರಿಂದ ಆಯ್ದ ನಾಯಕರನ್ನು ಮಾತ್ರ ಕರೆಯಲಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಕರೆಯಲಾಗುವುದು ಎಂದು ಸಮಜಾಯಿಷಿ ನೀಡಿದರು.