ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಪ್ರೌಢಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಮಹತ್ತರ ದಿಕ್ಸೂಚಿಯಾಗಿದ್ದು, ವಿದ್ಯಾರ್ಥಿಗಳು ಜೀವನವನ್ನು ರೂಪಿಸಿಕೊಳ್ಳುವ ದಿಸೆಯಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಕಡೆಗಣಿಸದೆ ಶ್ರದ್ಧೆಯಿಂದ ಕಲಿತುಕೊಂಡರೆ ಜೀವನದಲ್ಲಿ ಗುರಿಯನ್ನು ಮುಟ್ಟಲು ಸಾಧ್ಯವಾಗಲಿದೆ ಎಂದು ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶನಿವಾರ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ 59ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪ್ರಥಮ ಏಕೈಕ ವಿದ್ಯಾಸಂಸ್ಥೆಯಾಗಿ ರೂಪುಗೊಂಡ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ಹಾಗೂ ಉನ್ನತ ಸ್ಥಾನಮಾನಗಳಿಗೆ ಹೋಗಿ ಸೇವೆಸಲ್ಲಿಸುತ್ತಿರುವುದು ಇಂದಿಗೂ ಕಾಣಬಹುದಾಗಿದೆ. ವಿದ್ಯಾರ್ಥಿ ಉಜ್ವಲ ಬಾಳನ್ನು ಬೆಳಗಿದ ಕೀರ್ತಿ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಲ್ಲುತ್ತದೆ ಎಂದರು.ಬೆಂಗಳೂರು ಎಂಬೆಸ್ಸಿ ಗ್ರೂಪ್ ಸಹಉಪಾಧ್ಯಕ್ಷ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪ್ಪಳ್ಳಿ ರವೀಂದ್ರ ಮಾತನಾಡಿ, ಕಲ್ಲಿಗೆ ಹುಳಿಯ ಪೆಟ್ಟು ಬಿದ್ದರೆ ಮಾತ್ರ ಮೂರ್ತಿಯಾಗಿ ಪೂಜೆ ನೈವೇದ್ಯಕ್ಕೆ ಭಾಜನವಾಗುತ್ತದೋ ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಹೆಚ್ಚಿನ ಪರಿಶ್ರಮ ಹಾಕಿದರೆ ಮಾತ್ರ ಯಶಸ್ಸು ದೊರುಕುವುದು. ಉಜ್ವಲ ಜೀವನಕ್ಕೆ ಬದ್ಧತೆ, ಸ್ಪಷ್ಟತೆ, ಏಕಾಗ್ರತೆ, ಗುಣ ನಡತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಭವಿಷ್ಯದ ದಿನಗಳಲ್ಲಿ ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಸೇರಿದಂತೆ ಹಲವು ಹುದ್ದೆಗಳನ್ನು ಹೊಂದಿಕೊಳ್ಳಬಹುದು. ಇದರಿಂದ ನಿಮ್ಮ ಊರಲ್ಲಿ ನಿಮಗೆ ಉತ್ತಮ ಗೌರವ ಹಾಗೂ ವೇದಿಕೆಗಳು ಲಭಿಸುತ್ತದೆ ಎಂದು ಹೇಳಿದರು.7ನೇ ಹೊಸಕೋಟೆ ದೀಪ್ತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜಿಜಿ ಎನ್.ಈ., ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಚೆಟ್ಟೀರ ನಿರತ ಬೆಳ್ಳಿಯಪ್ಪ, ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಹಾಗೂ ನಿವೃತ್ತ ಮುಖ್ಯಶಿಕ್ಷಕಿ ಕೆ.ಎಸ್.ಸಾವಿತ್ರಿ ಮಾತನಾಡಿದರು.
ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ವಹಿಸಿ ಮಾತನಾಡಿ, ಬಡಕೂಲಿ ಕಾರ್ಮಿಕರ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದು, ಈ ಶಾಲೆಯು ಅನುದಾನಿತ ಶಾಲೆಯಾಗಿದೆ. ಸರ್ಕಾರದಿಂದ ಅನುದಾನ ಸವಲತ್ತುಗಳ ಕೊರತೆ ಇದೆ. ಶಾಲೆಯ ಭವಿಷ್ಯದ ದಿನಗಳ ಬಗ್ಗೆ ಶಾಲೆಯಲ್ಲಿ ಶಿಕ್ಷಕ ಹಾಗೂ ಸಿಬ್ಬಂದಿಯ ಕೊರತೆಯ ಬಗ್ಗೆ ಅತಿಥಿಗಳಲ್ಲಿ ಸಹಾಯ ಹಸ್ತಕ್ಕೆ ಮನವಿ ಮಾಡಿಕೊಂಡರು.7ನೇ ಹೊಸಕೋಟೆ ದೀಪ್ತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜಿಜಿ ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಭಾಜನರಾಗಿದ್ದು, ಅವರನ್ನು ಸನ್ಮಾನಿಸಲಾಯಿತು.
ವಾರ್ಷಿಕ ವರದಿಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎಸ್.ಇಂದಿರಾ ವಾಚಿಸಿದರು.ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಶಬ್ಬೀರ್, ಆಲಿಕುಟ್ಟಿ, ಹರಪ್ಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಕುಶಾಲನಗರ ಸಂಚಾಲಕ ಖಾಸಿಂ, ಗುಡ್ಡೆಹೊಸೂರು ಉದ್ಯಮಿ ಗಗನ್, ಮಾಜಿ ಸದಸ್ಯ ಉಸ್ಮಾನ್, ಕಂಬಿಬಾಣೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ನಯನ, ಪೋಷಕರು ಹಾಗೂ ಮತ್ತಿತರರು ಇದ್ದರು.
ಕೆ.ಎಸ್.ಇಂದಿರಾ ಸ್ವಾಗತಿಸಿದರು. ಸಹಶಿಕ್ಷಕ ಗುರುಕ್ಕಿ ನಿರೂಪಿಸಿದರು. ಶೋಭಾ ಎಂ.ಟಿ. ವಂದಿಸಿದರು.ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.