ಅರ್ಧಕ್ಕೆ ನಿಂತ ಹೈಟೆಕ್ ಶೌಚಾಲಯ ನಿರ್ಮಾಣ, ಮಹಿಳೆಯರ ಪ್ರತಿಭಟನೆ

| Published : Jul 11 2025, 11:48 PM IST

ಅರ್ಧಕ್ಕೆ ನಿಂತ ಹೈಟೆಕ್ ಶೌಚಾಲಯ ನಿರ್ಮಾಣ, ಮಹಿಳೆಯರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

೧೫ನೇ ಹಣಕಾಸು ಅಡಿ ಅಂದಾಜು ₹ ೧೫.20 ಲಕ್ಷ ವೆಚ್ಚದಲ್ಲಿ ಈ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ಮೂರು ತಿಂಗಳ ಗಡುವು ನೀಡಿದ್ದರು. ಆದರೆ, ಪಕ್ಕದ ನಿವೇಶನ ಮಾಲೀಕರೊಬ್ಬರು ದೂರು ನೀಡಿದ ಕಾರಣದಿಂದ ೮ ತಿಂಗಳಿಂದ ಕಾಮಗಾರಿ ಸ್ಥಗಿತವಾಗಿದೆ.

ಕಾರಟಗಿ:

ಪಟ್ಟಣದ ೨೨ನೇ ವಾರ್ಡ್‌ನ ನೀರಾವರಿ ಇಲಾಖೆಗೆ ಸೇರಿದ್ದ ಜಾಗದಲ್ಲಿ ನಿರ್ಮಿಸುತ್ತಿರುವ ಸಾರ್ವಜನಿಕ ಶೌಚಾಲಯ ಕಾಮಗಾರಿ ೮ ತಿಂಗಳಿಂದ ಅರ್ಧಕ್ಕೆ ನಿಂತಿದ್ದು, ಕೂಡಲೇ ಪೂರ್ಣಗೊಳಿಸುವಂತೆ ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿ ಪುರಸಭೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

೨೨ನೇ ವಾರ್ಡ್‌ ವ್ಯಾಪ್ತಿಗೆ ಬರುವ ಅಬ್ದುಲ್ ನಜೀರ್‌ಸಾಬ್ ಕಾಲನಿ ಮುಂದೆ ಹೋಗಿರುವ ೩೧ನೇ ವಿತರಣಾ ಕಾಲುವೆ ದಂಡೆಯ ಮೇಲೆ ಶೆಡ್‌, ಗುಡಿಸಲು ಹಾಕಿಕೊಂಡಿರುವ ನಿವಾಸಿಗಳು ಬಯಲು ಬಹಿರ್ದೆಸೆ ಹೋಗುವುದನ್ನು ತಪ್ಪಿಸಲು ಪುರಸಭೆ ಕಾಲುವೆಗೆ ಹೊಂದಿಕೊಂಡಂತೆ ಹೈಟೆಕ್ ಶೌಚಾಲಯ ನಿರ್ಮಿಸಲು ಮುಂದಾಗಿತ್ತು. ಹಿಂದಿನ ಮುಖ್ಯಾಧಿಕಾರಿ ಸುರೇಶ ಶೆಟ್ಟರ್, ೧೫ನೇ ಹಣಕಾಸು ಅಡಿ ಅಂದಾಜು ₹ ೧೫.20 ಲಕ್ಷ ವೆಚ್ಚದಲ್ಲಿ ಈ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ಮೂರು ತಿಂಗಳ ಗಡುವು ನೀಡಿದ್ದರು. ಆದರೆ, ಪಕ್ಕದ ನಿವೇಶನ ಮಾಲೀಕರೊಬ್ಬರು ದೂರು ನೀಡಿದ ಕಾರಣದಿಂದ ೮ ತಿಂಗಳಿಂದ ಕಾಮಗಾರಿ ಸ್ಥಗಿತವಾಗಿದೆ.

ಪ್ರತಿಭಟನಾನಿರತ ಮಹಿಳೆಯರು, ಪ್ರಾಣದ ಹಂಗು ತೊರೆದು ಶಿಥಿಲಗೊಂಡಿರುವ ಶೌಚಾಲಯಕ್ಕೆ ಹೋಗಬೇಕು. ಇಲ್ಲವೇ, ರಾತ್ರಿ ವರೆಗೆ ದೇಹಬಾಧೆ ತಡೆದುಕೊಂಡು ಕತ್ತಲು ಆವರಿಸಿದ ಬಳಿಕ ಕಾಲುವೆ ಮೇಲೆ ಹೋಗಿ ಶೌಚ ಮಾಡುವ ದುಸ್ಥಿತಿ ಬಂದಿದೆ. ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಸ್ವಂತ ಜಾಗವಿಲ್ಲ. ಇದ್ದರೂ ಶೌಚಾಲಯ ಕಟ್ಟಿಸಿಕೊಳ್ಳುವಷ್ಟು ಜಾಗವಿಲ್ಲ. ಹೈಟೆಕ್‌ ಶೌಚಾಲಯ ಕಾಮಗಾರಿ ಮುಗಿಸಿದರೆ ನಮಗೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ವಾರ್ಡ್ ಸದಸ್ಯೆ ಪತಿ ನಾಗರಾಜ್ ಭಜಂತ್ರಿ ಮಾತನಾಡಿ, ಕಳೆದ ಒಂದು ವರ್ಷದಿಂದಲೂ ಶೌಚಾಲಯ ಕಾಮಗಾರಿ ಮುಗಿಸಿಕೊಡುವಂತೆ ಮುಖ್ಯಾಧಿಕಾರಿ ಸೇರಿದಂತೆ ಅಧ್ಯಕ್ಷರಿಗೆ ದುಂಬಾಲು ಬಿದ್ದಿದ್ದೇನೆ. ಆದರೂ ಕಾಮಗಾರಿ ಮೇಲೆಳುತ್ತಿಲ್ಲ. ಹೊಸದಾಗಿ ಬಂದಿರುವ ಮುಖ್ಯಾಧಿಕಾರಿ ಗಮನಕ್ಕೆ ತಂದಿದ್ದು, ತ್ವರಿತವಾಗಿ ಕಾಮಗಾರಿ ಮುಗಿಸಬೇಕೆಂದು ಒತ್ತಾಯಿಸಿದ್ದಾರೆ.

₹ 6 ಲಕ್ಷ ಖರ್ಚು:

ಈಗಾಗಲೇ ₹ 5ರಿಂದ ₹ 6 ಲಕ್ಷ ಖರ್ಚು ಮಾಡಿ ಕಟ್ಟಡ ಕಟ್ಟಿದ್ದು ಸ್ಲಾಬ್‌ ಹಂತಕ್ಕೆ ಬಂದಿದೆ. ಆ ಕಟ್ಟಡದ ಮೇಲೆ ಹೈಟೆಕ್ ಶೌಚಾಲಯ ನಿರ್ಮಿಸಬೇಕಿತ್ತು. ಆದರೆ, ಪಕ್ಕದ ನಿವೇಶನದ ಮಾಲೀಕರೊಬ್ಬರು, ದೂರು ನೀಡಿದ್ದಾರೆ ಎನ್ನುವ ಕಾರಣ ಕೊಟ್ಟು ಕೂಡಲೇ ಕಾಮಗಾರಿ ನಿಲ್ಲಿಸುವಂತೆ ನೋಟಿಸ್ ನೀಡಿದ್ದರಿಂದ ನಾನು ಅಲ್ಲಿಗೆ ಕೆಲಸ ನಿಲ್ಲಿಸಿದ್ದೇನೆ ನಮಗೆ ಪುನಃ ಅನುಮತಿ ಕೊಟ್ಟರೆ ತ್ವರಿತವಾಗಿ ಕಾಮಗಾರಿ ಮುಗಿಸಿಕೊಡುತ್ತೇನೆ ಎಂದು ಗುತ್ತಿಗೆದಾರ ಹುಸೇನಪ್ಪ ಹೇಳಿದರು.ಅರ್ಧಕ್ಕೆ ನಿಂತಿರುವ ಶೌಚಾಲಯದ ಕಾಮಗಾರಿ ಬಗ್ಗೆ ಗಮನಕ್ಕೆ ಬಂದಿದ್ದು ವಾರ್ಡ್‌ನ ಸ್ವಚ್ಛತೆ, ಬಯಲು ಬಹಿರ್ದೆಸೆ ನಿಲ್ಲಿಸಿ, ಕಾಲುವೆಗೆ ತ್ಯಾಜ್ಯ ಹೋಗುವುದನ್ನು ತಪ್ಪಿಸುವ ದೃಷ್ಟಿಯಿಂದ ಕಾಮಗಾರಿ ಆರಂಭಕ್ಕೆ ಚಾಲನೆ ನೀಡುತ್ತೇನೆ.

ಸಾಬಣ್ಣ ಕಟ್ಟಿಕಾರ ಮುಖ್ಯಾಧಿಕಾರಿ ಪುರಸಭೆ ಕಾರಟಗಿ