ಅಧಿಕ ಇಳುವರಿಗೆ ಕೃಷಿಯಲ್ಲಿ ಯಂತ್ರ ಬಳಕೆ ಅಗತ್ಯ

| Published : Jul 25 2024, 01:26 AM IST

ಅಧಿಕ ಇಳುವರಿಗೆ ಕೃಷಿಯಲ್ಲಿ ಯಂತ್ರ ಬಳಕೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆ ಬೆಳೆಯುವ ಮೊದಲು ರೈತರು ತಮ್ಮ ಜಮೀನಿನ ಮಣ್ಣು ಕಡ್ಡಾಯವಾಗಿ ಪರೀಕ್ಷಿಸಬೇಕು.

ಕುರುಗೋಡು: ಕೃಷಿಯಲ್ಲಿ ಯಂತ್ರಗಳ ಬಳಕೆಯಿಂದ ಸಮಯ, ಹಣ ಉಳಿತಾಯ ಮತ್ತು ಅಧಿಕ ಇಳುವರಿ ಪಡೆಯಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಸಂಜೀವಕುಮಾರ್ ಸಲಹೆ ನೀಡಿದರು.

ತಾಲೂಕಿನ ಗೆಣಿಕೆಹಾಳು ಗ್ರಾಮದ ರೈತ ಪರವನಗೌಡರ ಜಮೀನಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಯಂತ್ರದ ಮೂಲಕ ಬೀಜ ಬಿತ್ತನೆ ಮತ್ತು ಸಸಿ ಬೆಳೆಸುವ ತರಬೇತಿ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.ಯಂತ್ರ ಬಳಸಿ ೧೨ ಕೆಜಿ ಬೀಜ ೧೦೦ ಟ್ರೆಗಳಲ್ಲಿ ಬೆಳೆಸಿದ ಸಸಿಯನ್ನು ಒಂದು ಎಕರೆಯಲ್ಲಿ ನಾಟಿ ಮಾಡಬಹುದು. ಹಳೆಪದ್ಧತಿಯಲ್ಲಿ ಒಂದು ಎಕರೆಗೆ ೩೦ ಕೆಜಿ ಬೀಜ ಬೇಕಾಗುತ್ತದೆ ಎಂದು ವ್ಯತ್ಯಾಸ ತಿಳಿಸಿದರು.

ಕೃಷಿ ಕ್ಷೇತ್ರ ರೈತರಿಗೆ ಪಾಠಶಾಲೆಯಾಗಬೇಕು. ಬೀಜ ಬಿತ್ತನೆಯಿಂದ ಪ್ರಾರಂಭಗೊಂಡು ಸಸಿ ನಾಟಿ ಮತ್ತು ಬೆಳೆ ಕಟಾವು ಪ್ರಕ್ರಿಯೆ ವರೆಗೆ ಯಂತ್ರ ಬಳಕೆ ಮಾಡಿ ಕೃಷಿ ಕಾರ್ಮಿಕರ ಕೊರತೆ ಮತ್ತು ಸಮಯದ ಅಪವ್ಯಯ ತಪ್ಪಿಸಬಹುದು ಎಂದರು.

ಹಗರಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ರವಿ ಮಾತನಾಡಿ, ಬೆಳೆ ಬೆಳೆಯುವ ಮೊದಲು ರೈತರು ತಮ್ಮ ಜಮೀನಿನ ಮಣ್ಣು ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ಸಲಹೆ ನೀಡಿದರು. ಬಿತ್ತನೆ ಮತ್ತು ನಾಟಿಯಲ್ಲಿ ಯಂತ್ರಗಳ ಬಳಕೆಯಿಂದ ಅನಗತ್ಯ ವೆಚ್ಚ ತಡೆಯಬಹುದಾಗಿದೆ. ನಿರ್ವಹಣಾ ವೆಚ್ಚವೂ ಕಡಿಮೆಯಾಗುತ್ತದೆ. ಇಳುವರಿಯೂ ಅಧಿಕವಾಗುತ್ತದೆ ಎಂದರು.

ರೈತ ಪರವನ ಗೌಡ ೨೦ ಎಕರೆಯಲ್ಲಿ ಭತ್ತ ಬೆಳೆಯಲು ವೈಜ್ಞಾನಿಕ ಪದ್ಧತಿಯಲ್ಲಿ ತಂತ್ರ ಬಳಕೆ ಮಾಡಿ ಸಸಿ ಬೆಳೆಸಲು ಮುಂದಾಗಿದ್ದಾರೆ. ಹಣ, ಸಮಯ ಮತ್ತು ನೀರು ಉಳಿಸುವ ಪದ್ಧತಿಯನ್ನು ಮುಂದಿನ ವರ್ಷ ಎಲ್ಲ ರೈತರು ಅನುಸರಿಸಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ದಯಾನಂದ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಂ.ದೇವರಾಜ್, ಅತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕಿ ಕವಿತಾ, ತಾಲ್ಲೂಕು ಕೃಷಿ ತಾಂತ್ರಿಕ ವ್ಯವಸ್ಥಾಪಕಿ ವಾಣಿ, ಸಹಾಯಕ ವ್ಯವಸ್ಥಾಪಕ ರೇಣುಕಾರಾಧ್ಯ ರೈತರಾದ ಆರ್. ಮಹಾರುದ್ರಗೌಡ, ಎಂ.ಶಾಂತಪ್ಪ, ಎಂ.ಶರಣಬಸವ, ಸುರೇಶ್ ಗೌಡ, ಎಂ.ಪಂಪನ ಗೌಡ, ಗಂಡಿ ರಾಜಾಸಾಬ್ ಮತ್ತು ದೊಡ್ಡಬಸಪ್ಪ ಇದ್ದರು.