ಸಾರಾಂಶ
ಸಂತೆಕಟ್ಟೆ ಮೌಂಟ್ ರೋಸರಿ ಪ್ರೌಢ ಶಾಲಾ ವಾರ್ಷಿಕೋತ್ಸವದಲ್ಲಿ ಕಳೆದ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಸತತವಾಗಿ ಏಳನೇ ಬಾರಿ ನೂರು ಶೇಕಡಾ ಫಲಿತಾಂಶ ಪಡೆದ ಸಂಸ್ಥೆಯನ್ನು ಅಭಿನಂದಿಸಿ ಅತ್ಯುನ್ನತ ಶ್ರೇಣಿಯಲ್ಲಿ ಫಲಿತಾಂಶ ಪಡೆದ ೩೭ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲಾ ಹಂತ ಅತ್ಯಂತ ಮುಖ್ಯವಾದುದು. ಇಡೀ ವಿದ್ಯಾರ್ಥಿ ಜೀವನದ ಮೊತ್ತಮೊದಲ ಪಬ್ಲಿಕ್ ಪರೀಕ್ಷೆ ಹತ್ತನೇ ತರಗತಿಯ ಮಕ್ಕಳು ಎದುರಿಸುತ್ತಾರೆ. ಇಲ್ಲಿನ ಫಲಿತಾಂಶದ ಆಧಾರದ ಮೇಲೆ ನಿಮ್ಮ ಭವಿಷ್ಯ ನಿರ್ಧರಿತವಾಗುತ್ತದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಶಿಕ್ಷಣ ಮಂಡಳಿ ಸದಸ್ಯ ಪ್ರೊ. ಆರ್ಚಿಬಾಲ್ಡ್ ಫುರ್ಟಾಡೋ ಹೇಳಿದ್ದಾರೆ.ಸಂತೆಕಟ್ಟೆ ಮೌಂಟ್ ರೋಸರಿ ಪ್ರೌಢ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಳೆದ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಸತತವಾಗಿ ಏಳನೇ ಬಾರಿ ನೂರು ಶೇಕಡಾ ಫಲಿತಾಂಶ ಪಡೆದ ಸಂಸ್ಥೆಯನ್ನು ಅಭಿನಂದಿಸಿ ಅತ್ಯುನ್ನತ ಶ್ರೇಣಿಯಲ್ಲಿ ಫಲಿತಾಂಶ ಪಡೆದ ೩೭ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕ್ರೀಡೆ ಮತ್ತು ಪಠ್ಯೇತರ ವಿಷಯಗಳಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು.ಶಾಲಾ ಮುಖ್ಯಶಿಕ್ಷಕಿ ಸಿ.ಆನ್ಸಿಲ್ಲಾ ಡಿಮೆಲ್ಲೊ ಶಾಲಾ ವರದಿ ವಾಚಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ಫಾ.ಡಾ. ರೋಕ್ ಡಿ’ಸೋಜ, ಸಹಾಯಕ ಧರ್ಮಗುರು ಫಾ. ಓಲಿವರ್ ನಜ್ರೆತ್, ಗೊರಟ್ಟಿ ಕಾನ್ವೆಂಟಿನ ಮುಖ್ಯಸ್ಥೆ ಸಿ.ಜೇನ್ ಮರಿಯಾ, ಶಾಲಾ ಆಡಳಿತ ಮಂಡಳಿ ಸದಸ್ಯ ಲೂಕ್ ಡಿಸೋಜ ಹಾಗೂ ಬ್ಯಾಪ್ಟಿಸ್ಟ್ ಡಾಯಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗರಾಜ್, ವಿದ್ಯಾರ್ಥಿ ಸಂಘದ ನಾಯಕಿ ಅಕ್ಷತಾ ಇದ್ದರು.
ಶಾಲಾ ಸಂಚಾಲಕ ಫಾ.ಡಾ. ರೋಕ್ ಡಿಸೋಜ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕೃಪಾ ಪೂಜಾರಿ ಮತ್ತು ವಿದ್ಯಾರ್ಥಿ ಸಂಘದ ಉಪನಾಯಕ ನೀಲ್ ಡಿಸೋಜ ನಿರೂಪಿಸಿದರು. ಶಿಕ್ಷಕಿ ವನೀತಾ ಫರ್ನಾಂಡಿಸ್ ವಂದಿಸಿದರು. ಭಾರತೀಯ ಸಂಸ್ಕೃತಿ ಬಿಂಬಿಸುವ ನೃತ್ಯ- ನಾಟಕಗಳ ಪ್ರದರ್ಶನ ನಡೆಯಿತು.