ರಾಷ್ಟ್ರೀಯ ನೀತಿಗಳು ಸ್ವಾಯತ್ತ ವಿವಿ ಪರವಾಗಿ ಬರುತ್ತಿವೆ: ಸುಧಾಕರ್‌

| Published : Aug 22 2024, 12:49 AM IST

ರಾಷ್ಟ್ರೀಯ ನೀತಿಗಳು ಸ್ವಾಯತ್ತ ವಿವಿ ಪರವಾಗಿ ಬರುತ್ತಿವೆ: ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳು ಮುಂಬರುವ ದಿನಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಸ್ತಿತ್ವಕ್ಕೇ ಮುಳುವಾಗುವ ದೊಡ್ಡ ಆತಂಕವಿದೆ. ಹಾಗಾಗಿ ಕೇಂದ್ರ ಸರ್ಕಾರ ಸ್ವಾಯತ್ತತೆ ವಿಚಾರವನ್ನು ಮರು ಪರಿಶೀಲಿಸುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳು ಮುಂಬರುವ ದಿನಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಸ್ತಿತ್ವಕ್ಕೇ ಮುಳುವಾಗುವ ದೊಡ್ಡ ಆತಂಕವಿದೆ. ಹಾಗಾಗಿ ಕೇಂದ್ರ ಸರ್ಕಾರ ಸ್ವಾಯತ್ತತೆ ವಿಚಾರವನ್ನು ಮರು ಪರಿಶೀಲಿಸುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದ್ದಾರೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ನೃಪತುಂಗ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯ ನೀತಿಗಳು ಖಾಸಗಿ ಮತ್ತು ಸ್ವಾಯತ್ತ ವಿಶ್ವವಿದ್ಯಾಲಯಗಳ ಪರವಾಗಿ ಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದ ಉನ್ನತ ಶಿಕ್ಷಣವನ್ನು ಮುನ್ನೆಸುವ ಹೊಣೆ ಹೊತ್ತಿರುವ ಯುಜಿಸಿ ಅಧ್ಯಕ್ಷ ಡಾ.ಎಂ. ಜಗದೀಶ್‌ ಕುಮಾರ್‌ ಅವರ ಸಮ್ಮುಖದಲ್ಲಿ ಪ್ರಾಮಾಣಿಕವಾಗಿ ಕೆಲ ಅಂಶಗಳನ್ನು ಹೇಳಬಯಸುತ್ತೇನೆ. ಇತ್ತೀಚಿನ ಇತ್ತೀಚೆಗೆ ಪ್ರಕಟವಾದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (ಎನ್‌ಐಆರ್‌ಎಫ್‌) ವರದಿಯಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳು ಸಾರ್ವಜನಿಕ ವಿಶ್ವವಿದ್ಯಾಲಯಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ರ್‍ಯಾಂಕ್‌ ಪಡೆದುಕೊಂಡಿವೆ. ಇದು ಆತಂಕದಾಯಕ ವಿಚಾರ. ಏಕೆಂದರೆ ದೇಶದ 29 ಖಾಸಗಿ ವಿವಿಗಳು ಶೈಕ್ಷಣಿಕ ಪ್ರಗತಿಯಲ್ಲಿ ದೊಡ್ಡ ಮಟ್ಟದಲ್ಲಿ ಅಂದರೆ ಶೇ.76ರಷ್ಟು ಸುಧಾರಣೆ ಕಂಡಿವೆ.

ಆದರೆ, ಸಾರ್ವಜನಿಕ ವಿವಿಗಳಲ್ಲಿ ಶೇ.61ರಷ್ಟು ಕುಸಿತ ಕಂಡಿವೆ ಎಂದು ಹೇಳಲಾಗಿದೆ. ನನ್ನ ಗಂಭೀರ ಪ್ರಶ್ನೆ, ಖಾಸಗಿ ವಿವಿಗಳು ನಿಜವಾಗಲೂ ಸುಧಾರಿಸುತ್ತಿವೆಯೇ ಅಥವಾ ರ್‍ಯಾಂಕಿಂಗ್‌ ಪಡೆಯಲು ಬೇರೆ ಯಾವುದಾದರೂ ಮಾರ್ಗ ಕಂಡುಕೊಂಡಿವೆಯಾ ಎಂದು ಅನುಮಾನ ವ್ಯಕ್ತಪಡಿಸಿದರು.

ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಸರ್ಕಾರಗಳು ಖಾಸಗಿ ವಿವಿಗಳಿಗೆ ಉತ್ತೇಜನ ನೀಡುತ್ತಿದ್ದೇವೆ. ಆದರೆ, ಇದು ಮುಂದಿನ ದಿನಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಅಸ್ತಿತ್ವಕ್ಕೆ ಮುಳುವಾಗುವ ಆತಂಕವಿದೆ. ಹಾಗಾಗಿ ಸ್ವಾಯತ್ತತೆ ಬಗ್ಗೆ ಮರು ಪರಿಶೀಲಿಸುವ ಅಗತ್ಯವಿದೆ. ಈ ದೇಶವು ಸಾರ್ವಜನಿಕ ವಿಶ್ವ ವಿದ್ಯಾನಿಲಯಗಳಿಂದ ಪ್ರಾರಂಭವಾಯಿತು.

ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾರ್ವಜನಿಕ ವಿವಿಗಳ ಅಭಿವೃದ್ಧಿ, ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಕೇಂದ್ರ ಸರ್ಕಾರ, ಯುಜಿಸಿ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಶ್ರಮಿಸಬೇಕಿದೆ. ಏಕೆಂದರೆ ಸಾರ್ವಜನಿಕ ವಿವಿಗಳಲ್ಲಿ ಸಾಕಷ್ಟು ಬೋಧನಾ ಸಿಬ್ಬಂದಿ ಕೊರತೆ, ಐಐಟಿಗಳಲ್ಲೇ ನುರಿತ ಬೋಧಕರ ಕೊರತೆ ಇದೆ. ಇನ್ನು ಸಾಮಾನ್ಯ ವಿವಿಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು. ಸಾಕಷ್ಟು ಬೋಧಕ ಹುದ್ದೆಗಳು ಖಾಲಿ ಇವೆ. ಮೂಲಸೌಕರ್ಯ, ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.

ಯುಜಿಸಿ ಅಧ್ಯಕ್ಷ ಪ್ರೊ.ಎಂ.ಜಗದೀಶ್‌ ಕುಮಾರ್‌ ಮಾತನಾಡಿ, ವಿಶ್ವದ ಜನಸಂಖ್ಯೆ 2050ರ ವೇಳೆಗೆ 9 ಬಿಲಿಯನ್‌(900 ಕೋಟಿ) ತಲುಪುವ ನಿರೀಕ್ಷೆ ಇದೆ. ಜನಸಂಖ್ಯೆ ಹೆಚ್ಚಿದಂತೆ ಭೂಮಿಯ ವಿಸ್ತೀರ್ಣ ಹೆಚ್ಚಾಗುವುದಿಲ್ಲ. ಲಭ್ಯವಿರುವ ಸಂಪನ್ಮೂಲದಲ್ಲೇ ಬದುಕು ನಡೆಸುವುದು ಸವಾಲಿನ ಕೆಲಸ. ಈ ಸವಾಲಿಗೆ ಪರಿಹಾರ ಕಲ್ಪಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ನೃಪತುಂಗ ವಿವಿಯ ಕುಲಪತಿ ಪ್ರೊ.ಶ್ರೀನಿವಾಸ ಎಸ್‌.ಬಳ್ಳಿ, ಕುಲಸಚಿವ ಶಿವನಂದ ಬ.ಕರಾಳೆ ಮತ್ತು ಮೌಲ್ಯಮಾಪನ ಕುಲಸಚಿವೆ ಪ್ರೊ.ಎ.ಸಿ.ಮಂಜುಳ ಉಪಸ್ಥಿತರಿದ್ದರು.

...ಬಾಕ್ಸ್....

ಮೂವರಿಗೆ ಗೌರವ ಡಾಕ್ಟರೇಟ್‌ ಘಟಿಕೋತ್ಸವದಲ್ಲಿ ಇಸ್ರೋ ವಿಜ್ಞಾನಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್‌ನ ಡಾ.ರಾಮಸ್ವಾಮಿ ಬಾಲಸುಬ್ರಮಣಿಯನ್, ಇನ್ಫೋಸಿನ್‌ ಸಂಸ್ಥಾಪಕರಲ್ಲೊಬ್ಬರಾದ ಕೆ.ದಿನೇಶ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ವೇಳೆ ವಿವಿಯ ಒಟ್ಟು792 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗಗಳಲ್ಲಿ ಟಾಪರ್‌ಗಳಾದ 16 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಪುರಸ್ಕರಿಸಲಾಯಿತು.