ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಶಿಕ್ಷಣ ಅಂಕಪಟ್ಟಿಗೆ ಸೀಮಿತವಾಗಬಾರದು. ಉದ್ಯೋಗ ಜಗತ್ತಿಗೆ ಸೂಕ್ತವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ವಿವಿಯ ಉದ್ಯೋಗಾಧಿಕಾರಿ ಪ್ರೊ.ಪರಶುರಾಮ ಕೆ.ಜಿ.ತಿಳಿಸಿದರು.ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕ ಹಾಗೂ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ವಾರದ ವೃತ್ತಿ ಕೌಶಲ್ಯತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರಶಿಕ್ಷಣ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.ಪ್ರತಿ ವರ್ಷ ಪದವಿ ಪೂರ್ಣಗೊಳಿಸುತ್ತಿರುವ ಸಾವಿರಾರು ಮಂದಿಯಲ್ಲಿ ಉನ್ನತ ಶಿಕ್ಷಣದ ಮೆಟ್ಟಿಲೇರುತ್ತಿರುವವರ ಸಂಖ್ಯೆ ಬೆರಳೆಣಿಕೆಯಷ್ಟಿರುವುದು ಬೇಸರದ ಸಂಗತಿ. ಶಿಕ್ಷಣ ಉದ್ಯೋಗ, ಉನ್ನತ ಶಿಕ್ಷಣ, ಸ್ವಯಂ ಉದ್ಯೋಗಕ್ಕೆ ದಾರಿದೀಪವಾಗಬೇಕೇ ಹೊರತು ನಿರುದ್ಯೋಗ ಸಮಸ್ಯೆ ಸೃಷ್ಟಿಸಬಾರದು. ಶಿಕ್ಷಣವೆಂದರೆ ಜ್ಞಾನ ಮತ್ತು ಸಾಕ್ಷರತೆಗಾಗಿ ಹೋರಾಟ.ಶಿಕ್ಷಣವನ್ನು ಕೌಶಲ್ಯವಾಗಿ ಪರಿವರ್ತಿಸಿ ಪ್ರತಿಭೆಗಳ ಅನಾವರಣವಾಗಬೇಕು ಎಂದು ತಿಳಿಸಿದರು.
ವಿವಿ ಕಲಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ರವಿ ಸಿ. ಎಂ. ಮಾತನಾಡಿ, ಕೃತಕ ಬುದ್ಧಿಮತ್ತೆಯ ಸ್ಪರ್ಧಾಯುಗದಲ್ಲಿ ಉದ್ಯೋಗ ಬಯಸುವ ಕೌಶಲ್ಯಗಳಲ್ಲಿ ನಿಪುಣತೆ ಹಾಗೂ ಪರಿಣಿತಿ ಹೊಂದಿರಬೇಕು.ಮಾರುಕಟ್ಟೆ ಬಯಸುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡು, ಉನ್ನತ ಹುದ್ದೆಯನ್ನು ಅಲಂಕರಿಸುವ ಪ್ರತಿಭೆ ನಮ್ಮದಾಗಬೇಕು ಎಂದು ಹೇಳಿದರು.ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕ ಅರವಿಂದ ಕ್ರಿಸ್ಟಿ ಮಾತನಾಡಿ, ಶೇ.60 ವಿದ್ಯಾರ್ಥಿನಿಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆಯಲು ಸಹಕರಿಸುತ್ತೇವೆ. ಸಂವಹನ ಕಲೆ, ಬರೆವಣಿಗೆಯಂತಹ ಕೌಶಲ್ಯಗಳನ್ನು ಕಲಿಸುತ್ತೇವೆ ಎಂದು ತಿಳಿಸಿದರು.ವಿವಿ ಕಲಾ ಕಾಲೇಜಿನ ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕದ ಸಂಯೋಜಕ ಡಾ.ಸಿಬಂತಿ ಪದ್ಮನಾಭ ಕೆ. ವಿ., ಕಲಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಮೌಳಿ, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಕಾರ್ಯಕ್ರಮ ವ್ಯವಸ್ಥಾಪಕ ಧವನ್‌ಗೌಡ, ಕಿರಣ್ ಚಿಂತಲಪುಡಿ, ಸಹ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಶರ್ಮಾ ವಿ, ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕದ ಸದಸ್ಯ ಪ್ರಹ್ಲಾದ್ ಜಿ.ಉಪಸ್ಥಿತರಿದ್ದರು.