ತಂತ್ರಜ್ಞಾನ ಮತ್ತು ನವೀನ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸುವುದರ ಮೂಲಕ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹರಾ ತಿಳಿಸಿದರು
ಕನ್ನಡಪ್ರಭ ವಾರ್ತೆ ಆನಂದಪುರ
ತಂತ್ರಜ್ಞಾನ ಮತ್ತು ನವೀನ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸುವುದರ ಮೂಲಕ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹರಾ ತಿಳಿಸಿದರುಅವರು ಇಲ್ಲಿಗೆ ಸಮೀಪದ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ವಿಶ್ವವಿದ್ಯಾಲಯದ 11ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರದ ಹವಾಮಾನ ವೈಪರೀತ್ಯ, ನೀರಿನ ಕೊರತೆ, ಮಣ್ಣಿನ ಸವಕಳಿ ಹಾಗೂ ಮಾರುಕಟ್ಟೆಯ ಏರಿಳಿತದಂತಹ ಸವಾಲುಗಳನ್ನು ಎದುರಿಸಲು ನೂತನ ತಂತ್ರಜ್ಞಾನ, ಕೌಶಲ್ಯ, ನವೀನ ಮಾದರಿಯ ಬೆಳೆಗಳನ್ನು ರೈತರು ಕೃಷಿ ಕ್ಷೇತ್ರದಲ್ಲಿ ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದರು.
ಸಂಶೋಧನೆಗಳು ಪ್ರಯೋಗಾಲಯಕ್ಕೆ ಸೀಮಿತವಾಗದೆ ಪ್ರಯೋಗಾಲಯದಿಂದ ರೈತರ ಹೊಲಗಳಿಗೆ ತಲುಪಬೇಕು. ದೇಶದಲ್ಲಿ ಶೇ.42 ರಿಂದ 43ರಷ್ಟು ಜನರು ಕೃಷಿಯನ್ನು ಅವಲಂಬಿಸಿದೆ. ಶೇ.18.4ರಷ್ಟಿದೆ. ಪ್ರಸ್ತುತ ತಲಾ ಕೃಷಿ ಜಮೀನಿನ ವಿಸ್ತೀರ್ಣ ಸುಮಾರು 0.11 ಹೆಕ್ಟೇರ್ ಇದ್ದು, 2047ರ ವೇಳೆಗೆ 0.06 ಹೆಕ್ಟೇರ್‌ಗೆ ಇಳಿಯುವ ಸಾಧ್ಯತೆ ಇದೆ. ಹೀಗಾಗಿ ಸೀಮಿತ ಭೂಮಿಯಲ್ಲಿ ಹೆಚ್ಚಿನ ಉತ್ಪಾದನೆ ಪಡೆಯಲು ಸುಸ್ಥಿರ ಹಾಗೂ ಸಂಪನ್ಮೂಲ-ಸಮರ್ಥ ಕೃಷಿ ಪದ್ಧತಿಗಳ ಅಗತ್ಯವಿದೆ ಎಂದು ಹೇಳಿದರು.ನಂತರ ಕುಲಪತಿ ಡಾ. ಎಂ.ವಿ. ಧನಂಜಯ ಮಾತನಾಡಿ, AI, ಡ್ರೋನ್, ಸ್ವಯಂಚಾಲಿತ ಹನಿ ನೀರಾವರಿ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಕೃಷಿ ಮಾಡಬೇಕು. ಮಣ್ಣಿನ ಗುಣಮಟ್ಟ, ಕೀಟ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ತಳಿಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ತಿಳಿಸಿದರು.ವಿಶ್ವವಿದ್ಯಾಲಯ ಆರಂಭವಾದ ಬಳಿಕ 3,914 ಪದವಿ, 1,000 ಸ್ನಾತಕೋತ್ತರ ಹಾಗೂ 132 ಪಿಎಚ್.ಡಿ. ಸೇರಿದಂತೆ 5,046 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಒಟ್ಟು 329 ಚಿನ್ನದ ಪದಕಗಳನ್ನು ನೀಡಲಾಗಿದ್ದು, 246 ವಿದ್ಯಾರ್ಥಿಗಳು ಗೌರವ ಪಡೆದಿದ್ದಾರೆ. ವಿಶ್ವವಿದ್ಯಾಲಯವು 22 ಬೆಳೆ ತಳಿಗಳನ್ನು ಬಿಡುಗಡೆ ಮಾಡಿದ್ದು, ವಿವಿಧ ಕ್ಷೇತ್ರಗಳಲ್ಲಿ 133 ತಂತ್ರಜ್ಞಾನಗಳಲ್ಲಿ ಪ್ರಗತಿ ಸಾಧಿಸಿದೆ. ಇದುವರೆಗೆ 79,30,337 ಸಸಿಗಳು, 2,75,531 ಕೆ.ಜಿ. ಜೈವಿಕ ಗೊಬ್ಬರ ಹಾಗೂ 72,598 ಕ್ವಿಂಟಾಲ್ ವಿವಿಧ ಬೆಳೆಗಳ ಬೀಜೋತ್ಪಾದನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಕುಲಸಚಿವ ಶಾಮರಾವ್ ಜಹಾಗೀರದಾರ ಮಾತನಾಡಿದರು. ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಹ್ಯ ಅನುದಾನಿತ ಯೋಜನೆಗಳನ್ನು ಪಡೆದ ವಿಜ್ಞಾನಿಗಳಿಗೆ ಹಾಗೂ ಸಂಶೋಧನಾ ಲೇಖನಗಳ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ವಿಶ್ವವಿದ್ಯಾಲಯದ ನಿವೃತ್ತಿ ಹೊಂದಿದ ಬೋಧಕ ಬೋಧಕೇತರರಿಗೆ ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಸದಸ್ಯರಾದ ದೇವಿ ಕುಮಾರ್, ಶಶಾಂಕ್, ಉತ್ಕೃಷ್ಟ ಶಿಕ್ಷಣ ತಜ್ಞ ಬಸವರಾಜ ನಾಯ್ಕ್, ಕೃಷಿ ಉದ್ಯಮದಾರ ಯೋಗೇಶ್ವರ್, ಡೀನ್ ಶ್ರೀನಿವಾಸ್, ಶಿಕ್ಷಣ ನಿರ್ದೇಶಕ ಹೆಮ್ಲಾ ನಾಯಕ್, ಸಂಶೋಧಕ ನಿರ್ದೇಶಕ ಶ್ರೀಧರ್, ಹಣಕಾಸು ನಿಯಂತ್ರಾಧಿಕಾರಿ ಪ್ರಿಯಾಂಕ, ಅವಿನಾಶ್ ಇನ್ನಿತರರು ಉಪಸ್ಥಿತರಿದ್ದರು.-------------------------------
ಫೋಟೋ 21 ಎ, ಎನ್, ಪಿ 1ಆನಂದಪುರ ಸಮೀಪದ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ 14ನೇ ಸಂಸ್ಥಾಪನಾ ದಿನಾಚರಣೆಯ ಬೆಂಗಳೂರು ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ತುಷಾರ್ ಕಾಂತಿ ಬಿಹಾರ್ ಉದ್ಘಾಟಿಸಿದರು. ಕುಲಪತಿ ಡಾ. ಎಮ್. ವಿ. ಧನಂಜಯ್ ಸೇರಿ ಅನೇಕರು ಉಪಸ್ಥಿತರಿದ್ದರು.