ಸಾರಾಂಶ
ಮಾ. 23ರ ಬೆಳಗ್ಗೆ 8.30ರಿಂದ ಮಾ. 24ರ ಬೆಳಗ್ಗೆ 8.30ರ ಅವಧಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ 41.7 ಹಾಗೂ ಕನಿಷ್ಠ 19.5 ತಾಪಮಾನ ದಾಖಲಾಗಿದೆ. ಇದು ಪ್ರಸಕ್ತ ಸಾಲಿನಲ್ಲಿ ದಾಖಲಾದ ಗರಿಷ್ಠ ತಾಪಮಾನದ ಜತೆಗೆ ಸಾರ್ವಕಾಲಿಕ ದಾಖಲೆಯೂ ಆಗಿದೆ.
ಧಾರವಾಡ: ಈ ಬಾರಿಯ ಬಿಸಿಲು ಜನರ ನೆತ್ತಿ ಸುಡುತ್ತಿದ್ದು, ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದೆ. ಈ ಮಧ್ಯೆ ರಾಜ್ಯದ ಪೈಕಿ ಕಳೆದ 24 ಗಂಟೆಗಳಲ್ಲಿ ಧಾರವಾಡದಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿದೆ.
ಬೆಂಗಳೂರಿನ ಕರ್ನಾಟಕ ರಾಜ್ಯ ನೈಸಗಿರ್ಕ ವಿಕೋಪ ನಿರ್ವಹಣಾ ಕೋಶದ ಮಾಹಿತಿ ಪ್ರಕಾರ ಮಾ. 23ರ ಬೆಳಗ್ಗೆ 8.30ರಿಂದ ಮಾ. 24ರ ಬೆಳಗ್ಗೆ 8.30ರ ಅವಧಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ 41.7 ಹಾಗೂ ಕನಿಷ್ಠ 19.5 ತಾಪಮಾನ ದಾಖಲಾಗಿದೆ. ಇದು ಪ್ರಸಕ್ತ ಸಾಲಿನಲ್ಲಿ ದಾಖಲಾದ ಗರಿಷ್ಠ ತಾಪಮಾನದ ಜತೆಗೆ ಸಾರ್ವಕಾಲಿಕ ದಾಖಲೆಯೂ ಆಗಿದೆ.ಮಲೆನಾಡಿನ ಸೆರಗಿನಲ್ಲಿರುವ ಧಾರವಾಡ ಜಿಲ್ಲೆಯಲ್ಲಿ ಸದಾ ತಂಪು ವಾತಾವರಣ ಇರುತ್ತದೆ. ಬೇಸಿಗೆಯಲ್ಲಿ ಕೆಲ ವರ್ಷಗಳಿಂದ ಹೆಚ್ಚೆಂದರೆ 40 ಡಿಗ್ರಿ ತಾಪಮಾನ ದಾಖಲಾಗುತ್ತಿತ್ತು. ಮಾರ್ಚ್ ಆರಂಭದಲ್ಲೇ 35ರಿಂದ 38ರ ವರೆಗೆ ದಾಖಲಾಗಿದ್ದ ತಾಪಮಾನ ಮಾ. 16ರಂದು 41.3ಕ್ಕೆ ಏರಿಕೆಯಾಗಿತ್ತು. ಇದೀಗ 41.7ಗೆ ಏರಿಕೆಯಾಗಿದ್ದು ದಾಖಲೆಯಾಗಿದೆ.
ಯಾದಗಿರಿ, ಬೀದರ, ಕಲಬುರಗಿ, ರಾಯಚೂರ, ಕೊಪ್ಪಳ, ಬಳ್ಳಾರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ತಾಪಮಾನ 40 ಡಿಇಗ್ರಿ ಸೆಲ್ಸಿಯಸ್ ದಾಟುವುದು ಸಾಮಾನ್ಯ. ಆದರೆ, ಎಂದಿಗೂ ಈ ಪ್ರಮಾಣದ ತಾಪಮಾಣ ಕಾಣದ ಧಾರವಾಡ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲೇ 41.7 ತಾಪಮಾನ ತಲುಪಿದ್ದು, ಇನ್ನೂ 2 ತಿಂಗಳಲ್ಲಿ ಎಷ್ಟು ಹೆಚ್ಚಳವಾಗುವುದು ಎಂಬುದು ಜನರ ಚಿಂತೆಗೆ ಕಾರಣವಾಗಿದೆ.ಉಳಿದಂತೆ ರಾಯಚೂರ ಜಿಲ್ಲೆಯಲ್ಲಿ 40.9, ಕಲಬುರಗಿ 41.1, ಬೀದರ 40.3, ಬೆಳಗಾವಿ 41.5, ಬಾಗಲಕೋಟೆ 40.2, ವಿಜಯಪುರ 40.2, ಗದಗ 40.2, ಹಾವೇರಿ 40.9 ಗರಿಷ್ಠ ತಾಪಮಾನ ದಾಖಲಾಗಿದೆ.