ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಎಸ್‌ಎಸ್‌ಎಲ್‌ಸಿಯು ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು, ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಬಾರದು. ಸತತ ಅಭ್ಯಾಸದಿಂದ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.
ನಗರದ ಡ್ಯಾಪೋಡಿಲ್ಸ್ ಶಾಲೆ ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ತಂದೆ-ತಾಯಿ ಕಷ್ಟಪಟ್ಟು ದುಡಿದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ. ಅದನ್ನು ವ್ಯರ್ಥ ಮಾಡಬಾರದು. ಅವರ ಶ್ರಮ ಸಾರ್ಥಕವಾಗುವಂತೆ ಮಾಡುವುದು ಮಕ್ಕಳ ಕರ್ತವ್ಯ ಎಂದರು.ಪರೀಕ್ಷೆ ವೇಳಾಪಟ್ಟಿ ಅಂತಿಮಗೊಂಡಿದೆ. ಈಗ ಸಮಯ ಬಹಳ ಅಮೂಲ್ಯವಾದುದು. ಕಾಲಹರಣ ಮಾಡದೆ ಪಠ್ಯ ವಿಷಯಗಳತ್ತ ವಿದ್ಯಾರ್ಥಿಗಳು ಗಮನಹರಿಸಬೇಕು. ಶಾಲೆಯಲ್ಲಿ ಶಿಕ್ಷಕರು ಹೇಳಿದ ವಿಷಯಗಳನ್ನು ಮನನ ಮಾಡಿಕೊಳ್ಳಬೇಕು. ಆಸಕ್ತಿಯಿಂದ ಓದಿನಲ್ಲಿ ತೊಡಗಿಕೊಳ್ಳಬೇಕು. ಇಷ್ಟು ದಿನ ಯಾವುದೋ ಕಾರಣಗಳಿಂದ ಪಠ್ಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗದಿದ್ದರೆ ಈಗಿನಿಂದಲೇ ಓದಿನ ಕಡೆ ಗಮನಹರಿಸಿದರೂ ಸಾಕು. ಉತ್ತಮ ಸಾಧನೆ ಮಾಡುವುದಕ್ಕೆ ಇನ್ನೂ ಸಮಯಾವಕಾಶವಿದೆ ಎಂದರು.
ವಿದ್ಯಾರ್ಥಿಗಳೇ ಗುಂಪು ಮಾಡಿಕೊಂಡು ಓದಿನಲ್ಲಿ ತೊಡಗುವುದರಿಂದ ವಿಷಯಗಳು ಪರಸ್ಪರ ವಿನಿಮಯಗೊಳ್ಳುತ್ತವೆ. ಸಮಸ್ಯೆಗಳು, ಗೊಂದಲಗಳಿದ್ದರೆ ಶಿಕ್ಷಕರನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಛಲ, ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಭಯ, ಆತಂಕಕ್ಕೆ ಒಳಗಾಗದೆ ಕಲಿಕೆಯತ್ತ ಆಸಕ್ತಿಯಿಂದ ತೊಡಗಿಸಿಕೊಂಡಾಗ ನಿರೀಕ್ಷಿತ ಸಾಧನೆ ಮಾಡಬಹುದು ಎಂದರು.ಪರೀಕ್ಷೆ ಮುಗಿಯುವವರೆಗೆ ಮೊಬೈಲ್, ಟೀವಿಯಿಂದ ವಿದ್ಯಾರ್ಥಿಗಳು ದೂರವಿರಬೇಕು. ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ಆಳವಾದ ಅಧ್ಯಯನದಲ್ಲಿ ತೊಡಗುವ ಕಡೆ ನಿಮ್ಮ ಗಮನವಿರಬೇಕು. ಮುಂದಿನ ಜೀವನ ಉತ್ತಮವಾಗಿರಬೇಕಾದರೆ ಈಗ ಕಠಿಣ ಶ್ರಮಪಡುವುದು ಅಗತ್ಯ. ಈ ಸಮಯದಲ್ಲಿ ಸುಖಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದೆ ಓದಿಗೆ ಮೊದಲ ಆದ್ಯತೆಯನ್ನು ನೀಡುವಂತೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ಕೀಳರಿಮೆಯನ್ನು ತೊರೆಯಬೇಕು. ಒತ್ತಡಕ್ಕೆ ಒಳಗಾಗಬಾರದು. ನಿದ್ರೆಗೆಡಬಾರದು. ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು. ತರಕಾರಿ, ಸೊಪ್ಪು, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಯೋಗ, ಧ್ಯಾನ, ವ್ಯಾಯಾಮ ಚಟುವಟಿಕೆಗಳಿಂದ ಮನಸ್ಸು ಕ್ರಿಯಾಶೀಲಗೊಳ್ಳುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯವಾಗುತ್ತದೆ ಎಂದರು.ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಗುರು-ಹಿರಿಯರನ್ನು ಗೌರವ ಭಾವನೆಯಿಂದ ಕಾಣಬೇಕು. ತಂದೆ-ತಾಯಿಯನ್ನು ಕೊನೆವರೆಗೂ ಕೈಬಿಡದೆ ಕಾಪಾಡಬೇಕು. ಅವರ ಶ್ರಮವನ್ನು ಸಾರ್ಥಕಗೊಳ್ಳುವಂತೆ ತಂದೆ-ತಾಯಿಗೆ ತಕ್ಕ ಮಕ್ಕಳಾಗಿ ಬದುಕು ಸಾಗಿಸುವಂತೆ ಕಿವಿಮಾತು ಹೇಳಿದರು.
ಡ್ಯಾಪೋಡಿಲ್ಸ್ ಶಾಲೆಯ ಸಂಸ್ಥಾಪಕಿ ಸುಜಾತ ಕೃಷ್ಣ, ಶಿಕ್ಷಕ ವೃಂದ ಹಾಜರಿದ್ದರು.