ಸಾರಾಂಶ
ಕನಕಪುರ : ರಾಷ್ಟ್ರೀಯ ಹೆದ್ದಾರಿ 207 ಜನರ ಪಾಲಿಗೆ ಅನುಕೂಲಕ್ಕಿಂತಲೂ ಅನಾನುಕೂಲವೇ ಜಾಸ್ತಿ ಯಾಗಿದೆ ಎಂದು ಕನಕಪುರ ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರು ಅವರು, ಈ ರಸ್ತೆ ಕಾಮಗಾರಿ ಆರಂಭವಾದ ದಿನದಿಂದಲೂ ಕುಂಟುತ್ತಾ ಸಾಗುತ್ತಿರುವ ಕಾಮಗಾರಿಯಿಂದ ನೂರಾರು ಅಪಘಾತಗಳಾಗಿ ಹಲವಾರು ಸಾವು ನೋವುಗಳಿಂದ ರಕ್ತತರ್ಪಣ ಕಂಡ ಈ ರಸ್ತೆಯು ಇಂದು ಅವೈಜ್ಞಾನಿಕ , ಹಾಗೂ ಕಳಪೆ ಕಾಮಗಾರಿ ಹಾಗೂ ದೂರದೃಷ್ಟಿಯಿಲ್ಲದ ನಿರ್ಮಾಣದಿಂದಾಗಿ ಮುಂದೆ ಸಾವಿರಾರು ಜನರ ರಕ್ತದ ಕೋಡಿಗೆ ಕಾದು ಕುಳಿತಿರುವಂತಿದೆ ಎಂದು ಅವರು ಆರೋಪಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿಯ ಈ ರಸ್ತೆಯಲ್ಲಿ ಹಲವು ಕಡೆ ಸರಾಗವಾಗಿ ಮಳೆ ನೀರು ಹರಿದು ಹೋಗದೆ ರಸ್ತೆಯಲ್ಲಿ ಕೆರೆಯಂತಾಗುವಂತೆ ನಿರ್ಮಿಸಲಾಗಿದೆ. ರಸ್ತೆ ಜಕ್ಕಸಂದ್ರದ ಮುಂದೆ ದಯಾನಂದ ಸಾಗರ ಆಸ್ಪತ್ರೆಗೆ ಅನತಿ ದೂರದಲ್ಲಿ ಪೈಪ್ ಲೈನ್ ಹಾದು ಹೋಗುವ ಸ್ಥಳ ವು ತಿರುವು ಹೊಂದಿದ್ದು ಅಂಚಿನಲ್ಲಿ ಹಾದು ಹೋದರೆ ತೀವ್ರ ತರದ ಅಪಘಾತವಾಗುವ ಸಂಭವವಿದೆ. ಅಲ್ಲದೆ ಖಾಸಗಿ ಹೋಟೆಲ್ ನವರಿಂದ ಹಣ ಪಡೆದು ಲಾಭ ಮಾಡಿಕೊಡುವ ಉದ್ದೇಶದಿಂದ ರಸ್ತೆಯ ವಿಭಜಕ ವನ್ನು ಬಗೆದು ಹೋಟೆಲ್ ನತ್ತ ತಿರುವು ಪಡೆದು ಕೊಳ್ಳಲು ಅವಕಾಶ ಸೃಷ್ಟಿಸಿದ್ದಾರೆ. ಎದುರಿನಿಂದ ಇಳಿ ಜಾರಿನ ರಸ್ತೆ ಯಲ್ಲಿ ವೇಗವಾಗಿ ಬರುವ ವಾಹನಗಳು ಅಪಘಾತ ಕ್ಕೊಳಗಾಗುವ ಸಂಭವವಿದ್ದು ಹಣಕ್ಕಾಗಿ ಇಂತಹ ತಿರುವು ಸೃಷ್ಟಿಸಿ ಹೆಣ ಉರುಳಿಸುವ ಘೋರ ಕೃತ್ಯಕ್ಕೆ ಹೆದ್ದಾರಿ ಪ್ರಾಧಿಕಾರ ಹಾಗೂ ರಸ್ತೆ ಗುತ್ತಿಗೆದಾರರು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ರಸ್ತೆಯನ್ನೇ ನಿರ್ಮಿಸದೆ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಹೆದ್ದಾರಿ ಪ್ರಾಧಿಕಾರದ ಧನದಾಹಿ ಲಾಲಸೆಗೆ ಸೋಮನಹಳ್ಳಿ ಹಾಗೂ ಕಗ್ಗಲೀಪುರ ವ್ಯಾಪ್ತಿಯ ರೈತರು ಖಡಿವಾಣ ಹಾಕಿದ್ದು ಟೋಲ್ ಸಂಗ್ರಹ ಮಾಡದಂತೆ ತಡೆದು ಬೋರ್ಡ್ ಹಾಕಿದ್ದಾರೆ. ಸಾಕಷ್ಟು ಅವಾಂತರಗಳ ಗೂಡಾಗಿರುವ ಈ ರಸ್ತೆಯು ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಯೋಗ್ಯವಲ್ಲ. ಇಂತಹ ಅಪಾಯಕಾರಿ ರಸ್ತೆಯಲ್ಲಿ ಸಾಗಲು ಹಣ ಏಕೆ ಕೊಡಬೇಕು ಎಂದು ಪ್ರಶ್ನಿಸಿರುವ ಅವರು ಈ ರಸ್ತೆಯ ಮೂಲ ಯೋಜನೆಯ ನಕ್ಷೆ ಯನ್ನು ಪರಿಶೀಲಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚಿಸುತ್ತಿದ್ದೇವೆ. ನೂತನ ಸಂಸದರಾದ ಡಾ. ಮಂಜುನಾಥ್ ರವರಿಗೆ ಈ ಬಗ್ಗೆ ದೂರು ನೀಡಿ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.