ಕಾವೇರಿ ನೀರಿಗಾಗಿ ಹೆದ್ದಾರಿ ಬಂದ್: ಸರ್ಕಾರದ ವಿರುದ್ಧ ಆಕ್ರೋಶ
KannadaprabhaNewsNetwork | Published : Oct 11 2023, 12:45 AM IST
ಕಾವೇರಿ ನೀರಿಗಾಗಿ ಹೆದ್ದಾರಿ ಬಂದ್: ಸರ್ಕಾರದ ವಿರುದ್ಧ ಆಕ್ರೋಶ
ಸಾರಾಂಶ
ಹೊಸಕೋಟೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಲ್ಲಿಯ ಕನ್ನಡ ಚಳವಳಿ ವಾಟಾಳ್ ಪಕ್ಷ, ವಿವಿಧ ಕನ್ನಡ ಪರ ಹಾಗೂ ದಲಿತ ಪರ ಸಂಘಟನೆಗಳು ಬೆಂಬಲ ಸೂಚಿಸಿ ಟೋಲ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಹೊಸಕೋಟೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಲ್ಲಿಯ ಕನ್ನಡ ಚಳವಳಿ ವಾಟಾಳ್ ಪಕ್ಷ, ವಿವಿಧ ಕನ್ನಡ ಪರ ಹಾಗೂ ದಲಿತ ಪರ ಸಂಘಟನೆಗಳು ಬೆಂಬಲ ಸೂಚಿಸಿ ಟೋಲ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕಕ್ಕೆ ಅನ್ಯಾಯ ಆಗುವ ಕುರಿತು ಸುಪ್ರಿಂಕೋರ್ಟ್ ಗೆ ಸರ್ಕಾರ ಮನವರಿಕೆ ಮಾಡಿಕೊಡದ ಪರಿಣಾಮ ಪ್ರತಿ ದಿನ ಕಾವೇರಿ ನೀರು ತಮಿಳುನಾಡಿಗೆ ಹರಿಸುವಂತಾಗಿದೆ. ಇದರಿಂದ ಮಂಡ್ಯ, ಮೈಸೂರು ಭಾಗದ ರೈತರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಸರ್ಕಾರ ಕೂಡಲೆ ಕಾವೇರಿ ನೀರಿನ ವಾಸ್ತವ ಪರಿಸ್ಥಿತಿ ಸುಪ್ರಿಂಗೆ ಅರ್ಥೈಸಬೇಕಾಗಿದೆ. ಕಾವೇರಿ ನೀರಿನ ಪರಿಸ್ಥಿತಿಯನ್ನು ಅರಿತು ದೇಶದ ಪ್ರಧಾನಿಗಳು ಎರಡು ರಾಜ್ಯಗಳ ಮಧ್ಯ ಪ್ರವೇಶಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಾಟಾಳ್ ನಾಗರಾಜ್ ತಿಳಿಸಿದರು. ರಾಜ್ಯ ಸರ್ಕಾರ ಶಾಸನ ಸಭೆ ಕರೆಯಲಿ: ಕಾವೇರಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರದ ಮೇಲೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಒತ್ತಡ ಹಾಕಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೆ ಶಾಸನ ಸಭೆ ಕರೆಯುವ ಮೂಲಕ ಸರ್ವಾನುಮತದಿಂದ ಕಾವೇರಿ ನೀರಿನ ನಿರ್ಣಯ ಮಂಡಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಮೇಕೆದಾಟು ವಿಚಾರವಾಗಿ ಕೂಡ ತಮಿಳುನಾಡು ಖ್ಯಾತೆ ತೆಗೆಯಬಾರದು. ಎಲ್ಲಾ ವಿಚಾರಗಳ ನಿರ್ಣಯ ಮಂಡಿಸಿ ಕಾವೇರಿ ನೀರನ್ನು ಹರಿಸುವುದನ್ನು ನಿಲ್ಲಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. ಕನ್ನಡ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿ, ಕಾವೇರಿ ನೀರಿಗಾಗಿ ರೈತರು, ಸಂಘಟನೆಗಳು ಹಲವಾರು ದಿನಗಳಿಂದ ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಪ್ರತಿಭಟನೆಗೆ ಸೊಪ್ಪು ಹಾಕುತ್ತಿಲ್ಲ. ಬದಲಾಗಿ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ವಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಿದ್ದರು. ಆದರೆ ಈಗ ಕಾವೇರಿ ನೀರನ್ನು ನಿಲ್ಲಿಸಲು ಆಗದಿರುವುದು ತಲೆತಗ್ಗಿಸುವ ವಿಚಾರ. ಆದ್ದರಿಂದ ಕಾವೇರಿ ನೀರು ನಮ್ಮ ಹಕ್ಕು ಮೊದಲು ನಮಗೆ ದಕ್ಕಬೇಕು ಎಂದರು. ಬಾಕ್ಸ್ ......... ಹೋರಾಟಗಾರರ ಬಂಧನ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಟೋಲ್ ಬಳಿ ನಡೆದ ಪ್ರತಿಭಟನೆ ವೇಳೆ ಹೊಸಕೋಟೆ ಟೋಲ್ ಪ್ಲಾಜಾಗೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ನೂರಾರು ಪೊಲೀಸರು ವಾಟಾಳ್ ನಾಗರಾಜ್ ಸೇರಿದಂತೆ ಪ್ರತಿಭಟನಾಕಾರರನ್ನು ಬಂಧಿಸಿ ಬಸ್‌ನಲ್ಲಿ ಕರೆದೊಯ್ದರು. ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುವ ಸರ್ಕಾರದ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ಬಾಕ್ಸ್ .......... ಪಕ್ಷಾತೀತವಾಗಿ ಸ್ಪಂದಿಸಿ ಕಾವೇರಿ ನೀರಿನ ವಿಚಾರವಾಗಿ ಯಾವೊಬ್ಬ ಶಾಸಕರಾಗಿ, ಸಂಸದರಾಗಲಿ, ಎಂಎಲ್ಸಿಗಳಾಗಲಿ, ರಾಜ್ಯಸಭಾ ಸದಸ್ಯರಾಗಲಿ ಪಕ್ಷ ಭೇದ ಮರೆತು ಕಾವೇರಿ ಹೋರಾಟಕ್ಕೆ ಕೈ ಜೋಡಿಸಿ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕು. ಪ್ರಮುಖವಾಗಿ ರಾಜ್ಯದಿಂದ ಗೆದ್ದಿರುವ ಸಂಸದರು ಕಾವೇರಿ ವಿಚಾರವಾಗಿ ಕೇಂದ್ರದ ಬಳಿ ಮೊದಲು ಧ್ವನಿ ಎತ್ತಬೇಕು ಎಂದು ಕರ್ನಾಟಕ ಮಹಾಜನಸೇನೆ ರಾಜ್ಯಾಧ್ಯಕ್ಷ ಜನಸೇನೆ ಮಂಜುನಾಥ್ ತಿಳಿಸಿದರು. ಬಾಕ್ಸ್ ........... ರಾಜ್ಯದಲ್ಲಿ ಬರ ಪರಿಸ್ಥಿತಿ ರಾಜ್ಯದಲ್ಲಿ ಸಕಾಲಕ್ಕೆ ಬಾರದ ಮಳೆಯಿಂದ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಇದರ ನಡುವೆ ಕುಡಿಯಲು ನೀರಿಲ್ಲದೆ ಪರಿತಪಿಸುವ ಸಂಧರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರಿಂಕೋರ್ಟ್ ಹಾಗೂ ಕಾವೇರಿ ನೀರು ಪ್ರಾಧೀಕಾರ ಸೂಚಿಸಿರುವುದು ಸಮಂಜಸವಲ್ಲ. ಸರ್ಕಾರ ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ವಿರುದ್ದ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಭೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ತಿಳಿಸಿದರು. ಬಾಕ್ಸ್........ ಇಂದು ರಾಜಭವನ ಮುತ್ತಿಗೆ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ತಮಿಳುನಾಡಿನಲ್ಲಿ ಅ.11ರಂದು ಹೋರಾಟ ಹಮ್ಮಿಕೊಂಡಿದೆ. ನಾವು ಕೂಡ ಕನ್ನಡ ಪರ ಸಂಘಟನೆಗಳ ವತಿಯಿಂದ ನೀರು ಬಿಡದಂತೆ ಒತ್ತಾಯಿಸಿ ರಾಜಭವನ ಮುತ್ತಿಗೆಯನ್ನು ಹಮ್ಮಿಕೊಂಡಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು. ಫೋಟೋ: 10 ಹೆಚ್‌ಎಸ್‌ಕೆ 1 ಹೊಸಕೋಟೆ ಟೋಲ್ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ವಿವಿಧ ಕನ್ನಡ ಪರ, ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಾಯಿತು. ಫೋಟೋ: 10 ಹೆಚ್‌ಎಸ್‌ಕೆ 5 ಟೋಲ್ ಮುತ್ತಿಗೆ ವೇಳೆ ವಾಟಾಳ್ ನಾಗರಾಜ್ ಅವರನ್ನು ಬಸ್‌ನಲ್ಲಿ ಬಂಧಿಸಿ ಕರೆದೊಯ್ದ ಪೊಲೀಸರು.