ಲಾಠಿಚಾರ್ಜ್‌ ಖಂಡಿಸಿ ಇಂದು ಹೆದ್ದಾರಿ ತಡೆ

| Published : Dec 12 2024, 12:30 AM IST

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ಡಿ.10 ರಂದು ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿಚಾರ್ಜ್‌ ಮಾಡಿರುವುದನ್ನು ಖಂಡಿಸಿ ಡಿ.12 ರಂದು ತಾಲೂಕಿನ ಕೆ.ಚಂದರಗಿಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಾರುತಿ ಕೊಪ್ಪದ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ಡಿ.10 ರಂದು ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿಚಾರ್ಜ್‌ ಮಾಡಿರುವುದನ್ನು ಖಂಡಿಸಿ ಡಿ.12 ರಂದು ತಾಲೂಕಿನ ಕೆ.ಚಂದರಗಿಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಾರುತಿ ಕೊಪ್ಪದ ಹೇಳಿದರು.

ಪ್ರೆಸ್‌ಕ್ಲಬ್‌ದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 4 ವರ್ಷಗಳಿಂದ ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿಗಳಿಗೆ 2ಎ ಮಸಲಾತಿ ಕೇಂದ್ರದಲ್ಲಿ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಲು ಒತ್ತಾಯಿಸಿ ನಿರಂತರ ಹೋರಾಟ ಮಾಡುತ್ತ ಬಂದಿದ್ದು, ಹಿಂದಿನ ಬಿಜೆಪಿ ಸರ್ಕಾರ 2ಡಿಗೆ ಸೇರಿಸಿತ್ತು. ಅದು ಜಾರಿಯಾಗುವುದರೊಳಗೆ ವಿಧಾನಸಭಾ ಚುನಾವಣೆ ನೀತಿ ಸಂಹಿತಿ ಹಿನ್ನೆಲೆಯಲ್ಲಿ ಅನುಷ್ಠಾನವಾಗಲಿಲ್ಲ. ನಂತರ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಸಾಕಷ್ಟು ಹೋರಾಟ ಮಾಡಿದರು ಸ್ಪಂದಿಸದ ಕಾರಣ ಡಿ.11 ರಂದು ಟ್ರ್ಯಾಕ್ಟರ್ ರ‍್ಯಾಲಿಯೊಂದಿಗೆ ಪ್ರತಿಭಟನೆಗೆ ಮುಂದಾದಾಗ ಅದಕ್ಕೆ ಒಪ್ಪಿಗೆ ಕೊಡದೇ ಹೋರಾಟ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ದೂರಿದರು.ಶಾಂತಯುತವಾದ ಹೋರಾಟದ ವೇದಿಕೆಗೆ ಸಿಎಂ ಸಿದ್ದರಾಮಯ್ಯನವರು ಬಂದು ಮನವಿ ಸ್ವೀಕರಿಸಲು ಪ್ರತಿಭಟನಾಕಾರರು ವಿನಂತಿಸಿದರೂ ಮುಖ್ಯಮಂತ್ರಿಗಳ ಹೋರಾಟದ ಸ್ಥಳಕ್ಕೆ ಬಾರದೇ ಇರುವುದರಿಂದ ಸುವರ್ಣಸೌಧಕ್ಕೆ ಮನವಿ ನೀಡಲು ಹೋರಟಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ್ದು ಖಂಡನೀಯ. ಸಮಾಜದ ಶ್ರೀಗಳ ಮತ್ತು ಜನಪ್ರತಿನಿಧಿಗಳನ್ನು ಕೂಡಿಹಾಕಿ ಪ್ರತಿಭಟನೆ ತಡೆದಿದ್ದು ಇದು ಸರ್ಕಾರಕ್ಕೆ ಶೋಭೆ ತರವಂತದ್ದಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಮಾಜದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ವೀರರಾಣಿ ಚನ್ನಮ್ಮ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಫ್.ಬಸಿಡೋಣಿ, ನ್ಯಾಯವಾದಿ ಪಿ.ಎಫ್.ಪಾಟೀಲ, ವೈ.ಎಚ್. ಪಾಟೀಲ, ಜಿ.ವಿ.ನಾಡಗೌಡ್ರ ಸೇರಿದಂತೆ ಹಲವರಿದ್ದರು.ಸರ್ಕಾರದ ಹೋರಾಟ ಹತ್ತಿಕ್ಕುವ ಮತ್ತು ಲಾಠಿಚಾರ್ಜ್‌ ಮಾಡಿರುವುದನ್ನು ಖಂಡಿಸಿ ಡಿ.12 ರಂದು ಬೆಳಗ್ಗೆ 10 ಗಂಟೆಗೆ ಕೆ.ಚಂದರಗಿಯ ಹೆದ್ದಾರಿ ತಡೆ ಪ್ರತಿಭಟನೆಗೆ ರಾಮದುರ್ಗ ತಾಲೂಕಿನ ಪಂಚಮಸಾಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು.

-ಮಾರುತಿ ಕೊಪ್ಪದ, ತಾಲೂಕು ಅಧ್ಯಕ್ಷರು.