ಮೋಟೆಬೆನ್ನೂರು ಬಳಿ ಹೆದ್ದಾರಿಯ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

| Published : Jul 22 2025, 12:01 AM IST

ಸಾರಾಂಶ

ಮೇಲ್ಸೇತುವೆ ಕಾಮಗಾರಿ ಪೂರ್ತಿಗೊಳ್ಳದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗಿದ್ದಲ್ಲದೇ ಸಾಕಷ್ಟು ಸಾವು- ನೋವುಗಳಿಗೆ ಕಾರಣವಾಗಿತ್ತು.

ಬ್ಯಾಡಗಿ: ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೇಲ್ಸೇತುವೆ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಸರ್ವೀಸ್ ರಸ್ತೆ ನಿರ್ಮಿಸುವುದು, ಸೇತುವೆಯ ಕೆಳಭಾಗದಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದೂ ಸೇರಿದಂತೆ ವಿವಿಧ ಕಾರಣಗಳಿಗೆ ಮೇಲ್ಸೇತುವೆ ಕಾಮಗಾರಿಗೆ ಕುಂಟುತ್ತಾ ಸಾಗಿತ್ತು. ಆದರೆ ಇಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕ ಬೆನ್ನಲ್ಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದು ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಅಪಘಾತ ಮುಕ್ತ ಸಂಚಾರ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮೇಲ್ಸೇತುವೆ ಕಾಮಗಾರಿ ಪೂರ್ತಿಗೊಳ್ಳದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗಿದ್ದಲ್ಲದೇ ಸಾಕಷ್ಟು ಸಾವು- ನೋವುಗಳಿಗೆ ಕಾರಣವಾಗಿತ್ತು. ಅಲ್ಲದೇ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸುವ ವಾಹನಗಳಿಗೂ ದಟ್ಟಣೆ ಇಲ್ಲದೇ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು. ಎಲ್ಲ ವ್ಯಾಜ್ಯಗಳು ಮುಕ್ತಾಯ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕೋರ್ಟ್‌ಗಳಲ್ಲಿ ದಾವೆಗಳನ್ನು ಹೂಡಿದ್ದರು. ಆದರೆ ಇದೀಗ ಎಲ್ಲ ವಾಜ್ಯಗಳು ಮುಗಿದು ಕಾಮಗಾರಿ ಚಾಲನೆ ದೊರೆತಿದ್ದು, ಇದೀಗ ಹಾವೇರಿಯಿಂದ ರಾಣಿಬೆನ್ನೂರು ಕಡೆಗಿನ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಸ್ಪಿ ಯಶೋದಾ ವಂಟಗೋಡಿ, ಜಿಪಂ ಸಿಇಒ ರುಚಿ ಬಿಂದಲ್, ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ ಗ್ರಾಮದ ಮುಖಂಡ ಶಿವಕುಮಾರ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.