ಸಾರಾಂಶ
ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ವೇಗ ಪಡೆಯುತ್ತಿದೆ. ಈ ಹೆದ್ದಾರಿ ಕಾಮಗಾರಿಯಿಂದಾಗಿ ಸಾಣೂರು-ಬೆಳ್ವಾಯಿ ನಡುವೆ ಅನಾದಿಕಾಲದಿಂದಲೂ ಕಾಣಸಿಗುತ್ತಿದ್ದ ನೀರ ಚಿಲುಮೆಯು ಇನ್ನು ಮುಂದೆ ಕಾಣಸಿಗದು. ಯಾಕೆಂದರೆ ಹೆದ್ದಾರಿ ಕಾಮಗಾರಿ ವೇಳೆ ಈ ಪ್ರದೇಶ ಸಂಪೂರ್ಣ ಮಾಯವಾಗಲಿದೆ.ಆಡು ಭಾಷೆಯಲ್ಲಿ ಚಿಲುಮೆ ಪ್ರದೇಶವನ್ನು ಚಿಲಿಂಬಿ ಎಂದು ಕರೆಯುತ್ತಾರೆ.
* ಈ ಪ್ರದೇಶದ ವೈಶಿಷ್ಟ್ಯಎತ್ತರದ ಬೆಟ್ಟ ಪ್ರದೇಶದಿಂದ ನೀರು ಹರಿದು ಬೇಸಿಗೆಯಲ್ಲೂ ಬತ್ತದೆ ಕೃಷಿ ಭೂಮಿಗೆ ಹರಿದು ಹೋಗುತಿತ್ತು. ಅದರಲ್ಲೂ ವಾಹನಗಳಲ್ಲಿ ಸಾಗುವ ಪ್ರಯಾಣಿಕರು, ಪ್ರವಾಸಿಗರು, ದನಗಳು, ಸಾಕುಪ್ರಾಣಿಗಳು ಈ ಪ್ರದೇಶದಲ್ಲಿ ದಣಿವಾರಿಸಿ, ಆಹಾರ ಸೇವಿಸುತ್ತಾ ಒಂದಿಷ್ಟು ಹೊತ್ತು ಕಾಲ ಕಳೆಯುತ್ತಿದ್ದರು. ಈ ಪ್ರದೇಶವು ಬೆಟ್ಟ ಪ್ರದೇಶವಾಗಿದ್ದು, ಎತ್ತರ ಪ್ರದೇಶದಲ್ಲಿ ಮಳೆಗಾಲದ ವೇಳೆ ಇಂಗಿದ ನೀರು ವರ್ಷದ ಹನ್ನೆರಡು ತಿಂಗಳು ಲಭ್ಯವಾಗುತ್ತದೆ.
* ನೀರಿನ ಅಸ್ತಿತ್ವ ಉಳಿಸಲು ಮನವಿಈ ಹೆದ್ದಾರಿ ಪಕ್ಕದಲ್ಲಿ ನೀರಿನ ಹರಿವಿದ್ದ ಕಾರಣ ನೀರಿನ ಅಸ್ತಿತ್ವ ಉಳಿಸಲು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಸ್ಥಳೀಯರು ಈ ನೀರ ಚಿಲುಮೆಗೆ ದಂಡೆ ಕಟ್ಟಿದ್ದಾರೆ.
* ರಸ್ತೆ ಕಾಮಗಾರಿಗೆ ವೇಗಈಗಾಗಲೇ ಕಾರ್ಕಳ ಬೈಪಾಸ್‌ನಿಂದ ಸಾಣೂರು-ಬೆಳ್ವಾಯಿ-ಕೆಸರುಗದ್ದೆ ಮೂಲಕ ಅಲಂಗಾರು, ಪುತ್ತಿಗೆ, ಮೈಟ್ ಕಾಲೇಜು ದ್ವಾರದ ಮೂಲಕ ಗುರುಪುರ-ಬಿಕರ್ನಕಟ್ಟೆ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ.
* ಹೆದ್ದಾರಿ ಕಾಮಗಾರಿ ವೀಕ್ಷಿಸಿದ ವಿ.ಸುನೀಲ್ ಕುಮಾರ್:ಪುಲ್ಕೇರಿ ಬೈಪಾಸ್ ಬಳಿಯಿಂದ ಮುರತಂಗಡಿ ಪರಿಸರದ ಸಾಣೂರು ಪದವಿಪೂರ್ವ ಕಾಲೇಜು ವರೆಗೆ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿಯನ್ನು ಮಾಜಿ ಸಚಿವ ಹಾಗೂ ಶಾಸಕ ವಿ.ಸುನೀಲ್ ಕುಮಾರ್ ಪರಿಶೀಲನೆ ನಡೆಸಿದರು.ಫುಲ್ಕೇರಿ ಬೈಪಾಸ್ ವೃತ್ತದಿಂದ ಸಾಣೂರು ರಾಮಮಂದಿರ ವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರೋಡ್ ನಿರ್ಮಾಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಮಹಮ್ಮದ್ ಅಜ್ಮಿ ಅವರಿಗೆ ಶಾಸಕ ಸುನೀಲ್ ಕುಮಾರ್ ಹೇಳಿದರು.ಸಾಣೂರು ಯುವಕ ಮಂಡಲ ಅಧ್ಯಕ್ಷ ಶ್ರೀಪ್ರಸಾದ್ ಪೂಜಾರಿ, ಹೆದ್ದಾರಿಗೆ ಕೂಡಲೇ ತಡೆಗೋಡೆ ನಿರ್ಮಾಣ ಮಾಡದಿದ್ದರೆ ರಸ್ತೆಯ ಅಂಚಿನಲ್ಲಿರುವ ಹೈ ಟೆನ್ಶನ್ ಟವರ್ ಮತ್ತು ಒಂದು ಲಕ್ಷ ಲೀಟರ್ ಸಾಮರ್ಥ್ಯದ ಎರಡು ಓವರ್ ಹೆಡ್ ಟ್ಯಾಂಕ್‌ಗಳಿಗೂ ಅಪಾಯವಾಗುವ ಸಾಧ್ಯತೆ ಇದೆ ಎಂದು ಶಾಸಕರ ಗಮನಸೆಳೆದರು.ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ ಜೈನ್, ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾಣೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್, ಪಂಚಾಯಿತಿ ಸದಸ್ಯರಾದ ಕರುಣಾಕರ ಕೋಟ್ಯಾನ್, ಮಾಜಿ ತಾ.ಪಂ. ಸದಸ್ಯರಾದ ಪ್ರವೀಣ ಕೋಟ್ಯಾನ್, ಪ್ರಮುಖರಾದ ಅಶೋಕ್ ಶೆಟ್ಟಿ, ರತ್ನಾಕರ ಕಾಮತ್, ರಾಜೇಶ್, ರೋಮನ್ ಪಿಂಟೋ, ಸತೀಶ್ ನಾಯಕ್, ರಮೇಶ್ ಸಾಲಿಯಾನ್, ಸಂತೋಷ್ ಸುವರ್ಣ, ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಕನ್‌ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
-----------------ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಣ್ಣಿನ ಗಿಡಗಳನ್ನು ನೆಡುವ ಕಾರ್ಯ ಮಾಡಬೇಕಾಗಿದೆ. ಗಿಡಗಳ ಪೋಷಣೆಯನ್ನು ಸಾಣೂರು ಪ್ರದೇಶದ ಹನ್ನೆರಡು ಮಂಡಳಿಗಳೇ ನಿರ್ವಹಿಸಲಿದೆ.। ಸಾಣೂರು ನರಸಿಂಹ ಕಾಮತ್, ಹೆದ್ದಾರಿ ಹೋರಾಟ ಸಮಿತಿ ಸಾಣೂರು.------------------
ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮರಗಳು, ಜಲಮೂಲಗಳನ್ನು ಮುಚ್ಚಿಸುತ್ತಿರುವುದು ದುರಂತ. ಕಾಡು ಕಡಿದು ಬರಗಾಲಕ್ಕೆ ಆಹ್ವಾನ ನೀಡುತ್ತಿದೆ. ಸಾಣೂರಿನ ನೀರಿನ ಚಿಲುಮೆಯ ಅಸ್ತಿತ್ವ ಉಳಿಸಲಿ.। ಶರತ್ ಕಾರ್ಕಳ, ನಾಗರಿಕರು ಕಾರ್ಕಳ--------------------
ಹೆದ್ದಾರಿ ಪಕ್ಕದಲ್ಲಿರುವ ನೀರಿನ ಚಿಲುಮೆ ತೆಗೆಯುವುದು ಅನಿವಾರ್ಯ. ಚಿಲಿಂಬಿ ಗುಡ್ಡದ ಭಾಗವನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಚಿಲುಮೆ ಭಾಗಗಳಲ್ಲಿ ಎರಡು ಮೋರಿ ಹಾಕಲಾಗುವುದು.। ಅಲಂದರಿ ಬಾಲಜಿ ಕನ್ಸಲ್ಟಿಂಗ್ ಎಂಜಿನಿಯರ್